ಮಂಗಳವಾರ, ಆಗಸ್ಟ್ 16, 2022
29 °C

ರಾಜ್ಯಸಭೆ: ಬಿಜೆಪಿಯಿಂದ ಪೀಯೂಷ್‌ ಗೋಯಲ್‌ ಸೇರಿ 16 ಅಭ್ಯರ್ಥಿಗಳ ಹೆಸರು ಪ್ರಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೇಂದ್ರ ಸಚಿವ ಪೀಯೂಷ್‌ ಗೋಯಲ್‌ ಅವರಿಗೆ ರಾಜ್ಯ ಸಭೆಗೆ ಸ್ಪರ್ಧಿಸಲು ಮಹಾರಾಷ್ಟ್ರದಿಂದ ಬಿಜೆಪಿ ಟಿಕೆಟ್‌ ನೀಡಿದೆ. ಜತೆಗೆ ರಾಜ್ಯಸಭೆ ಚುನಾವಣೆಗೆ 16 ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಭಾನುವಾರ ಪ್ರಕಟಿಸಿದೆ. ಇದರಲ್ಲಿ ಆರು ಅಭ್ಯರ್ಥಿಗಳು ಉತ್ತರ ಪ್ರದೇಶದವರು.

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಗೋಯಲ್ ಮತ್ತು ಅನಿಲ್ ಸುಖದೇವ್ ರಾವ್ ಬೋಂಡೆ ಅವರನ್ನು ಮಹಾರಾಷ್ಟ್ರದಿಂದ ಕಣಕ್ಕೆ ಇಳಿಸಲಾಗುವುದು ಎಂದು ಬಿಜೆಪಿ ಪ್ರಕಟಣೆ ತಿಳಿಸಿದೆ.

ಕರ್ನಾಟಕ, ಮಹಾರಾಷ್ಟ್ರ ಮತ್ತು ಬಿಹಾರದಿಂದ ತಲಾ ಇಬ್ಬರು, ಮಧ್ಯಪ್ರದೇಶ, ರಾಜಸ್ಥಾನ, ಉತ್ತರಾಖಂಡ ಹಾಗೂ ಹರಿಯಾಣದಿಂದ ತಲಾ ಒಬ್ಬ ಅಭ್ಯರ್ಥಿ ಹೆಸರನ್ನು ಪಕ್ಷ ಘೋಷಿಸಿದೆ.

ಹರಿಯಾಣದಿಂದ ಮಾಜಿ ಶಾಸಕ ಕ್ರಿಶನ್ ಲಾಲ್ ಪನ್ವಾರ್, ಮಧ್ಯಪ್ರದೇಶದಿಂದ ಕವಿತಾ ಪಾಟೀದಾರ್, ರಾಜಸ್ಥಾನದಿಂದ ಘನಶ್ಯಾಮ್ ತಿವಾರಿ, ಉತ್ತರಾಖಂಡದಿಂದ ಕಲ್ಪನಾ ಸೈನಿ, ಬಿಹಾರದಿಂದ ಸತೀಶ್ ಚಂದ್ರ ದುಬೆ ಮತ್ತು ಶಂಭು ಶರಣ್ ಪಟೇಲ್ ಅವರನ್ನು ಕಣಕ್ಕಿಳಿಸಿದೆ.

ಉತ್ತರ ಪ್ರದೇಶದಿಂದ, ರಾಜ್ಯ ಘಟಕದ ಅಧ್ಯಕ್ಷ ಲಕ್ಷ್ಮೀಕಾಂತ್ ವಾಜಪೇಯಿ, ಹಾಲಿ ರಾಜ್ಯಸಭಾ ಸದಸ್ಯ ಸುರೇಂದ್ರ ಸಿಂಗ್ ನಗರ್‌ ಮತ್ತು ಉತ್ತರಪ್ರದೇಶದ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮದ ಅಧ್ಯಕ್ಷ ಬೌಬುರಾಮ್ ನಿಶಾದ್ ಅವರನ್ನು ಕೂಡ ಕಣಕ್ಕಿಳಿಸಿದೆ. ಅಲ್ಲದೆ, ಇಬ್ಬರು ಮಹಿಳೆಯರಿಗೂ ಅವಕಾಶ ನೀಡಿದೆ. ಪಕ್ಷದ ರಾಜ್ಯ ಮಹಿಳಾ ವಿಭಾಗದ ಮಾಜಿ ಅಧ್ಯಕ್ಷೆ ದರ್ಶನಾ ಸಿಂಗ್‌ ಮತ್ತು ಗೋರಖ್‌ಪುರದ ಚೌರಿ ಚೌರಾ ಕ್ಷೇತ್ರದ ಮಾಜಿ ಶಾಸಕಿ ಸಂಗೀತಾ ಯಾದವ್ ಅವರನ್ನು ರಾಜ್ಯದಿಂದ ಕಣಕ್ಕಿಳಿಸಿದೆ.

ರಾಜ್ಯಸಭೆ ಸದಸ್ಯತ್ವದ ಅವಧಿ ಕೊನೆಗೊಳ್ಳುತ್ತಿರುವ ಕೇಂದ್ರ ಸಚಿವರಾದ ಮುಕ್ತಾರ್ ಅಬ್ಬಾಸ್ ನಖ್ವಿ ಮತ್ತು ವಿನಯ್ ಸಹಸ್ರಬುದ್ಧೆ ಹಾಗೂ ಹರಿಯಾಣದಿಂದ ರಾಜ್ಯಸಭೆ ಸದಸ್ಯರಾಗಿದ್ದ ಬಿಜೆಪಿ ಪ್ರಧಾನ ಕಾರ್ಯದರ್ಶಿ ದುಷ್ಯಂತ್ ಗೌತಮ್ ಅವರ ಹೆಸರು ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಇಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು