ಮಂಗಳವಾರ, ಏಪ್ರಿಲ್ 20, 2021
27 °C

ರಾಜಕೀಯಕ್ಕೆ ಗುಡ್ ಬೈ ಹೇಳಿದ ಶಶಿಕಲಾ ನಟರಾಜನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ರಾಜಕೀಯಕ್ಕೆ ಗುಡ್ ಬೈ ಹೇಳಿದ್ದಾರೆ.

"ನಾನು ಯಾವತ್ತೂ ಯಾವುದೇ ಹುದ್ದೆಗೆ ಆಶಿಸಲಿಲ್ಲ. ತಮಿಳುನಾಡಿನ ಜನರಿಗೆ ನಾನು ಕೃತಜ್ಞಳಾಗಿದ್ದೇನೆ. ರಾಜಕೀಯದಿಂದ ದೂರ ಸರಿಯುತ್ತೇನೆ. ಅಮ್ಮನ ಸರ್ಕಾರವನ್ನು ತಮಿಳುನಾಡಿನಲ್ಲಿ ಸ್ಥಾಪಿಸಬೇಕೆಂದು ಪ್ರಾರ್ಥಿಸುತ್ತೇನೆ" ಎಂದು ಅವರು ನಿರ್ಗಮನದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದ ಶಶಿಕಲಾ ಹಾಗೂ ಇತರರು ಜ. 27ರಂದು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿದ್ದರು. ಬಳಿಕ ಕೋವಿಡ್ ಚಿಕಿತ್ಸೆ ಪಡೆದು ಮೆರವಣಿಗೆಯಲ್ಲಿ ಫೆಬ್ರವರಿ 9 ರಂದು ಚೆನ್ನೈಗೆ ತೆರಳಿದ್ದರು. ದಾರಿಯುದ್ದಕ್ಕೂ ಭಾರೀ ಜನ ಬೆಂಬಲ ವ್ಯಕ್ತವಾಗಿತ್ತು. ಹೀಗಾಗಿ, ವಿಧಾನಸಭೆ ಚುನಾವಣೆಯಲ್ಲಿ ಪ್ರಮುಖ ಪಾತ್ರವಹಿಸುವ ನಿರೀಕ್ಷೆ ಇತ್ತು. ಆದರೆ, ಶಶಿಕಲಾ ರಾಜಕೀಯ ಸನ್ಯಾಸ ಘೋಷಣೆ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ತಮಿಳುನಾಡು ವಿಧಾನಸಭೆಗೆ ಏಪ್ರಿಲ್ 6 ರಂದು ಚುನಾವಣೆ ನಡೆಯಲಿದೆ. ಚುನಾವಣೆ ಘೋಷಣೆಯಾದ ಐದೇ ದಿನಗಳಲ್ಲಿ ರಾಜಕೀಯದಿಂದ ದೂರ ಉಳಿಯುವುದಾಗಿ ಘೋಷಿಸಿದ್ದಾರೆ.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರಲು ಜಯಲಲಿತಾಗೆ ನಿಷ್ಠರಾಗಿದ್ದ ಜನರು ಒಗ್ಗೂಡುವಂತೆ ಕರೆ ನೀಡಿದ್ದ ಶಶಿಕಲಾ, ಅದಾದ ಸರಿಯಾಗಿ ಒಂದು ವಾರದ ನಂತರ ಈ ನಾಟಕೀಯ ಪ್ರಕಟಣೆ ಮಾಡಿದ್ದಾರೆ.

ಇದೇವೇಳೆ, "ನಮ್ಮ ಸಾಮಾನ್ಯ ಶತ್ರು" ಡಿಎಂಕೆ ಪಕ್ಷವನ್ನು ಅಧಿಕಾರದಿಂದ ಹೊರಗಿಟ್ಟು, ರಾಜ್ಯದಲ್ಲಿ "ಅಮ್ಮನ ಸುವರ್ಣ ಆಡಳಿತ" ವನ್ನು ಮುಂದುವರೆಸುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಜಯಲಲಿತಾ ಬೆಂಬಲಿಗರಿಗೆ ಕರೆ ನೀಡಿದ್ದಾರೆ. 

ಈಗಾಗಲೇ, ಅಣ್ಣಾಡಿಎಂಕೆ ಪಕ್ಷದಿಂದ ಶಶಿಕಲಾ ಅವರನ್ನು ಉಚ್ಚಾಟಿಸಿರುವ ಪಳನಿಸ್ವಾಮಿ, ಪಕ್ಷದ ಬಾಗಿಲು ಮುಚ್ಚಿದ್ದರು. ಹೀಗಾಗಿ, ಬೇರೆ ದಾರಿ ಕಾಣದೆ ಶಶಿಕಲಾ ರಾಜಕೀಯ ಸನ್ಯಾಸದ ನಿರ್ಧಾರ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಶಶಿಕಲಾ ಅವರ ನಿರ್ಧಾರವು ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಎಐಎಡಿಎಂಕೆ ಯಲ್ಲಿ ತನ್ನ ಹಿಡಿತವನ್ನು ಬಲಪಡಿಸಲು ಪಳನಿಸ್ವಾಮಿಗೆ ಅವಕಾಶ ಕಲ್ಪಿಸಿದೆ. ವಾಸ್ತವವಾಗಿ, ಶಶಿಕಲಾ ಅಥವಾ ದಿನಕರನ್ ಅವರನ್ನು ಮತ್ತೆ ಎಐಎಡಿಎಂಕೆ ಪಕ್ಷಕ್ಕೆ ಸೇರಿಸಿಕೊಳ್ಳಲು ಅಥವಾ ಅವರ ಜೊತೆ ಮೈತ್ರಿಗೆ ಪಳನಿಸ್ವಾಮಿಯವರ ವಿರೋಧವಿರುವುದು ಶಶಿಕಲಾ ರಾಜಕೀಯ ಸನ್ಯಾಸಕ್ಕೆ ಪ್ರಮುಖ ಕಾರಣ ಎಂದೇ ವಿಶ್ಲೇಷಿಸಲಾಗುತ್ತಿದೆ.

ಶಶಿಕಲಾ ರಾಜಕೀಯ ನಿವೃತ್ತಿಗೆ ಎಐಎಡಿಎಂಕೆ ಹರ್ಷ

ವಿ.ಕೆ.ಶಶಿಕಲಾ ಅವರು ರಾಜಕೀಯದಿಂದ ದೂರ ಉಳಿಯುವುದಾಗಿ ಬುಧವಾರ ಪ್ರಕಟಿಸಿದ ನಿರ್ಧಾರಕ್ಕೆ ತಮಿಳುನಾಡಿನ ಆಡಳಿತಾರೂಢ ಎಐಎಡಿಎಂಕೆ ಹರ್ಷ ವ್ಯಕ್ತಪಡಿಸಿದೆ. ಶಶಿಕಲಾ ಅವರ ನಿರ್ಧಾರದಿಂದ ಪಕ್ಷಕ್ಕೆ ಒಳಿತಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ಒಂದೊಮ್ಮೆ ಪಕ್ಷದ ಮೇಲೆ ಹಿಡಿತ ಸಾಧಿಸಿದ್ದ ಶಶಿಕಲಾ ಅವರು ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿ ಬಂದಿದ್ದಾರೆ. ಅವರು ಬರೆದಿರುವ ಎರಡು ಪುಟಗಳ ಪತ್ರವು, 2019ರ ಚುನಾವಣೆಯಲ್ಲಿ ಆದ ರೀತಿಯಲ್ಲಿ  ಪಕ್ಷದ ಮತಬ್ಯಾಂಕ್ ಒಡೆಯದಂತೆ ತಡೆಯುವ ಉದ್ದೇಶ ಹೊಂದಿದೆ ಎಂದು ಎಐಎಡಿಎಂಕೆ ಮುಖಂಡರೊಬ್ಬರು ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಭಾರಿ ಸಂದಿಗ್ಧದಲ್ಲಿದ್ದ ಪಕ್ಷವನ್ನು ಶಶಿಕಲಾ ಅವರ ನಿರ್ಧಾರವು ಪಾರು ಮಾಡಿದೆ. ಅವರ ನಡೆಯಿಂದ ಪಕ್ಷಕ್ಕೆ ಸಾಕಷ್ಟು ಒಳಿತಾಗಲಿದೆ ಎಂದು ಅವರು ಹೇಳಿದ್ದಾರೆ. ಶಶಿಕಲಾ ಅವರು ಪತ್ರದಲ್ಲಿ ಎಲ್ಲಿಯೂ ಎಐಎಡಿಎಂಕೆ ಹೆಸರು ಉಲ್ಲೇಖಿಸಿರಲಿಲ್ಲ. ‘ಜಯಲಲಿತಾ ಅವರ ಬೆಂಬಲಿಗರ ಶತ್ರು ಎಂದರೆ ಡಿಎಂಕೆ’ ಎಂದು ಶಶಿಕಲಾ ಹೇಳಿರುವುದು ಎಐಎಡಿಎಂಕೆ ಮತ್ತು ಮುಖ್ಯಮಂತ್ರಿ ಅಭ್ಯರ್ಥಿ ಪಳನಿಸ್ವಾಮಿ ಅವರಿಗೆ ನೆರವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು