ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯಾಣಿಕ ರೈಲು ಪೂರ್ಣ ಪುನರಾರಂಭ: ಸಂಸದೀಯ ಸಮಿತಿ‌ ಪ್ರಸ್ತಾವ

Last Updated 9 ಮಾರ್ಚ್ 2021, 19:41 IST
ಅಕ್ಷರ ಗಾತ್ರ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಕೋವಿಡ್–19 ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಪೂರ್ಣ ಪ್ರಮಾಣದ ಪ್ರಯಾಣಿಕ ರೈಲು ಸೇವೆಯನ್ನು ಪುನರಾರಂಭಿಸಬೇಕು ಎಂದು ರೈಲ್ವೆ ಕುರಿತ ಸಂಸದೀಯ ಸ್ಥಾಯಿ ಸಮಿತಿ ಅಭಿಪ್ರಾಯಪಟ್ಟಿದೆ.

ಕೋವಿಡ್ -19 ಲಾಕ್‌ಡೌನ್ ಕಾರಣ ರೈಲು ಸೇವೆಗಳನ್ನು ಸ್ಥಗಿತಗೊಳಿಸಿದ್ದರಿಂದ ಪ್ರಯಾಣಿಕರ ವಿಭಾಗದ ಆದಾಯದಲ್ಲಿ ರೈಲ್ವೆಗೆ ಭಾರಿ ನಷ್ಟ ಉಂಟಾಗಿದೆ ಎಂದುಮಾಜಿ ಕೇಂದ್ರ ಸಚಿವ ರಾಧಾ ಮೋಹನ್ ಸಿಂಗ್ ನೇತೃತ್ವದ ರೈಲ್ವೆ ಸ್ಥಾಯಿ ಸಮಿತಿಯು ಹೇಳಿದೆ.

ಇಲಾಖೆಯು ಇತ್ತೀಚೆಗೆ ಪ್ರಯಾಣಿಕ ರೈಲುಗಳ ಸಂಖ್ಯೆಯನ್ನು ಹಂತಹಂತವಾಗಿ ಹೆಚ್ಚಿಸುತ್ತಿದೆ. ಈಗಾಗಲೇ ಶೇ 65ಕ್ಕೂ ಹೆಚ್ಚು ಪ್ರಯಾಣಿಕ ರೈಲುಗಳು ಓಡುತ್ತಿವೆ. ಸಂಸ್ಥೆಯ ಆರ್ಥಿಕ ಸ್ಥಿತಿಯು ಹದಗೆಡುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಪೂರ್ಣ ಪ್ರಮಾಣದ ರೈಲ್ವೆ ಕಾರ್ಯಾಚರಣೆ ಪುನರಾರಂಭಿಸಲು ಸಮಿತಿ ಒಲವು ವ್ಯಕ್ತಪಡಿಸಿದೆ.

‘ಸರಕು ಸಾಗಣೆ ರೈಲುಗಳ ಓಡಾಟದಿಂದ ಬರುವ ಆದಾಯಕ್ಕೆ ಹೋಲಿಸಿದರೆ ಪ್ರಯಾಣಿಕ ರೈಲುಗಳ ಓಡಾಟದಿಂದ ಬರುವ ಆದಾಯ ಕಡಿಮೆ. 2018–19ರಲ್ಲಿ ₹51,066.65 ಕೋಟಿ ಇದ್ದ ಗಳಿಕೆಯು 2019–20ರಲ್ಲಿ ₹50,669.09 ಕೋಟಿಗೆ ಇಳಿಕೆಯಾಗಿತ್ತು. ಕೋವಿಡ್ ಹಾಗೂ ಲಾಕ್‌ಡೌನ್ ಕಾರಣ ಪ್ರಯಾಣಿಕರ ರೈಲು ಸಂಚಾರ ನಿರ್ಬಂಧಿಸಿದ್ದರಿಂದ ಜನವರಿ 2021ರವರೆಗೆ ಈ ವಿಭಾಗದಲ್ಲಿ ₹9,529 ಕೋಟಿ ಮಾತ್ರ ಗಳಿಕೆ ಆಗಿದೆ’ ಎಂದು ಸಂಸತ್ತಿನಲ್ಲಿ ಮಂಡನೆಯಾದ ಸಮಿತಿಯ ವರದಿ ತಿಳಿಸಿದೆ.

ಇಲಾಖೆಯ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ವಿವಿಧ ರಾಜ್ಯಗಳಲ್ಲಿನ ಕೋವಿಡ್ ತಡೆ ನಿಯಮಾವಳಿಗಳನ್ನು ಗಮನದಲ್ಲಿಟ್ಟುಕೊಂಡು ಪ್ರಯಾಣಿಕರ ಸೇವೆಗಳನ್ನು ಪುನರಾರಂಭಿಸುವುದನ್ನು ರೈಲ್ವೆ ಪರಿಗಣಿಸಬೇಕು ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ಪ್ರಯಾಣಿಕರ ರೈಲುಗಳ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಪುನರಾರಂಭಿಸಿದ ನಂತರ ಈ ವಿಭಾಗದ ಗಳಿಕೆ ಕ್ರಮೇಣ ಸುಧಾರಿಸಬಹುದು ಎಂದು ವರದಿ ಆಶಾಭಾವ ವ್ಯಕ್ತಪಡಿಸಿದೆ.

ಪ್ರಯಾಣಿಕ ರೈಲುಗಳಲ್ಲಿ ಸಂಚರಿಸುವವರಿಗೆ ಭಾರಿ ಪ್ರಮಾಣದ ರಿಯಾಯಿತಿ ನೀಡುವ ಸಂಪ್ರದಾಯವನ್ನು ಇಲಾಖೆ ಪಾಲಿಸಿಕೊಂಡು ಬಂದಿರುವ ಕಾರಣ, ಆಗುವ ನಷ್ಟವನ್ನು ಸರಕು ಸಾಗಣೆ ರೈಲುಗಳಿಂದ ಹೆಚ್ಚುವರಿ ಆದಾಯ ಪಡೆದು ಸರಿದೂಗಿಸಿಕೊಳ್ಳುತ್ತದೆ. ಇಂತಹ ಶುಲ್ಕ ಪದ್ಧತಿಯಿಂದ ಹೆಚ್ಚುವರಿ ಆದಾಯದಲ್ಲಿ ಕೊರತೆ ಉಂಟಾಗುವ ಕಾರಣ, ಸಾಮರ್ಥ್ಯ ವಿಸ್ತರಣೆ ಮತ್ತು ಆಧುನಿಕ ಸೌಲಭ್ಯಗಳನ್ನು ಒದಗಿಸಲು ರೈಲ್ವೆಗೆ ಸಾಧ್ಯವಾಗುತ್ತಿಲ್ಲ ಎಂದು ವರದಿ ತಿಳಿಸಿದೆ.

ಆದಾಯದಲ್ಲಿ ಕೊರತೆ
ಪ್ರಯಾಣಿಕ ರೈಲುಗಳ ಗಳಿಕೆಯಲ್ಲಿ ಕೊರತೆ ಎದುರಾಗಲು ಕೆಲವು ಕಾರಣಗಳನ್ನು ಸಮಿತಿ ಮುಂದಿಟ್ಟಿದೆ. ಸಾಮಾಜಿಕ ಜವಾಬ್ದಾರಿ ಮತ್ತು ಲಾಭದಾಯಕವಲ್ಲದ ಮಾರ್ಗಗಳಲ್ಲಿ ಕಾರ್ಯಾಚರಣೆ ನಡೆಸಿದ್ದರಿಂದ ಹೀಗಾಗಿದೆ ಎಂದು ತಿಳಿಸಿದೆ. ಜೊತೆಗೆ ಕೋವಿಡ್ ಕಾರಣವಾಗಿ ಪ್ರಯಾಣಿಕರ ರೈಲುಗಳನ್ನು ಹೆಚ್ಚು ಕಾಲ ಸ್ಥಗಿತಗೊಳಿಸಿದ್ದರಿಂದ ಪ್ರಯಾಣಿಕರ ವಿಭಾಗದ ಆದಾಯ ಕಡಿಮೆಯಾಗಿದೆ. ಪೂರ್ಣ ಪ್ರಮಾಣದ ರೈಲು ಸೇವೆ ಇನ್ನೂ ಪುನರಾರಂಭಗೊಂಡಿಲ್ಲ ಎಂದು ಸಮಿತಿ ವರದಿಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT