ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ನಬ್‌ಗೆ ಬೆದರಿಕೆ: ಮಹಾರಾಷ್ಟ್ರ ಸ್ಪೀಕರ್‌ಗೆ ನೋಟಿಸ್‌ ನೀಡಲು ಸುಪ್ರೀಂ ಚಿಂತನೆ

Last Updated 24 ನವೆಂಬರ್ 2020, 14:53 IST
ಅಕ್ಷರ ಗಾತ್ರ

ನವದೆಹಲಿ: ರಿಪಬ್ಲಿಕ್‌ ಟಿ.ವಿ ಸಂಪಾದಕ ಅರ್ನಬ್‌ ಗೋಸ್ವಾಮಿ ಅವರಿಗೆ ಪತ್ರ ಮುಖೇನ ಬೆದರಿಕೆ ಹಾಕಿದ ಮಹಾರಾಷ್ಟ್ರ ವಿಧಾನಸಭೆ ಸಹಾಯಕ ಕಾರ್ಯದರ್ಶಿ ವಿರುದ್ಧ ದಾಖಲಾಗಿರುವ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಹಾರಾಷ್ಟ್ರ ವಿಧಾನಸಭೆ ಸಭಾಧ್ಯಕ್ಷರಿಗೂ ನೋಟಿಸ್‌ ನೀಡಲು ಸುಪ್ರೀಂ ಕೋರ್ಟ್‌ ಯೋಚಿಸಿದೆ.

ಮಹಾರಾಷ್ಟ್ರ ವಿಧಾನಸಭೆಯಲ್ಲಿ ಅನರ್ಬ್‌ ವಿರುದ್ಧ ಹಕ್ಕು ಚ್ಯುತಿ ನಿರ್ಣಯ ಮಂಡಿಸಲು ನಿರ್ಧರಿಸಿ ಅವರಿಗೆ ಷೋಕಾಸ್‌ ನೋಟಿಸ್‌ ನೀಡಿತ್ತು. ಇದನ್ನು ಸುಪ್ರೀಂ ಕೋರ್ಟ್‌ನಲ್ಲಿ ಅರ್ನಬ್‌ ಪ್ರಶ್ನಿಸಿದ್ದರು. ಈ ಸಂದರ್ಭದಲ್ಲಿ ‘ಸುಪ್ರೀಂ ಕೋರ್ಟ್‌ಗೆ ವಿಧಾನಸಭೆ ನೋಟಿಸ್‌ ಕುರಿತ ಮಾಹಿತಿಯನ್ನು ನೀಡಬಾರದು ಎಂದು ಎಚ್ಚರಿಸಿ’ ವಿಧಾನಸಭೆ ಸಹಾಯಕ ಕಾರ್ಯದರ್ಶಿ, ಅರ್ನಬ್‌ ಅವರಿಗೆ ಪತ್ರ ಬರೆದಿದ್ದರು.

ವಿಚಾರಣೆ ವೇಳೆ ಅರ್ನಬ್‌ ಪರ ವಕೀಲರು ಪತ್ರದ ವಿಷಯವನ್ನು ಸುಪ್ರೀಂ ಕೋರ್ಟ್‌ ಪೀಠದ ಗಮನಕ್ಕೆ ತಂದ ಸಂದರ್ಭದಲ್ಲಿ, ಪೀಠವು ಕಾರ್ಯದರ್ಶಿಗೆ ಷೋಕಾಸ್‌ ನೋಟಿಸ್‌ ನೀಡಿತ್ತು. ‘ನಿಮ್ಮ ವಿರುದ್ಧ ಏಕೆ ನ್ಯಾಯಾಂಗ ನಿಂದನೆ ಪ್ರಕ್ರಿಯೆಯನ್ನು ಆರಂಭಿಸಬಾರದು ಎನ್ನುವುದಕ್ಕೆ ಎರಡು ವಾರದೊಳಗಾಗಿ ವಿವರಣೆ ನೀಡಿ’ ಎಂದುಮುಖ್ಯನ್ಯಾಯಮೂರ್ತಿ ಎಸ್‌.ಎ.ಬೊಬಡೆ ಅವರಿದ್ದ ಪೀಠವು ಸೂಚಿಸಿತ್ತು.

ಮಂಗಳವಾರ ವಿಚಾರಣೆ ಕೈಗೆತ್ತಿಕೊಂಡ ಪೀಠದ ಮುಂದೆ, ‘ಈ ಪ್ರಕರಣದಲ್ಲಿ ಸಭಾಧ್ಯಕ್ಷರಿಗೂ ನೋಟಿಸ್ ನೀಡಬೇಕು’ ಎಂದು ಗೋಸ್ವಾಮಿ ಪರ ವಕೀಲ ಹರೀಶ್‌ ಸಾಳ್ವೆ ಅವರು ಕೋರಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಪೀಠ, ‘ಮುಂದಿನ ದಿನಗಳಲ್ಲಿ ಈ ವಿಷಯವಾಗಿ ನನ್ನ ಅಭಿಪ್ರಾಯವನ್ನು ಕೇಳಿಲ್ಲ ಎಂದು ಸಭಾಧ್ಯಕ್ಷರು ವಾದಿಸಬಾರದು’ ಎಂದು ಅಭಿಪ್ರಾಯಪಟ್ಟಿತು.

ಸಹಾಯಕ ಕಾರ್ಯದರ್ಶಿ ವಿಲಾಸ್‌ ಅಠವಾಳೆ ಅವರ ಪರ ವಾದಿಸಿದ ಹಿರಿಯ ವಕೀಲ ದುಷ್ಯಂತ್‌ ದಾವೆ, ‘ಇಲ್ಲಿ ನ್ಯಾಯಾಂಗ ನಿಂದನೆ ಆಗಿಲ್ಲ. ನ್ಯಾಯಾಂಗದ ಆಡಳಿತಕ್ಕೆ ಮಧ್ಯಪ್ರವೇಶಿಸುವ ಪ್ರಯತ್ನವೂ ನಡೆದಿಲ್ಲ. ನ್ಯಾಯಾಂಗ ನಿಂದನೆ ಯಾವುದು ಎನ್ನುವುದು ಸ್ಪಷ್ಟವಾಗುವವರೆಗೂ ನ್ಯಾಯಾಂಗ ನಿಂದನೆ ನೋಟಿಸ್‌ ನೀಡಲು ಸಾಧ್ಯವಿಲ್ಲ’ ಎಂದರು. ಜೊತೆಗೆ ಸಭಾಧ್ಯಕ್ಷರಿಗೆ ನ್ಯಾಯಾಂಗ ನಿಂದನೆ ನೋಟಿಸ್‌ ನೀಡುವುದನ್ನೂ ವಿರೋಧಿಸಿದರು. ಪೀಠವು ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT