ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಲಿಕಾಪ್ಟರ್‌ಗೆ ತಡೆ: ‘ಸೋಲಿನ ಭಯದಿಂದ ಬಿಜೆಪಿ ಸಂಚು’ ಎಂದ ಅಖಿಲೇಶ್‌ ಯಾದವ್‌

Last Updated 28 ಜನವರಿ 2022, 19:25 IST
ಅಕ್ಷರ ಗಾತ್ರ

ಲಖನೌ: ‘ಸೋಲುವ ಭಯದಲ್ಲಿರುವ ಬಿಜೆಪಿ ನನ್ನ ವಿರುದ್ಧ ಸಂಚು ಮಾಡಿದೆ’ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಆರೋಪಿಸಿದ್ದಾರೆ. ದೆಹಲಿಯಿಂದ ಅವರ ಹೆಲಿಕಾಪ್ಟರ್‌ ಉತ್ತರ ಪ್ರದೇಶದ ಮುಜಫ್ಫರ್‌ನಗರಕ್ಕೆ ತೆರಳಲು ಅನುಮತಿ ನಿರಾಕರಿಸಿದ ಕಾರಣ ಅಖಿಲೇಶ್ ಅವರು ಈ ಆರೋಪ ಮಾಡಿದ್ದಾರೆ.

ಶುಕ್ರವಾರ ಮಧ್ಯಾಹ್ನ ಅವರು ಉತ್ತರ ಪ್ರದೇಶದಲ್ಲಿನ ಮುಜಫ್ಫರ್‌ನಗರದಲ್ಲಿ ಸಮಾಜವಾದಿ ಪಕ್ಷ ಮತ್ತು ಜಯಂತ್ ಚೌಧರಿ ಅವರ ಆರ್‌ಎಲ್‌ಡಿ ಪ್ರಚಾರ ಕಾರ್ಯಕ್ರಮವನ್ನು ಆಯೋಜಿಸಿದ್ದವು. ಅಲ್ಲಿಗೆ ತೆರಳಲು ಅಖಿಲೇಶ್ ಯಾದವ್ ಅವರು ದೆಹಲಿಯಿಂದ ಹೆಲಿಕಾಪ್ಟರ್‌ ಮೂಲಕ ಹೊರಡಬೇಕಿತ್ತು. ಆದರೆ ಅವರ ಹೆಲಿಕಾಪ್ಟರ್ ಹಾರಾಟಕ್ಕೆ ಅನುಮತಿ ನೀಡಿರಲಿಲ್ಲ. ಈ ಬಗ್ಗೆ ಅಖಿಲೇಶ್ ಟ್ವೀಟ್ ಮಾಡಿದ್ದರು. ಹೆಲಿಕಾಪ್ಟರ್‌ ಮುಂದೆ ತಾವು ನಿಂತಿರುವ ಚಿತ್ರವನ್ನೂ ಅವರು ಟ್ವೀಟ್ ಮಾಡಿದ್ದರು.

‘ನನ್ನ ಹೆಲಿಕಾಪ್ಟರ್‌ ಹಾರಾಟಕ್ಕೆ ಯಾವುದೇ ಕಾರಣ ಇಲ್ಲದೆ ಅನುಮತಿ ನಿರಾಕರಿಸಲಾಗಿದೆ. ಇಲ್ಲಿಂದ ಮುಜಫ್ಫರ್‌ನಗರಕ್ಕೆ ಹೋಗಲು ಅನುಮತಿ ನೀಡಿಲ್ಲ. ಆದರೆ ಇದೇ ಸಂದರ್ಭದಲ್ಲಿ ಬಿಜೆಪಿ ನಾಯಕರೊಬ್ಬರ ಹೆಲಿಕಾಪ್ಟರ್‌ ಹಾರಾಟಕ್ಕೆ ಅನುಮತಿ ನೀಡಲಾಯಿತು. ಇದು ಈ ಚುನಾವಣೆಯಲ್ಲಿ ಸೋಲುತ್ತಿರುವ ಬಿಜೆಪಿಯ ಸಂಚು ಅಷ್ಟೆ. ಅವರು ಹತಾಶರಾಗಿದ್ದಾರೆ ಎಂಬುದಕ್ಕೆ ಇದೇ ಸಾಕ್ಷ್ಯ’ ಎಂದು ಅಖಿಲೇಶ್ ಆರೋಪಿಸಿದ್ದಾರೆ.

ನಂತರ ಅವರ ಹೆಲಿಕಾಪ್ಟರ್‌ ಹಾರಾಟಕ್ಕೆ ಅನುಮತಿ ನೀಡಲಾಯಿತು. ಈ ಬಗ್ಗೆ ಸಹ ಅವರು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ‘ಈ ರೀತಿ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದು ಸೋಲುವ ಭಯದಲ್ಲಿರುವವರ ಲಕ್ಷಣ. ಸಮಾಜವಾದಿ ಪಕ್ಷದ ಇತಿಹಾಸದಲ್ಲಿ ಇದು ಐತಿಹಾಸಿಕ ದಿನ ಎಂದು ದಾಖಲಾಗುತ್ತದೆ. ಈಗ ನಾವು ಗೆಲುವಿನತ್ತ ಹಾರಾಟ ಆರಂಭಿಸುತ್ತಿದ್ದೇವೆ’ ಎಂದು ಅಖಿಲೇಶ್ ಟ್ವೀಟ್ ಮಾಡಿದ್ದರು.

ಅಖಿಲೇಶ್ ಅವರ ಆರೋಪದ ಬಗ್ಗೆ ಬಿಜೆಪಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೆಲಿಕಾಪ್ಟರ್ ಹಾರಾಟಕ್ಕೆ ಅನುಮತಿ ನಿರಾಕರಿಸಿದ್ದು ಏಕೆ ಎಂಬುದರ ಮಾಹಿತಿ ಲಭ್ಯವಾಗಿಲ್ಲ. ಎರಡೂವರೆ ಗಂಟೆಯ ವಿಳಂಬದ ನಂತರ ಅಖಿಲೇಶ್ ಅವರು ಮುಜಫ್ಫರ್‌ನಗರಕ್ಕೆ ತೆರಳಿದರು. ಅಲ್ಲಿ ನಿಗದಿಯಾಗಿದ್ದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾದರು. ಅಖಿಲೇಶ್ ಮತ್ತು ಆರ್‌ಎಲ್‌ಡಿಯ ಜಯಂತ್ ಚೌಧರಿ ಅವರು ಜಂಟಿಯಾಗಿ ಪ್ರಚಾರ ಕಾರ್ಯಕ್ರಮ ನಡೆಸಿದರು.

‘ಬಿಜೆಪಿ ಹತಾಶವಾಗಿದೆ’

‘ಬಿಜೆಪಿ ತನ್ನಿಂದ ದೂರ ಹೋದವರಿಗೆ, ವಾಪಸ್ ಬರುವಂತೆ ಪದೇ–ಪದೇ ಆಹ್ವಾನ ನೀಡುತ್ತಿದೆ. ಸೋಲುವ ಭಯದಿಂದಬಿಜೆಪಿ ಎಷ್ಟು ಹತಾಶವಾಗಿದೆ ಎಂಬುದನ್ನು ಈ ಅಹ್ವಾನಗಳೇ ತೋರಿಸುತ್ತಿವೆ’ ಎಂದು ಅಖಿಲೇಶ್ ಯಾದವ್ ಅವರು ಲೇವಡಿ ಮಾಡಿದ್ದಾರೆ.

‘ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಳ್ಳಲು ಯಾರು ತಯಾರಿದ್ದಾರೆ? ಅಮಿತ್ ಶಾ ಅವರ ಆಹ್ವಾನವನ್ನು ಒಪ್ಪಿಕೊಳ್ಳುವವರು ಯಾರೂ ಇಲ್ಲ’ ಎಂದು ಅಖಿಲೇಶ್ ಹೇಳಿದ್ದಾರೆ.

‘ಈಗ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಜಾಟ್‌ ಸಮುದಾಯವನ್ನು ಓಲೈಸಲು ಯತ್ನಿಸುತ್ತಿದೆ. ಉತ್ತರ ಪ್ರದೇಶದ ಒಂದು ಭಾಗವನ್ನು ಜಾಟ್‌ಲ್ಯಾಂಡ್‌ ಎಂದು ಕರೆಯುತ್ತಿದೆ. ಬಿಜೆಪಿಯ ಈ ಜಾತಿ ಧ್ರುವೀಕರಣದಿಂದ ಯಾವುದೇ ಉಪಯೋಗವಿಲ್ಲ. ಮೊದಲು ಅನ್ಯಾಯಕ್ಕೆ ಗುರಿಯಾದ ರೈತರಿಗೆ ನ್ಯಾಯ ಒದಗಿಸಿ. ಲಖಿಂಪುರ ಖೇರಿ ಪ್ರಕರಣದಲ್ಲಿ ಏನಾಗಿದೆ? ಆರೋಪಿಯ ತಂದೆ ಅಜಯ್ ಮಿಶ್ರಾ ಇನ್ನೂ ಕೇಂದ್ರ ಸಂಪುಟದಲ್ಲಿ ಇದ್ದಾರೆ. ಆದರೆ ರೈತರನ್ನು ಬಂಧಿಸಲಾಗುತ್ತಿದೆ’ ಎಂದು ಆರ್‌ಎಲ್‌ಡಿಯ ಜಯಂತ್ ಚೌಧರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT