ಶನಿವಾರ, ಮಾರ್ಚ್ 25, 2023
29 °C
‘ಪ್ರಾಮಾಣಿಕ ಅಧಿಕಾರಿಯ ವ್ಯಾಪ್ತಿ ಮೀರಿ ಕೋಟ್ಯಂತರ ಸುಲಿಗೆ’

ಸಮೀರ್ ವಾಂಖೆಡೆ ಲಕ್ಷಾಂತರ ರೂಪಾಯಿ ಮೌಲ್ಯದ ಬಟ್ಟೆ ಧರಿಸುತ್ತಾರೆ:ಮಹಾ ಸಚಿವ ಮಲಿಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಎನ್‌ಸಿಪಿ ವಕ್ತಾರ, ಮಹಾರಾಷ್ಟ್ರ ಸಚಿವ ನವಾಬ್‌ ಮಲಿಕ್‌ ಮಾದಕ ದ್ರವ್ಯ ನಿಗ್ರಹ ದಳದ (ಎನ್‌ಸಿಬಿ) ವಲಯ ನಿರ್ದೇಶಕ ಸಮೀರ್‌ ವಾಂಖೆಡೆ ಮೇಲೆ ತಮ್ಮ ದಾಳಿ ತೀವ್ರಗೊಳಿಸಿದ್ದಾರೆ. 

ವಾಂಖೆಡೆ ಅವರು ಕೋಟ್ಯಂತರ ಹಣವನ್ನು ಸುಲಿಗೆ ಮಾಡಿದ್ದಾರೆ. ಅವರು ಸುಮಾರು ₹ 70 ಸಾವಿರ ಮೌಲ್ಯದ ದಿರಿಸು ಬಳಸುತ್ತಿದ್ದಾರೆ ಎಂದು ಮಂಗಳವಾರ ಆರೋಪಿಸಿದ್ದಾರೆ. 

ತಮಗೆ ಭೂಗತ ಜಗತ್ತಿನೊಂದಿಗೆ ನಂಟಿದೆ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರು ಮಾಡಿದ ಆರೋಪವನ್ನು ಅವರು ಇದೇ ವೇಳೆ ತಳ್ಳಿ ಹಾಕಿದರು.

‘ಆರೋಪ ನಿಜವಾಗಿದ್ದರೆ ನೀವು (ಫಡಣವೀಸ್‌) ಐದು ವರ್ಷಗಳವರೆಗೆ ಮುಖ್ಯಮಂತ್ರಿಯಾಗಿದ್ದಾಗಲೂ ನನ್ನ ವಿರುದ್ಧ ಏಕೆ ತನಿಖೆ ನಡೆಸಲಿಲ್ಲ?’ ಎಂದು ಪ್ರಶ್ನಿಸಿದರು.  

ವಾಂಖೆಡೆ, ಫಡಣವೀಸ್‌ ಮತ್ತು ಅವರ ಪತ್ನಿ ಅಮೃತಾ ಅವರೊಡನೆ ಮಾದಕ ವಸ್ತು ಕಳ್ಳಸಾಗಣೆದಾರರ ಸಂಪರ್ಕ ಹೊಂದಿರುವುದಾಗಿ ಆರೋಪಿಸಿರುವ ಮಲಿಕ್‌, ವಾಂಖೆಡೆ ಅವರು ಲಕ್ಷ ಮೌಲ್ಯದ ಪ್ಯಾಂಟ್‌, ₹ 70 ಸಾವಿರ ಮೌಲ್ಯದ ಶರ್ಟ್‌ ಮತ್ತು ₹ 25–50 ಲಕ್ಷ ಮೌಲ್ಯದ ಕೈ ಗಡಿಯಾರ ಧರಿಸಿದ್ದರು ಎಂದು ಹೇಳಿದರು. 

‘ಪ್ರಾಮಾಣಿಕ ಅಧಿಕಾರಿಯೊಬ್ಬರು ಇಂತಹ ದುಬಾರಿ ಬಟ್ಟೆಗಳನ್ನು ಖರೀದಿಸಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿರುವ ಮಲಿಕ್‌, ‘ಅವರು (ವಾಂಖೆಡೆ) ಜನರನ್ನು ಬೆದರಿಸುವ ಮೂಲಕ ಕೋಟ್ಯಂತರ ಸುಲಿಗೆ ಮಾಡಿದ್ದಾರೆ’ ಎಂದು ಆರೋಪಿಸಿದರು.

ವಾಂಖೆಡೆ ಅವರು ಎನ್‌ಸಿಬಿ ಕೆಲಸ ನಿರ್ವಹಿಸಲು ಖಾಸಗಿ ಪಡೆಯೊಂದನ್ನು ನಿಯೋಜಿಸಿಕೊಂಡಿದ್ದರು. ಅವರು ಜನರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಿದ್ದರು ಎಂದೂ ಮಲಿಕ್‌ ಹೇಳಿದರು.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು