ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಬಂಗಾಳದಲ್ಲಿ ಪೂಜೆಗಳ ವಿಘ್ನ ನಿವಾರಣೆ: ಅಮಿತ್ ಶಾ

ಪಶ್ಚಿಮ ಬಂಗಾಳ ಯುವಕರ ನಿರೀಕ್ಷೆ ನಿಜವಾಗಿಸುವ ಪರಿವರ್ತನೆ ತರುವೆವು: ಪ್ರಧಾನಿ ಮೋದಿ
Last Updated 21 ಮಾರ್ಚ್ 2021, 19:25 IST
ಅಕ್ಷರ ಗಾತ್ರ

ಎಗ್ರಾ (ಪಶ್ಚಿಮ ಬಂಗಾಳ): ‘ಪಶ್ಚಿಮ ಬಂಗಾಳದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ದುರ್ಗಾಪೂಜೆ, ಸರಸ್ವತಿ ಪೂಜೆಗಳಿಗೆ ತೊಡಕಾಗದಂತೆ ನೋಡಿಕೊಳ್ಳುತ್ತೇವೆ’ ಎಂದು ಗೃಹ ಸಚಿವ ಅಮಿತ್‌ ಶಾ ಭಾನುವಾರ ಹೇಳಿದ್ದಾರೆ.

ಪೂರ್ವ ಮೇದಿನಿಪುರ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ರ್‍ಯಾಲಿಯಲ್ಲಿ ಮಾತನಾಡುತ್ತಾ, ‘ಮಮತಾ ಬ್ಯಾನರ್ಜಿ ಅವರು ಓಲೈಕೆಯ ರಾಜಕಾರಣ ಮಾಡಿದ್ದಾರೆ. ನಾವು ಆ ಹಾದಿಯಲ್ಲಿ ನಡೆಯುವುದಿಲ್ಲ. ಬದಲಿಗೆ, ಮುಂದಿನ ಐದು ವರ್ಷಗಳಲ್ಲಿ ‘ಸುವರ್ಣ ಬಂಗಾಳ’ (ಸೊನಾರ್ ಬಾಂಗ್ಲಾ) ನಿರ್ಮಿಸುತ್ತೇವೆ ಎಂದು ಪುನರುಚ್ಚರಿಸಿದರು.

‘ಟಿಎಂಸಿ ಆಡಳಿತವಿದ್ದಾಗ ಶಾಲೆಯಲ್ಲಿ ಸರಸ್ವತಿ ಪೂಜೆ ಆಯೋಜಿಸಿದ್ದಕ್ಕೆ ಶಾಲಾ ಶಿಕ್ಷಕರನ್ನು ಥಳಿಸಲಾಗಿತ್ತು. ರಾಜ್ಯದಲ್ಲಿ ದುರ್ಗಾಪೂಜೆಯನ್ನು ನೆರವೇರಿಸಲು ನ್ಯಾಯಾಲಯ ಮಧ್ಯಪ್ರವೇಶಿಸಬೇಕಾಗಿ ಬಂದಿತ್ತು. ಇಂಥ ಸರ್ಕಾರವು ನಿಮಗೆ ಬೇಕೇ? ಎಂದು ಶಾ ಪ್ರಶ್ನಿಸಿದರು.

‘ಇತ್ತೀಚಿನ ದಿನಗಳಲ್ಲಿ ಬಂಗಾಳದಲ್ಲಿ ಬಿಜೆಪಿಯ 130 ಮಂದಿ ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ. ಅಪರಾಧಿಗಳು ಎಲ್ಲೇ ಅಡಗಿದ್ದರೂ ಅವರನ್ನು ಬೇಟೆಯಾಡುತ್ತೇವೆ’ ಎಂದು ಅವರು ಹೇಳಿದರು.

ಸೋಲು ಮನಗಂಡ ಮಮತಾಗೆ ಇವಿಎಂ ಮೇಲೆ ಸಂದೇಹ: ‘ಪಶ್ಚಿಮ ಬಂಗಾಳದಲ್ಲಿ ಸೋಲನ್ನು ನಿರೀಕ್ಷಿಸಿರುವ ಮಮತಾ ಬ್ಯಾನರ್ಜಿ ಅವರು ಈಗ ಮತಯಂತ್ರಗಳ ಕಾರ್ಯಕ್ಷಮತೆಯನ್ನು
ಪ್ರಶ್ನಿಸಲು ಆರಂಭಿಸಿದ್ದಾರೆ’ ಎಂದು ಮೋದಿ ಟೀಕಿಸಿದ್ದಾರೆ.

‘ಈ ಮತಯಂತ್ರಗಳೇ 10 ವರ್ಷಗಳ ಹಿಂದೆ ಮಮತಾ ಅವರನ್ನು ಅಧಿಕಾರಕ್ಕೆ ತಂದಿದ್ದವು. ಈಗ ಪುನಃ ಯುವಕರ ನಿರೀಕ್ಷೆಗಳನ್ನು ನಿಜವಾಗಿಸುವಂಥ ಪರಿವರ್ತನೆ ಬಂಗಾಳದಲ್ಲಿ ಕಾಣಿಸುತ್ತಿದೆ. ಭ್ರಷ್ಟಾಚಾರದ ಆಟ ಈಗ ನಡೆಯದು’ ಎಂದು ಬಂಕುರಾದಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಅವರು ಹೇಳಿದ್ದಾರೆ.

‘ನಾನು ತಲೆ ಬಾಗಿಸಿ, ದೇಶದ 130 ಕೋಟಿ ಜನರ ಸೇವೆಯಲ್ಲಿ ತೊಡಗಿದ್ದೇನೆ. ದೀದಿ (ಮಮತಾ) ತಮ್ಮ ಕಾಲನ್ನು ನನ್ನ ತಲೆಯ ಮೇಲಿಟ್ಟು ತುಳಿಯಬಹುದು. ಆದರೆ ಬಂಗಾಳದ ಜನರ ಕನಸುಗಳನ್ನು ತುಳಿಯಲು ನಾನು ಬಿಡುವುದಿಲ್ಲ’ ಎಂದು ಮೋದಿ ಹೇಳಿದರು.

‘ಕಾಂಗ್ರೆಸ್ ಲೂಟಿಯ ಯಂತ್ರ’: ‘ಕಾಂಗ್ರೆಸ್‌ ಪಕ್ಷವು ‘ಲೂಟಿಮಾಡುವ ಯಂತ್ರ’ವಾಗಿದ್ದು ಅಸ್ಸಾಂನಲ್ಲಿ ಶತಾಯಗತಾಯ ಅಧಿಕಾರ ಹಿಡಿಯುವ ಪ್ರಯತ್ನ ನಡೆಸುತ್ತಿದೆ’ ಎಂದು ಅಸ್ಸಾಂನ ಬೊಕಾಹಟ್‌ನಲ್ಲಿನ ಚುನಾಣಾ ರ್‍ಯಾಲಿಯಲ್ಲಿ ಮೋದಿ ಹೇಳಿದ್ದಾರೆ.

‘ಕಾಂಗ್ರೆಸ್‌ನ ಬೊಕ್ಕಸ ಈಗ ಖಾಲಿಯಾಗಿದೆ. ಅದನ್ನು ತುಂಬಿಸಬೇಕಾದರೆ ಅಧಿಕಾರಕ್ಕೆ ಬರುವುದು ಅನಿವಾರ್ಯ. ಅದಕ್ಕಾಗಿಯೇ ಉದ್ಯೋಗ ಸೃಷ್ಟಿ, ಮಹಿಳಾ ಸಬಲೀಕರಣಗಳಂಥ ಹುಸಿ ಭರವಸೆಗಳನ್ನು ನೀಡಲಾಗುತ್ತಿದೆ. ಕೇಂದ್ರ ಮತ್ತು ಅಸ್ಸಾಂನಲ್ಲಿ ಏಕಕಾಲಕ್ಕೆ ಕಾಂಗ್ರೆಸ್‌ ಆಡಳಿತವಿದ್ದಾಗಲೂ ಇದೇ ಭರವಸೆಗಳನ್ನು ನೀಡಲಾಗಿತ್ತು. ಆದರೆ ಏನೇನೂ ಮಾಡಿರಲಿಲ್ಲ. ಅಧಿಕಾರ ಹಿಡಿಯಲು ಅವರು ಯಾವ ಹಂತಕ್ಕಾದರೂ ಹೋಗಬಲ್ಲರು ಎಂಬುದಕ್ಕೆ ಪ್ರಣಾಳಿಕೆಯ ಮೂಲಕ ಅವರು ಹೇಳುತ್ತಿರುವ ಸುಳ್ಳುಗಳೇ ಸಾಕ್ಷಿ’ ಎಂದರು.

‘ಏಕಕಾಲದಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಎರಡು ಪಟ್ಟು ನಿರ್ಲಕ್ಷ್ಯ, ಎರಡುಪಟ್ಟು ಭ್ರಷ್ಟಾಚಾರ, ಎರಡು ಪಟ್ಟು ಒಳನುಸುಳುವಿಕೆಗಳು ಇದ್ದವು. ಈಗ ಅವರು ‘ಗ್ಯಾರಂಟಿ’ ನೀಡುತ್ತಿದ್ದಾರೆ. ಅವರ ಪ್ರಣಾಳಿಕೆಯು ‘ಸುಳ್ಳುಗಳ ಗ್ಯಾರಂಟಿ’ಯಾಗಿದೆ. ಗೊಂದಲ, ಅಭದ್ರತೆ, ಬಾಂಬ್‌, ಬಂದೂಕು, ಅಡೆತಡೆ, ದಂಗೆ, ಪ್ರತ್ಯೇಕತಾವಾದ, ಭ್ರಷ್ಟಾಚಾರ ಹಾಗೂ ಸ್ವಜನಪಕ್ಷಪಾತಗಳ ಗ್ಯಾರಂಟಿಗಳಿಂದ ಅವರ ಪ್ರಣಾಳಿಕೆ ತುಂಬಿದೆ’ ಎಂದು ಮೋದಿ ಟೀಕಿಸಿದರು.

ಮೋದಿಗೆ ‘ಟ್ವೀಟ್‌’ ಚಿಂತೆ

ಜೊರಹಾಟ್‌ (ಅಸ್ಸಾಂ): ‘ನೆರೆಯಿಂದ ಸಂತ್ರಸ್ತರಾಗಿರುವ ಅಸ್ಸಾಂನ ಜನರ ಕಷ್ಟಗಳಿಗಿಂತ ಹೆಚ್ಚಾಗಿ, 22 ವರ್ಷ ವಯಸ್ಸಿನ ಮಹಿಳೆ ಮಾಡಿದ ಒಂದು ಟ್ವೀಟ್‌ನಿಂದ ಮೋದಿ ಚಿಂತೆಗೆ ಒಳಗಾಗಿದ್ದಾರೆ’ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಲೇವಡಿ ಮಾಡಿದ್ದಾರೆ.

ಶನಿವಾರ ಅಸ್ಸಾಂನ ಪ್ರಚಾರ ರ್‍ಯಾಲಿಯಲ್ಲಿ ಮಾತನಾಡಿದ್ದ ಮೋದಿ ಅವರು, ‘ಟೂಲ್‌ಕಿಟ್‌’ ವಿಚಾರವನ್ನು ಪ್ರಸ್ತಾಪಿಸಿ, ಅದರ ಹಿಂದೆ ಕಾಂಗ್ರೆಸ್‌ನ ಸಂಚು ಇದೆ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತ್ಯುತ್ತರ ನೀಡಿದ ಪ್ರಿಯಾಂಕಾ, ‘ಬ್ರಹ್ಮಪುತ್ರ ನದಿ ಪ್ರವಾಹ ಸಮಸ್ಯೆ ಹಾಗೂ ಪೌರತ್ವ (ತಿದ್ದುಪಡಿ) ಕಾಯ್ದೆಯಿಂದ ಸಂಸ್ಕೃತಿಯ ಮೇಲೆ ಆಗುತ್ತಿರುವ ದಾಳಿಯ ವಿಚಾರವಾಗಿ ಮೋದಿ ಮೌನವಹಿಸಿದ್ದಾರೆ. ನಾನು ನಿನ್ನೆ ಮೋದಿ ಅವರ ಭಾಷಣ ಆಲಿಸಿದ್ದೆ. ಅವರು ಅಸ್ಸಾಂನ ಅಭಿವೃದ್ಧಿಯ ಬಗ್ಗೆ ಮಾತನಾಡಬಹುದು ಎಂದು ಭಾವಿಸಿದ್ದೆ. ಆದರೆ, 22 ವರ್ಷ ವಯಸ್ಸಿನ ಮಹಿಳೆಯೊಬ್ಬರು (ದಿಶಾ ರವಿ) ಮಾಡಿದ ಟ್ವೀಟ್‌ ಬಗ್ಗೆ ಅವರು ಮಾತನಾಡಿದ್ದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT