ಸಚಿವ ನವಾಬ್ ಮಲಿಕ್ ವಿರುದ್ಧ ಪ್ರಕರಣ ದಾಖಲಿಸಿದ ಸಮೀರ್ ವಾಂಖೆಡೆ ತಂದೆ

ಮುಂಬೈ: ಮಹಾರಾಷ್ಟ್ರದ ಸಚಿವ ನವಾಬ್ ಮಲಿಕ್ ಅವರು ತಮ್ಮ ಹಾಗೂ ಕುಟುಂಬಸ್ಥರ ಬಗ್ಗೆ ಜಾತಿ ಹೆಸರಲ್ಲಿ ಸುಳ್ಳು ಮತ್ತು ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿ ಎನ್‌ಸಿಬಿಯ ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅವರ ತಂದೆ ಧ್ಯಾನದೇವ್ ವಾಂಖೆಡೆ ಅವರು ದೂರು ದಾಖಲಿಸಿದ್ದಾರೆ ಎಂದು ಮಂಗಳವಾರ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸಚಿವ ಮಲಿಕ್ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿ ಧ್ಯಾನದೇವ್ ಅವರು ಸೋಮವಾರ ಸಹಾಯಕ ಪೊಲೀಸ್ ಆಯುಕ್ತರಿಗೆ ಲಿಖಿತ ದೂರು ನೀಡಿದ್ದಾರೆ.
‘ನಾವು ಪರಿಶಿಷ್ಟ ಜಾತಿಯಡಿ ಬರುವ ಮಹಾರ್ ಸಮುದಾಯಕ್ಕೆ ಸೇರುತ್ತೇವೆ. ಸಚಿವ ಮಲಿಕ್ ಜಾತಿಯನ್ನು ನಿಂದಿಸಿದ್ದಾರೆ’ ಎಂದು ಅವರು ಉಲ್ಲೇಖಿಸಿದ್ದಾರೆ.
ಸಚಿವರ ವಿರುದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಾಯ್ದೆ (ದೌರ್ಜನ್ಯ ತಡೆ) ಹಾಗೂ ಐಪಿಸಿ ಸೆಕ್ಷನ್ 503 (ಬೆದರಿಕೆ) ಸೇರಿದಂತೆ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಬೇಕು ಎಂದೂ ಕೋರಿದ್ದಾರೆ.
ಸಚಿವ ಮಲಿಕ್ ವೈಯಕ್ತಿಕ ದ್ವೇಷದಿಂದ ತಮ್ಮ ಮಗಳು ಯಾಸ್ಮೀನ್ ಅವರ ಫೇಸ್‌ಬುಕ್, ಇನ್‌ಸ್ಟಾಗ್ರಾಂನಂತಹ ವೈಯಕ್ತಿಕ ಖಾತೆಗಳಿಂದ ಆಕೆಯ ಚಿತ್ರಗಳನ್ನು ಕದ್ದು ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಹಂಚುವ ಮೂಲಕ ಕಾನೂನುಬಾಹಿರವಾಗಿ ಉಪಯೋಗಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ತಮ್ಮ ಮಗಳು ಮತ್ತು ಕುಟುಂಬದ ಸದಸ್ಯರು ಮಾಲ್ಡೀವ್ಸ್‌ನಲ್ಲಿದ್ದಾಗ ಸುಲಿಗೆಯಲ್ಲಿ ತೊಡಗಿದ್ದರು ಎಂದು ಸಚಿವರು ಆಧಾರಹಿತ ಆರೋಪ ಮಾಡಿದ್ದಾರೆ. ಸಚಿವರು ಈಗ ನೇರವಾಗಿ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಿಮ್ಮ ನಾದಿನಿ ಡ್ರಗ್ಸ್ ಜಾಲದಲ್ಲಿದ್ದಾರೆಯೇ?: ಸಮೀರ್ ವಾಂಖೆಡೆಗೆ ಸಚಿವ ಪ್ರಶ್ನೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.