ಮಂಗಳವಾರ, ಮಾರ್ಚ್ 28, 2023
31 °C

ನೀತಿ ಆಯೋಗದ ನೂತನ ಸಿಇಒ ಆಗಿ ಪರಮೇಶ್ವರನ್ ಅಯ್ಯರ್ ನೇಮಕ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದ ಮಾಜಿ ಕಾರ್ಯದರ್ಶಿ ಪರಮೇಶ್ವರನ್‌ ಅಯ್ಯರ್‌ ಅವರನ್ನು ನೀತಿ ಆಯೋಗದ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನಾಗಿ (ಸಿಇಒ) ನೇಮಿಸಿ ಕೇಂದ್ರ ಸರ್ಕಾರ ಶುಕ್ರವಾರ ಆದೇಶಿಸಿದೆ.

ಸದ್ಯ ಸಿಇಒ ಆಗಿರುವ ಅಮಿತಾಭ್‌ ಕಾಂತ್‌ ಅವರ ಅವಧಿ ಜೂನ್‌ 30ಕ್ಕೆ ಮುಕ್ತಾಯವಾಗಲಿದೆ. ಅಯ್ಯರ್‌ ಅವರು ಎರಡು ವರ್ಷಗಳ ವರೆಗೆ ಅಥವಾ ಮುಂದಿನ ಆದೇಶದ ವರೆಗೆ ಈ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ.

ಉತ್ತರ ಪ್ರದೇಶ ಕೇಡರ್‌ನ 1981ರ ಬ್ಯಾಚ್‌ನ ಐಎಎಸ್‌ ಅಧಿಕಾರಿಯಾಗಿರುವ ಅಯ್ಯರ್‌, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಪ್ರಮುಖ ಯೋಜನೆ 'ಸ್ವಚ್ಚ ಭಾರತ ಮಿಷನ್‌' ಹಿಂದಿನ ಶಕ್ತಿ ಎನಿಸಿದ್ದರು.

2009ರಲ್ಲಿ ಭಾರತೀಯ ಆಡಳಿತ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದಿದ್ದ ಅಯ್ಯರ್‌, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ತಜ್ಞರಾಗಿ ವಿಶ್ವಸಂಸ್ಥೆಯಲ್ಲಿಯೂ ಕಾರ್ಯನಿರ್ವಹಿಸಿದ್ದಾರೆ.

ಕಾಂತ್‌ ಅವರು, ನೀತಿ ಆಯೋಗದ ಸಿಇಒ ಆಗಿ 2016ರ ಫೆಬ್ರುವರಿ 17ರಂದು ಎರಡು ವರ್ಷಗಳ ಅವಧಿಗೆ ನೇಮಕವಾಗಿದ್ದರು. ನಂತರ ಅವರ ಅಧಿಕಾರಾವಧಿಯನ್ನು ಎರಡು ಬಾರಿ (2019ರ ಜೂನ್‌ 30ರ ವರೆಗೆ ಹಾಗೂ 2022ರ ಜೂನ್‌ 30ರ ವರೆಗೆ) ವಿಸ್ತರಿಸಲಾಗಿತ್ತು. ಆಯೋಗದ ನೀತಿ ನಿರೂಪಣೆಯಲ್ಲಿ‌ ಅವರು ಪ್ರಮುಖ ಪಾತ್ರವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು