ಗುರುವಾರ , ಆಗಸ್ಟ್ 18, 2022
24 °C

ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಿದ್ದಕ್ಕೆ ಅತ್ಯಾಚಾರ: ತನಿಖೆಗೆ ಸಂತ್ರಸ್ತೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಕುಟುಂಬದವರು ಬಿಜೆಪಿಯನ್ನು ಬೆಂಬಲಿಸಿದ ಕಾರಣಕ್ಕೆ ತಮ್ಮ ಮೇಲೆ ಟಿಎಂಸಿ ಕಾರ್ಯಕರ್ತರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಈ ಘಟನೆ ಮತ್ತು ಚುನಾವಣೋತ್ತರ ನಡೆದ ಎಲ್ಲಾ ಹಿಂಸಾಚಾರಗಳ ಬಗ್ಗೆ ಎಸ್‌ಐಟಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ 60 ವರ್ಷ ವಯಸ್ಸಿನ ಒಬ್ಬ ಮಹಿಳೆ ಹಾಗೂ 17 ವರ್ಷದ ಬಾಲಕಿಯೊಬ್ಬರು ಸುಪ್ರೀಂ ಕೋರ್ಟ್‌ ಮೊರೆಹೋಗಿದ್ದಾರೆ.

‘ಆರು ವರ್ಷ ವಯಸ್ಸಿನ ನನ್ನ ಮೊಮ್ಮಗನ ಮುಂದೆ ಮೇ 4ರಂದು ಮಧ್ಯರಾತ್ರಿಯ ಸಮಯದಲ್ಲಿ ಟಿಎಂಸಿ ಕಾರ್ಯಕರ್ತರು ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಆಡಳಿತ ಪಕ್ಷವನ್ನು ವಿರೋಧಿಸಿದವರ ವಿರುದ್ಧ ರಾಜ್ಯದಾದ್ಯಂತ ಯಾವ ಸ್ವರೂಪದ ಹಿಂಸಾಚಾರ ನಡೆದಿದೆ ಎಂಬುದಕ್ಕೆ ಈ ಘಟನೆ ಜ್ವಲಂತ ಉದಾಹರಣೆ. ಮೇ 3ರಂದು ಚುನಾವಣಾ ಫಲಿತಾಂಶ ಘೋಷಣೆಯಾದ ನಂತರ, ಹೆಚ್ಚಾಗಿ ಟಿಎಂಸಿ ಕಾರ್ಯಕರ್ತರನ್ನೇ ಒಳಗೊಂಡಿದ್ದ, 100ರಿಂದ 200 ಮಂದಿಯ ಗುಂಪು ನನ್ನನ್ನು ಸುತ್ತುವರಿದು, ಕುಟುಂಬಸಹಿತವಾಗಿ ಮನೆಯನ್ನು ಬಿಟ್ಟುಹೋಗುವಂತೆ ಒತ್ತಾಯಿಸಿತು. ಬಿಜೆಪಿ ಬೆಂಬಲಿಗರ ಮನೆಗಳಿಗೆ ಬಾಂಬ್‌ಗಳನ್ನು ಎಸೆಯುತ್ತಾ ಮನೆಗಳನ್ನು ಸುಟ್ಟುಹಾಕಿತು. ಜನರಿಗೆ ದೈಹಿಕ ಹಿಂಸೆ ನೀಡಲಾಯಿತು. ಮನೆಗಳಲ್ಲಿನ ಒಡವೆಗಳನ್ನು ಕದ್ದೊಯ್ದರು’ ಎಂದು 60 ವರ್ಷದ ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.

ವಿರೋಧಿ ರಾಷ್ಟ್ರಗಳ ನಾಗರಿಕರನ್ನು ಭಯಭೀತಗೊಳಿಸಲು ಮಹಿಳೆಯರ ಮೇಲೆ ಅತ್ಯಾಚಾರದ ಅಸ್ತ್ರವನ್ನು ಬಳಸಿದ ಉದಾಹರಣೆಗಳು ಇತಿಹಾಸದಲ್ಲಿ ಸಾಕಷ್ಟಿವೆ. ಆದರೆ, ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಕಾರಣಕ್ಕೆ, ಮಹಿಳೆ ಅಥವಾ ಅವಳ ಕುಟುಂಬದ ವಿರುದ್ಧ ಇಂಥ ಕ್ರೂರ ಕೃತ್ಯಗಳು ನಡೆದ ಉದಾಹರಣೆಗಳಿಲ್ಲ ಎಂದು ಅವರು ಹೇಳಿದ್ದಾರೆ.

ಆಡಳಿತ ಮತ್ತು ಪೊಲೀಸರ ನಿಷ್ಕ್ರಿಯತೆಯು ಇಂಥ ಕೃತ್ಯಗಳಿಗೆ ಪರೋಕ್ಷ ಪ್ರೋತ್ಸಾಹ ನೀಡಿದ್ದಷ್ಟೇ ಅಲ್ಲ, ಅತ್ಯಾಚಾರಕ್ಕೆ ಒಳಗಾದವರು ದೂರು ನೀಡಲು ಹೋದರೆ ಅವರನ್ನು ಅಪಮಾನಿಸಿರುವುದು ಆಘಾತಕಾರಿಯಾಗಿದೆ. ತನ್ನ ಅಳಿಯನು ಘಟನೆಯ ಬಗ್ಗೆ ದೂರು ನೀಡಲು ಹೋದಾಗ ಪೊಲೀಸರು ದೂರು ದಾಖಲಿಸಲು ನಿರಾಕರಿಸಿದರು. ಎಫ್‌ಐಆರ್‌ ದಾಖಲಿಸುವಂತೆ ಸೊಸೆಯು ಹಟ ಹಿಡಿದಾಗ, ಐವರು ಆರೋಪಿಗಳಲ್ಲಿ ಒಬ್ಬ ವ್ಯಕ್ತಿಯ ವಿರುದ್ಧ ಮಾತ್ರ ದೂರು ದಾಖಲಿಸಿದ್ದಾರೆ. ತಮ್ಮನ್ನು ಆ ನಂತರ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, ಅತ್ಯಾಚಾರ ನಡೆದಿರುವುದು ತಪಾಸಣೆಯಿಂದ
ದೃಢಪಟ್ಟಿದೆ ಎಂದು ಮಹಿಳೆ ಹೇಳಿದ್ದಾರೆ.

‘ನಿನ್ನ ಇತರ ಪುತ್ರಿಯರೂ ಇದೇ ಸ್ಥಿತಿಯನ್ನು ಎದುರಿಸಬೇಕಾದೀತು ಎಂದು ಪೊಲೀಸರು ಬೆದರಿಕೆ ಹಾಕುತ್ತಿದ್ದಾರೆ. ಆದ್ದರಿಂದ ಘಟನೆಯ ವಿಚಾರಣೆಯನ್ನು ಪಶ್ಚಿಮ ಬಂಗಾಳದಿಂದ ಬೇರೆ ರಾಜ್ಯಕ್ಕೆ ವರ್ಗಾಯಿಸಬೇಕು’ ಎಂದು ಮಹಿಳೆ ಮನವಿ ಮಾಡಿದ್ದಾರೆ.

ಟಿಎಂಸಿ ಕಾರ್ಯಕರ್ತರು ಮೇ 9ರಂದು ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಿರುವ ಪರಿಶಿಷ್ಟ ಜಾತಿಗೆ ಸೇರಿದ 17 ವರ್ಷದ ಬಾಲಕಿಯೊಬ್ಬಳು, ಘಟನೆಯ ಬಗ್ಗೆ ಎಸ್‌ಐಟಿ ಅಥವಾ ಸಿಬಿಐ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಸ್ನೇಹಿತರ ಜತೆಗೆ ಮನೆಗೆ ಮರಳುತ್ತಿದ್ದಾಗ ಟಿಎಂಸಿಯ ನಾಲ್ವರು ಕಾರ್ಯಕರ್ತರು ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ. ನಮ್ಮ ಕುಟುಂಬದವರು ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ ಎಂಬ ಕಾರಣಕ್ಕೆ ಅತ್ಯಾಚಾರ ನಡೆಸಲಾಗಿದೆ ಎಂದು ಅವರು ರೋಪಿಸಿದ್ದಾರೆ.

ಹೈಕೋರ್ಟ್‌ ವಿಚಾರಣೆ ನಡೆಸುತ್ತಿದೆ: ಸರ್ಕಾರ

ಚುನಾವಣೋತ್ತರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸಬೇಕೆಂಬ ಮನವಿಗೆ ಪ್ರತಿಕ್ರಿಯೆ ನೀಡಿರುವ ಪಶ್ಚಿಮ ಬಂಗಾಳ ಸರ್ಕಾರವು, ‘ಹೈಕೋರ್ಟ್‌ ಈಗಾಗಲೇ ವಿಚಾರಣೆಯನ್ನು ಕೈಗೆತ್ತಿಕೊಂಡಿರುವುದರಿಂದ ಬೇರೆ ಯಾರ ಮಧ್ಯಪ್ರವೇಶದ ಅಗತ್ಯವೂ ಇಲ್ಲ. ಈ ಎಲ್ಲಾ ಆರೋಪಗಳು ಹಾದಿ ತಪ್ಪಿಸುವಂಥವು ಮತ್ತು ರಾಜಕೀಯ ಪ್ರೇರಿತವಾದವುಗಳು. ರಾಷ್ಟ್ರೀಯ ಮಹಿಳಾ ಆಯೋಗವು ಈಗಾಗಲೇ ತನಿಖೆ ಆರಂಭಿಸಿದ್ದು ರಾಜ್ಯ ಸರ್ಕಾರ ಪೂರ್ಣ ಸಹಕಾರ ನೀಡುತ್ತಿದೆ. ಎಫ್‌ಐಆರ್‌ ದಾಖಲಾಗಿದೆ, ಕೆಲವರನ್ನು ಬಂಧಿಸಲಾಗಿದೆ ಅಷ್ಟೇ ಅಲ್ಲದೆ ಸಂತ್ರಸ್ತರಿಗೆ ಪರಿಹಾರವನ್ನೂ ನೀಡಲಾಗಿದೆ’ ಎಂದಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು