ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಪರಿಸ್ಥಿತಿ ಚರ್ಚೆಗೆ ಸಂಸತ್ ವಿಶೇಷ ಅಧಿವೇಶನ; ಶಿವಸೇನಾ ಒತ್ತಾಯ

Last Updated 19 ಏಪ್ರಿಲ್ 2021, 10:36 IST
ಅಕ್ಷರ ಗಾತ್ರ

ಮುಂಬೈ: ದೇಶದ ಸದ್ಯದ ಕೋವಿಡ್ ಪರಿಸ್ಥಿತಿಯನ್ನು ಕುರಿತು ಚರ್ಚಿಸಲು ಕನಿಷ್ಠ ಎರಡು ದಿನದ ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆಯಬೇಕು ಎಂದು ಶಿವಸೇನಾ ಸಂಸದ ಸಂಜಯ್‌ ರಾವುತ್ ಸೋಮವಾರ ಒತ್ತಾಯಿಸಿದರು.

‘ನಾನು ಚರ್ಚಿಸಿದ ವಿವಿಧ ಮುಖಂಡರು ಪರಿಸ್ಥಿತಿ ಗಂಭೀರ ಎಂದೇ ಹೇಳಿದ್ದಾರೆ. ಈಗ ಹಿಂದೆಂದೂ ಇಲ್ಲದ, ಯುದ್ಧದಂತಹ ಹಾಗೂ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಹಾಸಿಗೆ ಇಲ್ಲ, ಆಮ್ಲಜನಕ ಇಲ್ಲ, ಲಸಿಕೆ ಇಲ್ಲ. ಇದು, ಏನೂ ಇಲ್ಲದ ಗೊಂದಲದ ಸ್ಥಿತಿ. ಪರಿಸ್ಥಿತಿ ಚರ್ಚೆಗೆ ವಿಶೇಷ ಅಧಿವೇಶನ ಕರೆಯುವುದು ಅಗತ್ಯವಾಗಿದೆ’ ಎಂದು ತಿಳಿಸಿದರು.

ಕೆಲವು ರಾಜ್ಯಗಳು ಕೋವಿಡ್‌ ಪ್ರಕರಣಗಳ ಸಂಖ್ಯೆಯನ್ನು ಗೌಪ್ಯವಾಗಿಡುತ್ತಿದ್ದವು. ಆದರೆ, ಈಗ ಅದು ನಿಂತಿದೆ. ಸಂಖ್ಯಾಸ್ಫೋಟದ ಬಳಿಕ ಈಗ ಕೆಲವು ರಾಜ್ಯಗಳಲ್ಲಿ ಚಿತೆಗೆ ಬೆಂಕಿ ಇಡುವ ದೃಶ್ಯಗಳು ಕಾಣಿಸಲು ತೊಡಗಿವೆ ಎಂದು ಯಾವುದೇ ಹೆಸರು ಉಲ್ಲೇಖಿಸದೇ‌ ಹೇಳಿದರು.

ಹಿಂದೆ ಸಾಕಷ್ಟು ಪ್ರಕರಣಗಳನ್ನು ಗೋಪ್ಯವಾಗಿಟ್ಟ ಪರಿಣಾಮ ಈಗ ನಿಯಂತ್ರಿಸಲಾಗದ ಪರಿಸ್ಥಿತಿಗೆ ತಲುಪಿದ್ದೇವೆ. ಕೋವಿಡ್ ಪ್ರಕರಣಗಳು ಹೀಗೇ ಹೆಚ್ಚುತ್ತಾ ಹೋದರೆ ದೇಶದಲ್ಲಿ ಅರಾಜಕತೆಯು ಮೂಡುತ್ತದೆ ಎಂದು ಎಚ್ಚರಿಸಿದರು.

‘ರಾವುತ್ ಹೇಳಿಕೆಗೆ ಪ್ರತಿಕ್ರಿಯಿಸಿದ ಮಹಾರಾಷ್ಟ್ರ ಬಿಜೆಪಿ ವಕ್ತಾರ ಕೇಶವ ಉಪಾಧ್ಯಾಯ ಅವರು, ಮಹಾರಾಷ್ಟ್ರದಲ್ಲಿಯೂ ಪ್ರಕರಣಗಳು ಹೆಚ್ಚುತ್ತಿವೆ. ನಿಮಗೆ ರಾಜ್ಯದ ಸ್ಥಿತಿ ಸ್ಪಷ್ಟವಾಗಿ ಅರ್ಥವಾಗಿದ್ದರೆ, ಪರಿಸ್ಥಿತಿ ಚರ್ಚಿಸಲು ವಿಶೇಷ ಅಧಿವೇಶನ ಕರೆಯಿರಿ’ ಎಂದು ಸಲಹೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT