ಮಂಗಳವಾರ, ಏಪ್ರಿಲ್ 20, 2021
32 °C

27 ವರ್ಷದ ಹಿಂದೆ ಅತ್ಯಾಚಾರ: ಮಗ, ಅಪ್ಪನ ಬಗ್ಗೆ ಕೇಳಿದಾಗ ಸಂತ್ರಸ್ತೆಯಿಂದ ಪ್ರಕರಣ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಶಹಜಹಾನ್ಪುರ (ಉತ್ತರ ಪ್ರದೇಶ): ಅತ್ಯಾಚಾರ ನಡೆದು 27 ವರ್ಷಗಳ ಬಳಿಕ ಮಗ ತಂದೆಯ ಹೆಸರು ಕೇಳಿದಾಗ ಮಹಿಳೆ ಇಬ್ಬರು ವ್ಯಕ್ತಿಗಳ ವಿರುದ್ಧ ಕೇಸ್ ದಾಖಲಿಸಿರುವ ಪ್ರಕರಣ ಉತ್ತರಪ್ರದೇಶದ ಶಹಜಹಾನ್ಪುರದಲ್ಲಿ ಬೆಳಕಿಗೆ ಬಂದಿದೆ.

12ನೇ ವಯಸ್ಸಿನಲ್ಲಿದ್ದಾಗ ಇಬ್ಬರು ಪುರುಷರು ಹಲವಾರು ಬಾರಿ ಅತ್ಯಾಚಾರ ನಡೆಸಿದ್ದರು. ಇದರಿಂದ, ಗರ್ಭಿಯಾಗಿದ್ದ ಸಂತ್ರಸ್ತೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದೀಗ, ಮಗ ತನ್ನ ತಂದೆಯ ಹೆಸರಿನ ಬಗ್ಗೆ ವಿಚಾರಿಸಿದಾಗ ನ್ಯಾಯಾಲಯದ ಆದೇಶದ ಮೇರೆಗೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಸುಮಾರು 27 ವರ್ಷಗಳ ಹಿಂದೆ ಸಂತ್ರಸ್ತೆ ತನ್ನ ಸಹೋದರಿ ಮತ್ತು ಸೋದರ ಮಾವನೊಂದಿಗೆ ನಗರದಲ್ಲಿ ವಾಸಿಸುತ್ತಿದ್ದರು. ಒಂದು ದಿನ ಆಕೆ ಒಬ್ಬಂಟಿಯಾಗಿ ಇದ್ದಾಗ ಮನೆಯೊಳಗೆ ಪ್ರವೇಶಿಸಿದ ನಾಕಿ ಹಸನ್ ಎಂಬಾತ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಕುಮಾರ್ ಶನಿವಾರ ಪಿಟಿಐಗೆ ತಿಳಿಸಿದ್ದಾರೆ.

ಮಹಿಳೆಯ ದೂರಿನ ಆಧಾರದ ಮೇಲೆ ದಾಖಲಾದ ಪೊಲೀಸ್ ವರದಿಯನ್ನು ಉಲ್ಲೇಖಿಸಿದ ಕುಮಾರ್, ಆಕೆಯ ಕಿರಿಯ ಸಹೋದರ ಗುಡ್ಡು ಕೂಡ ಆಕೆ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಹೇಳಿದರು. ಇಬ್ಬರೂ ಆರೋಪಿಗಳು ಅನೇಕ ಬಾರಿ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

ಅತ್ಯಾಚಾರ ನಡೆದಾಗ ಆಕೆಗೆ ಕೇವಲ 12 ವರ್ಷ ವಯಸ್ಸಾಗಿತ್ತು ಎಂದು ಎಸ್‌ಪಿ ತಿಳಿಸಿದ್ದಾರೆ.

ದೂರಿನ ಪ್ರಕಾರ, ಆಕೆ 13 ನೇ ವಯಸ್ಸಿನಲ್ಲಿ ಗರ್ಭಿಣಿಯಾಗಿದ್ದರು. 1994ರಲ್ಲಿ ಗಂಡು ಮಗುವಿಗೆ ಜನ್ಮ ನೀಡಿದರು. ಈ ಸಂದರ್ಭ, ಸೋದರ ಮಾವನಿಗೆ ವರ್ಗಾವಣೆಯಾಗಿದ್ದರಿಂದ ಶಿಶುವನ್ನು ಶಹಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಹುಟ್ಟೂರು ಉಧಂಪುರದ ಸಂಬಂಧಿ ಬಳಿ ಬಿಟ್ಟು ಅವರು ರಾಂಪುರಕ್ಕೆ ತೆರಳಿದ್ದರು.

ಬಳಿಕ, ಸಂತ್ರಸ್ತೆಯ ಸೋದರ ಮಾವ ಗಾಜಿಪುರ ಜಿಲ್ಲೆಯ ವ್ಯಕ್ತಿಯೊಬ್ಬನ ಜೊತೆಗೆ ಆಕೆಗೆ ಮದುವೆ ಮಾಡಿಸಿದ್ದ. ಆದರೆ, 10 ವರ್ಷಗಳ ನಂತರ, ಆಕೆಯ ಮೇಲೆ ಅತ್ಯಾಚಾರ ನಡೆದಿದೆ ಎಂದು ತಿಳಿದ ಪತಿ ವಿಚ್ಚೇದನ ನೀಡಿದ್ದಾನೆ. ಬಳಿಕ ಉಧಂಪುರಕ್ಕೆ ಮರಳಿದ ಮಹಿಳೆ ಮಗುವನ್ನು ಬೆಳೆಸಿದ್ದಾಳೆ.

ಈಗ ಬೆಳೆದು ದೊಡ್ಡವನಾಗಿರುವ ಮಗ ತಂದೆ ಬಗ್ಗೆ ವಿಚಾರಿಸಿದ್ದಾನೆ. ಹಾಗಾಗಿ, ಶುಕ್ರವಾರ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಇಬ್ಬರು ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣ ಕುರಿತಂತೆ ತನಿಖೆ ನಡೆಯುತ್ತಿದ್ದು, ಮಹಿಳೆಯ ಮಗನ ಡಿಎನ್‌ಎ ಪರೀಕ್ಷೆ ನಡೆಸಲಾಗುವುದು ಎಂದು ಎಸ್‌ಪಿ ತಿಳಿಸಿದ್ದಾರೆ.

ಮೊದಲಿಗೆ ದೂರು ದಾಖಲಿಸಿಕೊಳ್ಳಲು ಪೊಲೀಸರು ನಿರಾಕರಿಸಿದ್ದರಿಂದ ಮಹಿಳೆ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯದ ಆದೇಶದ ಬಳಿಕ ಇದೀಗ ಪ್ರಕರಣ ದಾಖಲಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು