ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಕಾರ್ಯಕರ್ತರ ಅರ್ಜಿವಿಚಾರಣೆ: ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸುಪ್ರೀಂ ನೋಟಿಸ್

ಬಿಜೆಪಿ ಕಾರ್ಯಕರ್ತರ ಸಂಬಂಧಿಕರ ಅರ್ಜಿ ವಿಚಾರಣೆಗೆ ‘ಸುಪ್ರೀಂ’ ಅಸ್ತು
Last Updated 18 ಮೇ 2021, 14:23 IST
ಅಕ್ಷರ ಗಾತ್ರ

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಫಲಿತಾಂಶದ ನಂತರ ನಡೆದ ಹಿಂಸಾಚಾರದಲ್ಲಿ ಸಾವಿಗೀಡಾದ ಇಬ್ಬರು ಬಿಜೆಪಿ ಕಾರ್ಯಕರ್ತರ ಸಂಬಂಧಿಕರ ಮನವಿಯನ್ನು ಆಲಿಸಲು ಮಂಗಳವಾರ ಒಪ್ಪಿಗೆ ನೀಡಿರುವ ಸುಪ್ರೀಂ ಕೋರ್ಟ್, ಪ್ರಕರಣ ಸಂಬಂಧ ಪ್ರತಿಕ್ರಿಯೆ ಕೋರಿ ಪಶ್ಚಿಮ ಬಂಗಾಳ ಸರ್ಕಾರಕ್ಕೆ ನೋಟಿಸ್ ನೀಡಿದೆ.

ನ್ಯಾಯಮೂರ್ತಿಗಳಾದ ವಿನೀತ್ ಸರಣ್ ಮತ್ತು ಬಿ.ಆರ್. ಗವಾಯಿ ಅವರನ್ನೊಳಗೊಂಡ ನ್ಯಾಯಪೀಠವು ಅರ್ಜಿದಾರರಾದ ಬಿಸ್ವಜಿತ್ ಸರ್ಕಾರ್ ಹಾಗೂ ಸ್ವರ್ಣಲತಾ ಅಧಿಕಾರಿ ಅವರು ಸಲ್ಲಿಸಿದ ಮನವಿಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

‘ಚುನಾವಣೆಗೆ ಸಂಬಂಧಿಸಿದ ಹಿಂಸಾಚಾರದಲ್ಲಿ ಬಿಸ್ವಜಿತ್ ಅವರ ಹಿರಿಯ ಸಹೋದರ ಅಭಿಜಿತ್ ಸರ್ಕಾರ್ ಹಾಗೂ ಸ್ವರ್ಣಲತಾ ಅಧಿಕಾರಿ ಅವರ ಪತಿ ಹರಣ್ ಅಧಿಕಾರಿಯನ್ನು ಹತ್ಯೆ ಮಾಡಲಾಗಿದೆ. ಈ ಕುರಿತು ಸಿಬಿಐ ಅಥವಾ ಎಸ್‌ಐಟಿ ತನಿಖೆ ನಡೆಸಬೇಕೆಂದೂ’ ಎಂದು ಮನವಿಯಲ್ಲಿ ಕೋರಲಾಗಿದೆ.

ಅರ್ಜಿದಾರರ ಪರ ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ, ‘ಇದೊಂದು ಗಂಭೀರ ಪ್ರಕರಣವಾಗಿದೆ. ವಿಧಾನಸಭಾ ಚುನಾವಣೆಯ ಮತ ಎಣಿಕೆಯ ದಿನದಂದೇ ಬಿಜೆಪಿಯ ಇಬ್ಬರು ಕಾರ್ಯಕರ್ತರನ್ನು ಭೀಕರವಾಗಿ ಹತ್ಯೆ ಮಾಡಲಾಗಿದ್ದರೂ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ರಾಜ್ಯ ಸರ್ಕಾರದ ನಿಷ್ಕ್ರಿಯತೆಗೆ ಸಾಕ್ಷಿ. ಹಿಂಸಾಚಾರ ನಡೆಯುತ್ತಿದ್ದರೂ ಪೊಲೀಸರು ಜಡವಾಗಿ ನಿಂತಿದ್ದರು’ ಎಂದು ವಾದಿಸಿದರು.

‘ದೂರು ನೀಡಿದ್ದರೂ ಪೊಲೀಸರು ಯಾವ ಕ್ರಮವನ್ನೂ ಕೈಗೊಂಡಿಲ್ಲ ಹಾಗಾಗಿ, ಈ ಪ್ರಕರಣವನ್ನು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಸಿಬಿಐ ಅಥವಾ ಎಸ್‌ಐಟಿಯಂಥ ಸಂಸ್ಥೆ ತನಿಖೆ ನಡೆಸಬೇಕು’ ಎಂದು ಅವರು ಕೋರಿದರು. ‌

‘ಮೇ 2ರಂದು ಅಭಿಜಿತ್ ಸರ್ಕಾರ ಅವರನ್ನು ಅವರ ಮನೆಯಿಂದ ಹೊರಗೆ ಎಳೆದೊಯ್ಯಲಾಗಿದೆ. ಇದನ್ನು ಜನರು ನೋಡಿದ್ದಾರೆ. ತಾಯಿಯ ಎದುರೇ ಅಭಿಜಿತ್ ಅವರ ಕುತ್ತಿಗೆಗೆ ತಂತಿಕಟ್ಟಿ, ತಲೆಗೆ ಒಡೆದು ಕ್ರೂರವಾಗಿ ಹತ್ಯೆ ಮಾಡಲಾಗಿದೆ’ ಎಂದೂ ಅರ್ಜಿದಾರರ ಪರ ವಕೀಲರು ನ್ಯಾಯಾಲದಲ್ಲಿ ವಾದ ಮಂಡಿಸಿದ್ದಾರೆ.

ವಾದವನ್ನು ಆಲಿಸಿದ ನ್ಯಾಯಾಲಯವು, ಎಸ್‌ಐಟಿ ತನಿಖೆಗೆ ನಿರ್ದೇಶನ ನೀಡಿ, ಮೇ 25ರಂದು ಪ್ರಕರಣವನ್ನು ಆಲಿಸುವುದಾಗಿ ತಿಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT