ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2014ಕ್ಕೂ ಮೊದಲು ಇದ್ದ ‘ಫೋನ್ ಬ್ಯಾಂಕಿಂಗ್’ನಿಂದ ಆರ್ಥಿಕತೆಗೆ ಪೆಟ್ಟು: ಪ್ರಧಾನಿ

Last Updated 16 ಅಕ್ಟೋಬರ್ 2022, 16:12 IST
ಅಕ್ಷರ ಗಾತ್ರ

ನವದೆಹಲಿ: 2014ಕ್ಕೂ ಮೊದಲು ಜಾರಿಯಲ್ಲಿ ಇದ್ದ ‘ಫೋನ್ ಬ್ಯಾಂಕಿಂಗ್’ ವ್ಯವಸ್ಥೆಯನ್ನು ‘ಡಿಜಿಟಲ್ ಬ್ಯಾಂಕಿಂಗ್‌’ಗೆ ಬದಲಾಯಿಸಲು ಬಿಜೆಪಿ ನೇತೃತ್ವದ ಸರ್ಕಾರ ನಡೆಸಿದ ಯತ್ನಗಳ ಫಲವಾಗಿ ಭಾರತವು ಸುಸ್ಥಿರ ಆರ್ಥಿಕ ಬೆಳವಣಿಗೆ ಕಾಣುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.

ಹಿಂದಿನ ಯುಪಿಎ ಆಡಳಿತದ ಕುರಿತು ಉಲ್ಲೇಖಿಸಿ ಪ್ರಧಾನಿಯವರು, ಫೋನ್‌ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಯಾರಿಗೆ ಸಾಲ ಕೊಡಬೇಕು, ಯಾವ ಷರತ್ತುಗಳ ಅಡಿ ಸಾಲ ಕೊಡಬೇಕು ಎಂಬ ಸೂಚನೆಯನ್ನು ಬ್ಯಾಂಕುಗಳಿಗೆ ಫೋನ್‌ ಮೂಲಕ ನೀಡಲಾಗುತ್ತಿತ್ತು ಎಂದು ಹೇಳಿದ್ದಾರೆ.

ಯಾವುದೇ ದೇಶದಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಎಷ್ಟು ಬಲಿಷ್ಠವಾಗಿರುತ್ತದೆಯೇ ಅಷ್ಟರಮಟ್ಟಿಗೆ ಅಲ್ಲಿನ ಅರ್ಥ ವ್ಯವಸ್ಥೆ ಬೆಳವಣಿಗೆ ಹೊಂದುತ್ತಿರುತ್ತದೆ ಎಂದು ಮೋದಿ ಅವರು 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ದೇಶಕ್ಕೆ ಅರ್ಪಿಸುವ ಸಂದರ್ಭದಲ್ಲಿ ಹೇಳಿದ್ದಾರೆ.

‘2014ಕ್ಕೂ ಮೊದಲು ಬ್ಯಾಂಕುಗಳು ತಮ್ಮ ಕಾರ್ಯಾಚರಣೆ ಹೇಗಿರಬೇಕು ಎಂಬ ಸೂಚನೆಯನ್ನು ಫೋನ್ ಕರೆ ಮೂಲಕ ಪಡೆಯುತ್ತಿದ್ದವು. ಫೋನ್ ಬ್ಯಾಂಕಿಂಗ್ ರಾಜಕಾರಣವು ಬ್ಯಾಂಕುಗಳನ್ನು ಅಸುರಕ್ಷಿತವಾಗಿಸಿತ್ತು. ಸಹಸ್ರಾರು ಕೋಟಿ ರೂಪಾಯಿ ಮೊತ್ತದ ಹಗರಣಗಳ ಬೀಜ ಬಿತ್ತಿ ದೇಶದ ಅರ್ಥ ವ್ಯವಸ್ಥೆ ಕೂಡ ಅಸುರಕ್ಷಿತವಾಗುವಂತೆ ಮಾಡಿತ್ತು’ ಎಂದು ಮೋದಿ ಟೀಕಿಸಿದ್ದಾರೆ.

ಡಿಜಿಟಲ್ ಬ್ಯಾಂಕಿಂಗ್‌ ಘಟಕಗಳು ಉಳಿತಾಯ ಖಾತೆ, ಸಾಲ, ಹೂಡಿಕೆ ಮತ್ತು ವಿಮಾ ಸೇವೆಗಳನ್ನು ಒದಗಿಸಲಿವೆ. ಸಣ್ಣ ಮೊತ್ತದ ವೈಯಕ್ತಿಕ ಸಾಲ ಮತ್ತು ಎಂಎಸ್‌ಎಂಇ ವಲಯದ ಉದ್ಯಮಗಳಿಗೆ ಬೇಕಿರುವ ಸಾಲವನ್ನು ಸಂಪೂರ್ಣವಾಗಿ ಡಿಜಿಟಲ್ ಪ್ರಕ್ರಿಯೆ ಮೂಲಕ ನೀಡಲಾಗುತ್ತದೆ. ಸರ್ಕಾರದ ಕೆಲವು ಯೋಜನೆಗಳ ಅಡಿ ಸೇವೆಗಳನ್ನು ಕೂಡ ನೀಡಲಾಗುತ್ತದೆ.

ಕಂಪ್ಯೂಟರ್ ಇಲ್ಲದವರು, ಸ್ಮಾರ್ಟ್‌ಫೋನ್ ಕೂಡ ಇಲ್ಲದವರು ಬ್ಯಾಂಕಿಂಗ್ ಸೇವೆಗಳನ್ನು ಡಿಜಿಟಲ್ ಮಾಧ್ಯಮದ ಮೂಲಕ ಪಡೆದುಕೊಳ್ಳಲು ಈ ಘಟಕಗಳು ನೆರವಾಗಲಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಒಟ್ಟು 75 ಡಿಜಿಟಲ್ ಬ್ಯಾಂಕಿಂಗ್‌ ಘಟಕಗಳನ್ನು ಆರಂಭಿಸುವುದಾಗಿ 2022–23ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಪ್ರಕಟಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT