ಬುಧವಾರ, ಮೇ 25, 2022
24 °C
ಇಂಧನ ದರ ಏರಿಕೆ, ರಾಜ್ಯಸಭೆಯಲ್ಲಿ ಕಲಾಪಕ್ಕೆ ಅಡ್ಡಿ

ರಾಜ್ಯಸಭೆಯ ಇಡೀ ದಿನದ ಕಲಾಪ ನುಂಗಿದ ವಿರೋಧ ಪಕ್ಷಗಳ ಪ್ರತಿಭಟನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಇಂಧನ ದರ ಏರಿಕೆಯ ಬಗ್ಗೆ ಚರ್ಚೆ ನಡೆಯಬೇಕು ಎಂಬ ವಿರೋಧ ಪಕ್ಷಗಳ ಒತ್ತಾಯಕ್ಕೆ ಸರ್ಕಾರ ಮಣೆ ಹಾಕದ್ದರಿಂದ ವಿರೋಧ ಪಕ್ಷಗಳು ಗದ್ದಲ ಎಬ್ಬಿಸಿದವು. ಇದರಿಂದ ಸೋಮವಾರ ರಾಜ್ಯಸಭೆಯ ಕಲಾ‍ಪ ಎರಡು ಬಾರಿ ಮುಂದಕ್ಕೆ ಹೋಗಿ ಕೊನೆಗೆ ಇಡೀ ದಿನದ ಮಟ್ಟಿಗೆ ಕಲಾಪ ಬಲಿಯಾಯಿತು.

ಸೋಮವಾರ ಬಜೆಟ್‌ ಅಧಿವೇಶನದ ಎರಡನೇ ಅವಧಿಯ ಕಲಾಪ ಆರಂಭವಾಗುತ್ತಿದ್ದಂತೆಯೇ ನಿಗದಿತ ಕಲಾಪ ಸೂಚಿಯ ಬದಲಿಗೆ ಇಂಧನ ದರ ಏರಿಕೆಯನ್ನೇ ಮೊದಲಿಗೆ ಚರ್ಚೆಗೆ ಕೈಗೆತ್ತಿಕೊಳ್ಳಬೇಕು ಎಂದು ವಿರೋಧ ಪಕ್ಷಗಳ ಪಟ್ಟು ಹಿಡಿದವು. ಇದಕ್ಕೆ ಸಭಾಧ್ಯಕ್ಷರು ಒಪ್ಪಿಗೆ ಕೊಡಲಿಲ್ಲ. ಆಗ ಗದ್ದಲ ಉಂಟಾದ್ದರಿಂದ ಕಲಾಪವನ್ನು ಬೆಳಿಗ್ಗೆ 11 ಗಂಟೆಗೆ ಮುಂದೂಡಲಾಯಿತು.

ಮತ್ತೆ ಗದ್ದಲ ಮುಂದುವರಿದ ಕಾರಣ ಮಧ್ಯಾಹ್ನ 1ರ ವರೆಗೆ ಹಾಗೂ ಮತ್ತೊಮ್ಮೆ 1.30ರವರೆಗೆ ವಿಸ್ತರಿಸಲಾಯಿತು. ಮೂರನೇ ಬಾರಿಯೂ ಗದ್ದಲ ಮುಂದುವರಿದಿದ್ದರಿಂದ ಸಭಾಧ್ಯಕ್ಷರ ಸ್ಥಾನದಲ್ಲಿದ್ದ ವಂದನಾ ಚವಾಣ್‌ ಅವರು ಕಲಾಪವನ್ನು ಮಂಗಳವಾರಕ್ಕೆ ಮುಂದೂಡಿದರು.

ಖರ್ಗೆ ಮನವಿ: ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ನಿಲುವಳಿ ಸೂಚನೆ ಮಂಡಿಸಿ, ಈ ಮೊದಲು ನಿಗದಿಪಡಿಸಿದ  ಕಾರ್ಯಕಲಾಪದ ಬದಲಿಗೆ ಇಂಧನ ಬೆಲೆ ಏರಿಕೆಯ ಬಗ್ಗೆ ಚರ್ಚೆ ಆರಂಭಿಸಬೇಕು ಎಂದು ಕೋರಿದ್ದರು.

ಆದರೆ ಸಭಾಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಅವರು ಇದಕ್ಕೆ ಒಪ್ಪಲಿಲ್ಲ. ‘ಸ್ವಾಧೀನಪಡಿಸುವ ಮಸೂದೆಯ ಚರ್ಚೆಯ ಸಂದರ್ಭದಲ್ಲಿ ಅಥವಾ ಬಜೆಟ್‌ ಚರ್ಚೆಯ ವೇಳೆ ಇಂಧನ ಬೆಲೆ ಏರಿಕೆ ವಿಷಯವನ್ನು ಚರ್ಚಿಸಬಹುದು’ ಎಂದು  ಅಧ್ಯಕ್ಷರು ಹೇಳಿದ್ದಕ್ಕೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದವು. ಹೀಗಾಗಿ ಗದ್ದಲ ನಡೆಸಿದ್ದರಿಂಂದ ಇಡೀ ದಿನದ ಕಲಾಪಕ್ಕೆ ಅಡ್ಡಿ ಉಂಟಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು