ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ: ರಸ್ತೆ ವಿಸ್ತರಣೆಗಾಗಿ ಮರ ಕಡಿತ; ಅಪಾರ ಸಂಖ್ಯೆಯ ಪಕ್ಷಿಗಳ ಸಾವು

Last Updated 3 ಸೆಪ್ಟೆಂಬರ್ 2022, 6:23 IST
ಅಕ್ಷರ ಗಾತ್ರ

ಮಲಪ್ಪುರಂ: ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎ) ಕೈಗೊಂಡಿದ್ದ ರಸ್ತೆ ವಿಸ್ತರಣೆ ಕಾಮಗಾರಿ ವೇಳೆ ಮರವೊಂದನ್ನು ಕಡಿದಿದ್ದರಿಂದ ಅಪಾರ ಸಂಖ್ಯೆಯ ಪಕ್ಷಿಗಳು ಸಾವನ್ನಪ್ಪಿವೆ.

ಮಲಪ್ಪುರಂ ಜಿಲ್ಲೆಯ ರಂಡಥಾನಿ ಪ್ರದೇಶದಲ್ಲಿ ಘಟನೆ ನಡೆದಿದೆ. ಪ್ರಸ್ತುತ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಪರಿಸರ ಪ್ರೇಮಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಮರದಲ್ಲಿ ಅಪಾರ ಸಂಖ್ಯೆಯ ಪಕ್ಷಿಗಳು ನೆಲೆಸಿದ್ದವು. ಏಕಾಏಕಿ ಬುಲ್ಡೋಜರ್ ಬಳಸಿ ಮರವನ್ನು ಧರೆಗೆ ಉರುಳಿಸಲಾಗಿದೆ. ಈ ವೇಳೆ ದೊಪ್ಪನೆ ರಸ್ತೆಗೆ ಬಿದ್ದಿರುವ ಹಕ್ಕಿಗಳು ಸಾವನ್ನಪ್ಪಿವೆ. ಈ ಪೈಕಿ ಹಲವಾರು ಹಕ್ಕಿ ಮರಿಗಳು ಸೇರಿದ್ದು, ರೆಕ್ಕೆ ಬಿಚ್ಚಿ ಹಾರಲು ಸಾಧ್ಯವಾಗದೇ ಸಾವನ್ನಪ್ಪಿವೆ. ಹಕ್ಕಿ ಗೂಡುಗಳು ನಾಶವಾಗಿವೆ.

ಪ್ರಸ್ತುತ ವಿಡಿಯೊ ಎಂತಹ ಕಲ್ಲು ಹೃದಯವನ್ನೂ ಕರಗಿಸುವಂತಿದೆ.

ಪ್ರಕರಣದ ಗಂಭೀರತೆ ಅರಿತುಕೊಂಡಿರುವ ಕೇರಳದ ಲೋಕೋಪಯೋಗಿ (ಪಿಡಬ್ಲ್ಯುಡಿ) ಸಚಿವ ವಿ.ಎ. ಮೊಹಮ್ಮದ್ ರಿಯಾಜ್, ಈ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಸ್ಪಷ್ಟನೆ ಕೇಳಿದ್ದಾರೆ. ಹಾಗೆಯೇ ಕಾಮಗಾರಿ ವಹಿಸಿದ್ದ ಗುತ್ತಿಗೆದಾರನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಬಯಸಿದ್ದಾರೆ.

ಈ ಮಧ್ಯೆ ಎಡವಣ್ಣ ಅರಣ್ಯಾಧಿಕಾರಿಗಳು, ಜೆಸಿಬಿ ಹಾಗೂ ಚಾಲಕನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಸೇವ್ ವೆಟ್‌ಲ್ಯಾಂಡ್ಸ್ ಮೂಮ್‌ಮೆಂಟ್‌ನ ಸಿಇಒ ಥಾಮಸ್ ಲಾರೆನ್ಸ್ ದೂರು ಸಲ್ಲಿಸಿ ತಪ್ಪಿತ್ತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಇಂತಹ ಅಭಿವೃದ್ಧಿ ಕಾಮಗಾರಿಗಳಲ್ಲಿ ತೊಡಗಿಸಿಕೊಳ್ಳುವ ಮುನ್ನ ಪಕ್ಷಿಗಳಿಗೆ ಸಮರ್ಪಕವಾದ ಪುನರ್ವಸತಿ ಕಲ್ಪಿಸಬೇಕಿತ್ತು. ಕನಿಷ್ಠ ಪಕ್ಷ ಹಕ್ಕಿ ಮರಿಗಳು ಹಾರಿಹೋಗುವಷ್ಟು ಬೆಳೆಯುವವರೆಗೆ ಕಾಯಬಹುದಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT