ಶುಕ್ರವಾರ, ಜೂನ್ 18, 2021
24 °C

ದಫನ ಮಾಡಿದ್ದ ಹಿಂದೂ ನೌಕರನ ಮೃತದೇಹ ಭಾರತಕ್ಕೆ: ಹೈಕೋರ್ಟ್‌ಗೆ ಕೇಂದ್ರದ ಮಾಹಿತಿ

ಪಿಟಿಐ‌ Updated:

ಅಕ್ಷರ ಗಾತ್ರ : | |

ನವದೆಹಲಿ: ಸೌದಿ ಅರೇಬಿಯಾದಲ್ಲಿ ಹೃದಯಾಘಾತದಿಂದ ಮೃತಪಟ್ಟು, ಅಧಿಕಾರಿಯೊಬ್ಬರ ತಪ್ಪಿನಿಂದ ಮುಸ್ಲಿಂ ಸಂಪ್ರದಾಯದಂತೆ ದಫನ ಮಾಡಲಾದ ಸಂಜೀವ್‌ ಕುಮಾರ್ ಅವರ ಪಾರ್ಥಿಕ ಶರೀರವನ್ನು ಭಾರತಕ್ಕೆ ತರಲಾಗಿದ್ದು, ಕುಟುಂಬದವರಿಗೆ ಬುಧವಾರ ಹಸ್ತಾಂತರಿಸಲಾಗಿದೆ ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.

ಸರ್ಕಾರಿ ವಕೀಲ ರಿಪುದಮನ್ ಭಾರದ್ವಾಜ್‌ ಅವರು ಈ ಬಗ್ಗೆ ನ್ಯಾಯಮೂರ್ತಿ ಪ್ರತಿಭಾ ಎಂ.ಸಿಂಗ್ ಅವರಿಗೆ ಮಾಹಿತಿ ನೀಡಿದರು. 

ಅತ್ಯಂತ ಭಾವನಾತ್ಮಕವಾಗಿದ್ದ ಈ ಸಮಸ್ಯೆಯನ್ನು ಬಗೆಹರಿಸಿ, ಪಾರ್ಥಿಕ ಶರೀರವನ್ನು ಮರಳಿ ಕುಟುಂಬಕ್ಕೆ ಒದಗಿಸುವಲ್ಲಿ ನೆರವಾದ ಸೌದಿ ಅರೇಬಿಯಾದ ಅಧಿಕಾರಿಗಳು ಹಾಗೂ ವಿದೇಶಾಂಗ ಸಚಿವಾಲಯದ ಕೌನ್ಸುಲರ್ ನಿರ್ದೇಶಕ ವಿಷ್ಣು ಕುಮಾರ್ ಶರ್ಮಾ ಅವರ ಪ್ರಯತ್ನಕ್ಕೆ ಕೇಂದ್ರ ಸರ್ಕಾರ ಕೃತಜ್ಞತೆ ಸಲ್ಲಿಸಿತು.

ಸೌದಿಯಲ್ಲಿ ಉದ್ಯೋಗಿಯಾಗಿದ್ದ ಸಂಜೀವ್ ಕುಮಾರ್ ಅವರು ಜನವರಿ 24ರಂದು ಹೃದಯಾಘಾತದಿಂದ ಮೃತಪಟ್ಟಿದ್ದರು. ಅವರ ಮೃತದೇಹವನ್ನು ಅಲ್ಲಿನ ಆಸ್ಪತ್ರೆಯಲ್ಲೇ ಇರಿಸಲಾಗಿತ್ತು.  ಆದರೆ ಫೆಬ್ರುವರಿ 18ರಂದು ಉತ್ತರ ಪ್ರದೇಶದ ಉನ್ನಾವೊದಲ್ಲಿರುವ ಅವರ ಕುಟುಂಬದವರಿಗೆ ಆಘಾತಕಾರಿ ಸಂದೇಶವೊಂದು ಬಂದಿತ್ತು. ಸಂಜೀವ್‌ ಅವರನ್ನು ದಫನ ಮಾಡಲಾಗಿದೆ ಎಂದು ತಿಳಿಸಲಾಗಿತ್ತು. ಜೆಡ್ಡಾದಲ್ಲಿರುವ ಭಾರತೀಯ ರಾಜತಾಂತ್ರಿಕ ಕಚೇರಿಯಲ್ಲಿನ ಭಾಷಾಂತರ ವಿಭಾಗದ ಅಧಿಕಾರಿಯೊಬ್ಬರು ಧರ್ಮವನ್ನು ನಮೂದಿಸುವಾಗ ಮುಸ್ಲಿಂ ಎಂದು ತಪ್ಪಾಗಿ ನಮೂದಿಸಿದ್ದೇ ಈ ಅವಾಂತರಕ್ಕೆ ಕಾರಣವಾಗಿತ್ತು.

ಪತಿಯ ಮೃತದೇಹದ ಅಂತ್ಯಸಂಸ್ಕಾರ ನಡೆಸುವುದಕ್ಕೆ ಅವಕಾಶ ನೀಡಬೇಕು ಎಂದು ಕೋರಿ ಸಂಜೀವ್ ಅವರ ಪತ್ನಿ ಅಂಜು ಶರ್ಮಾ ಅವರು ಅಧಿಕಾರಿಗಳ ಮೊರೆ ಹೋಗಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು