ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇತಾಜಿ ಆದರ್ಶವು ಆರ್‌ಎಸ್‌ಎಸ್‌ ಸಿದ್ಧಾಂತಕ್ಕೆ ವ್ಯತಿರಿಕ್ತ: ಅನಿತಾ ಬೋಸ್‌

Last Updated 21 ಜನವರಿ 2023, 20:21 IST
ಅಕ್ಷರ ಗಾತ್ರ

ಕೋಲ್ಕತ್ತ: ಆರ್‌ಎಸ್‌ಎಸ್‌ನ ಸಿದ್ಧಾಂತವು ಒಂದು ಧ್ರುವವಾದರೆ ನೇತಾಜಿ ಸುಭಾಸ್‌ಚಂದ್ರ ಬೋಸ್‌ ಅವರ ಆದರ್ಶಗಳು ಮತ್ತೊಂದು ಧ್ರುವ. ಅವೆರಡು ಒಂದಾಗಲು ಸಾಧ್ಯವೇ ಇಲ್ಲ ಎಂದು ಬೋಸ್‌ ಅವರ ಮಗಳು ಅನಿತಾ ಬೋಸ್‌ ಪಫ್‌ ಹೇಳಿದ್ದಾರೆ. ಬೋಸ್‌ ಅವರ ಜನ್ಮದಿನವನ್ನು ಸೋಮವಾರ ಅದ್ದೂರಿಯಾಗಿ ಆಚರಿಸಲು ಆರ್‌ಎಸ್‌ಎಸ್‌ ಸಿದ್ಧತೆ ನಡೆಸಿದೆ. ಹಾಗಾಗಿ, ಅನಿತಾ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಕೋಲ್ಕತ್ತದ ಶಹೀದ್‌ ಮಿನಾರ್ ಮೈದಾನದಲ್ಲಿ ಬೋಸ್‌ ಜನ್ಮದಿನ ಪ್ರಯುಕ್ತ ನಡೆಯಲಿರುವ ಸಾರ್ವಜನಿಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಲಿದ್ದಾರೆ.

ತಮ್ಮ ತಂದೆಯ ಜನ್ಮದಿನ ಆಚರಣೆಯಲ್ಲಿನ ಅದ್ದೂರಿತನವು ‘ಭಾಗಶಃ ಅವರ (ಬಿಜೆಪಿ, ಆರ್‌ಎಸ್‌ಎಸ್‌) ಹಿತಾಸಕ್ತಿಗಾಗಿಯೇ ಇದೆ’ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ. ದೇಶದಲ್ಲಿರುವ ಯಾವುದೇ ಪ‍ಕ್ಷಕ್ಕಿಂತ ಕಾಂಗ್ರೆಸ್‌ನ ಸಿದ್ಧಾಂತದಲ್ಲಿ ಬೋಸ್‌ ಅವರ ಸಿದ್ಧಾಂತದ ಹಲವು ಅಂಶಗಳು ಇವೆ ಎಂದಿದ್ದಾರೆ.

ಎಲ್ಲ ಧರ್ಮಗಳನ್ನೂ ಗೌರವಿಸಬೇಕು ಎಂದು ನೇತಾಜಿ ಬೋಧಿಸಿದ್ದರು. ಆದರೆ, ಈ ಚಿಂತನೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನಲ್ಲಿ ಇಲ್ಲ. ಧರ್ಮನಿಷ್ಠ ಹಿಂದೂವಾಗಿದ್ದ ಬೋಸ್‌ ಅವರು ಎಲ್ಲ ಧರ್ಮಗಳನ್ನೂ ಗೌರವಿಸುತ್ತಿದ್ದರು. ವಿವಿಧ ಧರ್ಮಗಳ ಜನರ ನಡುವೆ ಸಹಕಾರ ಇರಬೇಕು ಎಂಬುದರ ಪರವಾಗಿ ಅವರು ಇದ್ದರು. ಆರ್‌ಎಸ್‌ಎಸ್‌ ಮತ್ತು ಬಿಜೆಪಿಯಲ್ಲಿ ಈ ಧೋರಣೆ ಕಾಣಿಸುವುದಿಲ್ಲ ಎಂದು ಅನಿತಾ ಅವರು ಅಭಿಪ್ರಾಯಪಟ್ಟಿದ್ದಾರೆ.

ಜರ್ಮನಿಯಲ್ಲಿರುವ ಅನಿತಾ ಅವರು ದೂರವಾಣಿ ಮೂಲಕ ‍ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೀಗೆ ಹೇಳಿದ್ದಾರೆ.

‘ನೇತಾಜಿಯವರ ಚಿಂತನೆ ಮತ್ತು ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಆರ್‌ಎಸ್ಎಸ್‌ಗೆ ಅನಿಸಿದ್ದರೆ ಅದು ನಿಜವಾಗಿಯೂ ಒಳ್ಳೆಯದು. ನೇತಾಜಿ ಅವರ ಜನ್ಮದಿನವನ್ನು ಹಲವು ಗುಂಪುಗಳು ವಿವಿಧ ರೀತಿಯಲ್ಲಿ ಆಚರಿಸಲು ಬಯಸಿವೆ. ಇವುಗಳಲ್ಲಿ ಹಲವು ಗುಂಪುಗಳು ನೇತಾಜಿ ಅವರ ಸಿದ್ಧಾಂತವನ್ನು ಒಪ್ಪುತ್ತವೆ’ ಎಂದು ವಿವರಿಸಿದ್ದಾರೆ.

ನೇತಾಜಿ ಅವರು ಆರ್‌ಎಸ್‌ಎಸ್‌ನ ಟೀಕಾಕಾರರಾಗಿದ್ದರೇ ಎಂಬ ಪ್ರಶ್ನೆಗೆ, ‘ಉದ್ಧರಿಸಬಹುದಾದ ಅವರ ಮಾತುಗಳು (ಆರ್‌ಎಸ್‌ಎಸ್‌ಗೆ ಸಂಬಂಧಿಸಿ) ನನಗೆ ಗೊತ್ತಿಲ್ಲ. ಆರ್‌ಎಸ್‌ಎಸ್‌ ಸದಸ್ಯರ ಕುರಿತು ವಿಮರ್ಶಾತ್ಮಕವಾದ ಹೇಳಿಕೆಗಳನ್ನು ಅವರು ನೀಡಿದ್ದಿರಬಹುದು. ಆರ್‌ಎಸ್‌ಎಸ್‌ ಮತ್ತು ನೇತಾಜಿ ಅವರ ಜಾತ್ಯತೀತ ಸಿದ್ಧಾಂತ ಒಟ್ಟಾಗಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.

ನೇತಾಜಿ ಅವರನ್ನು ಗೌರವಿಸುವುದಕ್ಕಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕೈಗೊಂಡ ಹಲವು ಕ್ರಮಗಳನ್ನು ಅನಿತಾ ಅವರು ಮೆಚ್ಚಿಕೊಂಡಿದ್ದಾರೆ.

‘ಇದರಲ್ಲಿ ಎರಡು ವಿಚಾರಗಳಿವೆ. ನೇತಾಜಿ ಕುರಿತಂತೆ, ಸ್ವಾತಂತ್ರ್ಯದ ಬಳಿಕ ಕಾಂಗ್ರೆಸ್‌ ಪಕ್ಷದ ನಿಲುವು ಮುಕ್ತವಾದದ್ದಾಗಿರಲಿಲ್ಲ. ಅಸಹಕಾರ ಚಳವಳಿಯೇ ದೇಶ ಸ್ವಾತಂತ್ರ್ಯ ಪಡೆಯಲು ಕಾರಣ ಎಂಬುದನ್ನೇ ಮುನ್ನೆಲೆಯಲ್ಲಿ ಇರಿಸಲು ಕಾಂಗ್ರೆಸ್ ಬಯಸಿತ್ತು. ಆದರೆ, ನೇತಾಜಿ ಅವರಿಗೆ ಸಂಬಂಧಿಸಿದ ಕಡತಗಳು ಬಹಿರಂಗವಾದ ಬಳಿಕ, ಇಂಡಿಯನ್‌ ನ್ಯಾಷನಲ್ ಆರ್ಮಿ (ಐಎನ್‌ಎ) ಸ್ವಾತಂತ್ರ್ಯ ಬರುವುದಕ್ಕಾಗಿ ವಹಿಸಿದ ಪಾತ್ರ ಏನು ಎಂಬುದು ಗೊತ್ತಾಗಿದೆ. ಎರಡನೆಯದಾಗಿ, ನೇತಾಜಿ ಅವರು ಇಂದಿಗೂ ಬದುಕಿದ್ದು, ಈಗ ಸರ್ಕಾರ ನಡೆಸುತ್ತಿರುವ ಪಕ್ಷದ ಸಿದ್ಧಾಂತಕ್ಕಿಂತ ಭಿನ್ನವಾದ ಸಿದ್ಧಾಂತ ಹೊಂದಿದ್ದರೆ ಅವರಿಗೆ ಗೌರವ ಕೊಡುವ ಕೆಲಸವನ್ನು ಬಿಜೆಪಿ ಮಾಡುತ್ತಿರಲಿಲ್ಲ. ಅವರ (ಆರ್‌ಎಸ್‌ಎಸ್‌–ಬಿಜೆಪಿ) ಹಿತಾಸಕ್ತಿಗಾಗಿಯೇ ಎಲ್ಲವೂ ನಡೆಯುತ್ತಿದೆ’ ಎಂದು ಅನಿತಾ ಅವರು ವಿವರಿಸಿದ್ದಾರೆ.

ಪಶ್ಚಿಮ ಬಂಗಾಳ ಸರ್ಕಾರವು ನೇತಾಜಿ ಅವರಿಗೆ ಸಂಬಂಧಿಸಿದ 64 ಕಡತಗಳನ್ನು 2015ರಲ್ಲಿ ಬಹಿರಂಗಪಡಿಸಿತ್ತು. ಅದರ ಮರುವರ್ಷ, ಕೇಂದ್ರ ಸರ್ಕಾರವು ನೂರು ಕಡತಗಳನ್ನು ಬಹಿರಂಗಪಡಿಸಿತ್ತು.

ಭಿನ್ನ ವರದಿ
ನೇತಾಜಿ ಅವರು ನಿಗೂಢವಾಗಿ ಕಣ್ಮರೆಯಾಗಲು ಕಾರಣವೇನು ಎಂಬುದನ್ನು ಪತ್ತೆ ಮಾಡುವುದಕ್ಕಾಗಿ ಸ್ವಾತಂತ್ರ್ಯದ ಬಳಿಕ ಮೂರು ಆಯೋಗಗಳನ್ನು ಕೇಂದ್ರ ಸರ್ಕಾರ ನೇಮಿಸಿದೆ. ಶಾ ನವಾಜ್ ಆಯೋಗ ಮತ್ತು ಖೋಸ್ಲ ಆಯೋಗವನ್ನು ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ನೇಮಿಸಲಾಗಿತ್ತು.

ತೈವಾನ್‌ನ ತಾಯ್‌ಹೊಕು ವಿಮಾನ ನಿಲ್ದಾಣದಿಂದ ಹೊರಟ ನೇತಾಜಿ ಅವರಿದ್ದ ವಿಮಾನವು ಸ್ವಲ್ಪ ಹೊತ್ತಿನಲ್ಲಿ ಪತನಗೊಂಡಿತು ಎಂದು ಈ ಎರಡೂ ಆಯೋಗಗಳು ಹೇಳಿವೆ. ಮೂರನೇ ಆಯೋಗವನ್ನು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ನೇಮಿಸಲಾಗಿದೆ. ನೇತಾಜಿ ಅವರು ವಿಮಾನ ಪತನಗೊಂಡು ಮೃತಪಟ್ಟಿಲ್ಲ ಎಂದು ಈ ಆಯೋಗವು ಹೇಳಿದೆ.

*

ಅತ್ಯಂತ ಸರಳವಾಗಿ ಹೇಳುವುದಾದರೆ, ಆರ್‌ಎಸ್‌ಎಸ್‌–ಬಿಜೆಪಿ ಬಲಪಂಥೀಯವಾದರೆ, ನೇತಾಜಿ ಎಡಪಂಥೀಯರಾಗಿದ್ದರು.
–ಅನಿತಾ ಬೋಸ್‌ ಪಫ್‌, ನೇತಾಜಿ ಮಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT