ಶನಿವಾರ, ಮೇ 15, 2021
29 °C
ಹಿರಿಯ ನಾಗರಿಕರ ಅಲಕ್ಷ್ಯ ಸರಿಯಲ್ಲ ಎಂದ ನ್ಯಾಯಾಲಯ

ಮನೆಗೆ ತೆರಳಿ ಲಸಿಕೆ: ಮರುಪರಿಶೀಲಿಸುವಂತೆ ಕೇಂದ್ರಕ್ಕೆ ತಿಳಿಸಿದ ಬಾಂಬೆ ಹೈಕೋರ್ಟ್‌

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಮನೆ–ಮನೆಗೆ ಹೋಗಿ ಲಸಿಕೆ ಹಾಕುವುದು ಕಾರ್ಯಸಾಧುವಲ್ಲ ಎಂಬ ತನ್ನ ನಿಲುವನ್ನು ಕೇಂದ್ರ ಸರ್ಕಾರ ಪುನರ್‌ಪರಿಶೀಲಿಸಬೇಕು ಎಂದು ಬಾಂಬೆ ಹೈಕೋರ್ಟ್‌ ಗುರುವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ವಯಸ್ಸಾದವರು ಮತ್ತು ಅಂಗವಿಕಲರು ಪಡುತ್ತಿರುವ ಪಾಡನ್ನು ಸರ್ಕಾರ ಗಮನದಲ್ಲಿಟುಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ.

ಸರ್ಕಾರವು, ವಯಸ್ಸಾದವರನ್ನು ಸಾಯಲು ಬಿಡಬಾರದು ಎಂದು ಮುಖ್ಯ ನ್ಯಾಯಮೂರ್ತಿ ದೀಪಂಕರ ದತ್ತಾ ಮತ್ತು ನ್ಯಾಯಮೂರ್ತಿ ಜಿ.ಎಸ್‌.ಕುಲಕರ್ಣಿ ಅವರನ್ನೊಳಗೊಂಡ ವಿಭಾಗೀಯ ಪೀಠ ಹೇಳಿತು.

ಲಸಿಕೆ ಕಲುಷಿತವಾಗುವ ಮತ್ತು ವ್ಯರ್ಥವಾಗುವ ಸಂಭವ ಸೇರಿದಂತೆ ವಿವಿಧ ಕಾರಣಗಳಿಂದ ಮನೆ–ಮನೆಗೆ ತೆರಳಿ ಲಸಿಕೆ ಹಾಕಲು ಸಾಧ್ಯವಾಗುವುದಿಲ್ಲ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬುಧವಾರ ನ್ಯಾಯಾಲಯಕ್ಕೆ ತಿಳಿಸಿತ್ತು.

ವಕೀಲರಾದ ದ್ರುತಿ ಕಪಾಡಿಯಾ ಮತ್ತು ಕುನಾಲ್‌ ತಿವಾರಿ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಉತ್ತರವಾಗಿ ಕೇಂದ್ರ ಸರ್ಕಾರ ತನ್ನ ಅಭಿಪ್ರಾಯವನ್ನು ಮುಂದಿಟ್ಟಿತು. 75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮತ್ತು ಅಂಗವಿಕಲರಿಗೆ, ದೀರ್ಘಕಾಲದಿಂದ ಹಾಸಿಗೆ ಹಿಡಿದವರಿಗೆ, ಗಾಲಿ ಕುರ್ಚಿಗಳನ್ನು ಅವಲಂಬಿಸಿರುವ ವ್ಯಕ್ತಿಗಳನ್ನು ಲಕ್ಷ್ಯದಲ್ಲಿಟ್ಟುಕೊಂಡು ಮನೆ–ಮನೆಗೆ ತೆರಳಿ ಲಸಿಕೆ ಹಾಕಲು ಸೂಚಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ಅನಾರೋಗ್ಯದ ಕಾರಣದಿಂದ ಎಷ್ಟೊ ಮಂದಿ ಹಿರಿ ವಯಸ್ಸಿನವರಿಗೆ ಮನೆಯಿಂದ ಹೊರಬರಲು ಆಗದ ಸ್ಥಿತಿಯಿದೆ ಎಂದು ಹೈಕೋರ್ಟ್‌ ಹೇಳಿತು. ‘ಇದು ಸಾಧ್ಯವಿಲ್ಲ ಎಂದು ಹೇಳಿ ವಿಷಯವನ್ನು ಮುಗಿಸಬೇಡಿ. ಇದೇ ನೀತಿಯಾಗಬಾರದು. ವಯಸ್ಸಾದವರ ಪಡಿಪಾಟಲನ್ನು ಮನಸ್ಸಿನಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಈ ಬಗ್ಗೆ ಮರುಚಿಂತನೆ ನಡೆಸಬೇಕು’ ಎಂದು ನ್ಯಾಯಾಲಯ ಹೇಳಿತು.

‘ತಜ್ಞರು ಈ ನೀತಿಯ ಬಗ್ಗೆ ಮತ್ತೊಮ್ಮೆ ಯೋಚಿಸಬೇಕು. ವಯಸ್ಸಾದವರು ಸಾಯಲಿ ಎಂದು ಬಿಡುವಂತಿಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ದತ್ತಾ ಹೇಳಿದರು.

‘ಭಾರತೀಯ ಸಂಸ್ಕೃತಿಯಲ್ಲಿ ಮಕ್ಕಳಿಗೆ ಮತ್ತು ಹಿರಿಯರಿಗೆ ಆದ್ಯತೆ ನೀಡುತ್ತ ಬರಲಾಗಿದೆ’ ಎಂದು ನ್ಯಾಯಮೂರ್ತಿಗಳು ತಿಳಿಸಿದರು.

‘ಪುಟ್ಟ ಮಕ್ಕಳು ಮತ್ತು ವೃದ್ಧಾಪ್ಯದಲ್ಲಿರುವವರು ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿರುವುದಿಲ್ಲ. ಅವರ ಬಗ್ಗೆ ನಾವು ಗಮನಕೊಡಬೇಕಾಗಿದೆ’ ಎಂದು ನ್ಯಾ. ಕುಲಕರ್ಣಿ ಹೇಳಿದರು.  ಲಸಿಕೆ ಮಾತ್ರ ಈ ಸಾಂಕ್ರಾಮಿಕ ಪಿಡುಗು ಕೊನೆಗಾಣಿಸಲು ಇರುವ ದಾರಿಯಾಗಿದೆ ಎಂದರು.

ಇಸ್ರೇಲ್‌ ದೇಶವನ್ನು ಉದಾಹರಣೆಯನ್ನಾಗಿ ನೀಡಿದ ನ್ಯಾಯಾಲಯ, ಅಲ್ಲಿನ ಬಹುತೇಕ ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಲಾಸ್‌ ಏಂಜಲ್ಸ್‌ನಲ್ಲಿ ಕಾರಿನಲ್ಲೇ ಕುಳಿತವರಿಗೆ ಲಸಿಕೆ ನೀಡಲಾಯಿತು ಎಂದು ಉಲ್ಲೇಖಿಸಿತು.

ವಯಸ್ಸಾದ ಹಲವರಿಗೆ ನಾನಾ ಕಾಯಿಲೆಗಳಿಗೆ. ಲಸಿಕೆ ನೀಡಿದ ನಂತರ ಅರ್ಧ ಗಂಟೆ ಅವರ ಆರೋಗ್ಯದ ಮೇಲೆ ಗಮನ ಇಡಬೇಕಾಗುತ್ತದೆ. ಇದರಿಂದ ಮನೆ–ಮನೆಗೆ ತೆರಳಿ ಲಸಿಕೆ ಹಾಕಲು ಸಾಧ್ಯವಾಗುವುದಿಲ್ಲ ಎಂದು ಅಡಿಷನಲ್‌ ಸಾಲಿಸಿಟರ್‌ ಜನರಲ್‌ ಅನಿಲ್‌ ಸಿಂಗ್‌ ವಾದಿಸಿದರು.

ಇದಕ್ಕೆ ಸೂಕ್ತವಾದ ಮಧ್ಯಮ ಮಾರ್ಗ ಕಂಡುಕೊಳ್ಳಬೇಕಾಗುತ್ತದೆ. ಇಂಥ ಅನಾರೋಗ್ಯ ಇರುವವರಿಗೆ ಲಸಿಕೆ ಅಗತ್ಯ ಎಲ್ಲರಿಗಿಂತ ಹೆಚ್ಚು ಇರುತ್ತದೆ ಎಂದು ನ್ಯಾಯಾಲಯ ಹೇಳಿತು.

ಮಹಾರಾಷ್ಟ್ರದಲ್ಲಿ ಲಸಿಕೆಯ ಲಭ್ಯತೆಯ ಬಗ್ಗೆಯೂ ನ್ಯಾಯಾಲಯ ಮಾಹಿತಿ ಕೇಳಿತು. ಹಾಲಿ ಇರುವ ದಾಸ್ತಾನು ಮೂರು ಅಥವಾ ನಾಲ್ಕು ದಿನಗಳಿಗೆ ಸಾಕಾಗುತ್ತದೆ. ಮತ್ತೆ ಹೊಸದಾಗಿ ಬರಲಿದೆ ಎಂದು ಅಡ್ವೊಕೇಟ್‌ ಜನರಲ್‌ ಅಶುತೋಷ್‌ ಕುಂಭಕೋಣಿ ಉತ್ತರಿಸಿದರು.

ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಮೇ 6ಕ್ಕೆ ನಿಗದಿಪಡಿಸಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು