ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಂಎಲ್ಎ: ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ಮರುಪರಿಶೀಲಿಸುವಂತೆ ‘ಸುಪ್ರೀಂ’ಗೆ ಕಾಂಗ್ರೆಸ್‌ ಸಂಸದ ಕಾರ್ತಿ ಚಿದಂಬರಂ ಸಲ್ಲಿಸಿದ್ದ ಅರ್ಜಿ
Last Updated 25 ಆಗಸ್ಟ್ 2022, 21:44 IST
ಅಕ್ಷರ ಗಾತ್ರ

ನವದೆಹಲಿ: ಹಣ ಅಕ್ರಮ ವರ್ಗಾವಣೆ ನಿಯಂತ್ರಣ ಕಾಯ್ದೆಯಡಿ (ಪಿಎಂಎಲ್‌ಎ) ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಗಳನ್ನು ಎತ್ತಿಹಿಡಿದ ತೀರ್ಪು ಮರುಪರಿಶೀಲನೆಗೆ ಸುಪ್ರೀಂ ಕೋರ್ಟ್ ಗುರುವಾರ ಸಮ್ಮತಿಸಿದ್ದು, ಕೇಂದ್ರ ಸರ್ಕಾರಕ್ಕೆ ನೋಟಿಸ್‌ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಪೀಠ, ಇಡೀ ತೀರ್ಪು ಮರುಪರಿಶೀಲಿಸುವ ಬದಲು, ಮೇಲ್ನೋಟಕ್ಕೆ ಕಾಣಿಸುವ ಮುಗ್ಧತೆಯ ಊಹೆಯ ವಿಚಾರ ಮತ್ತುಇ.ಡಿಪ್ರಕರಣದ ಮಾಹಿತಿ ವರದಿ (ಇಸಿಐಆರ್) ಒದಗಿಸದಿರುವ ಈ ಎರಡು ಅಂಶಗಳನ್ನು ಪರಿಶೀಲಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದೆ.

ಪಿಎಂಎಲ್‌ಎ ಕಾಯ್ದೆಯಡಿ ಆರೋಪಿಗಳ ಆಸ್ತಿಯನ್ನು ಜಪ್ತಿ ಮಾಡುವುದು ಸೇರಿ ಇ.ಡಿ ಹೊಂದಿರುವ ಮುಕ್ತ ಅಧಿಕಾರವನ್ನು ಸುಪ್ರಿಂಕೋರ್ಟ್‌ ಎತ್ತಿ ಹಿಡಿದು, ಜುಲೈ 27ರಂದು ತೀರ್ಪು ನೀಡಿತ್ತು.

ಈ ತೀರ್ಪು ಮರುಪರಿಶೀಲಿಸುವಂತೆ ಕೋರಿ ಕಾಂಗ್ರೆಸ್‌ ಸಂಸದ ಕಾರ್ತಿ ಚಿದಂಬರಂ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರ ಪರ ಹಿರಿಯ ವಕೀಲರಾದ ಕಪಿಲ್‌ ಸಿಬಲ್‌, ಅಭಿಷೇಕ್‌ ಎಂ. ಸಿಂಘ್ವಿ ಹಾಜರಿದ್ದರು. ಸಾಲಿಸಿಟರ್‌ ಜನರಲ್‌ ತುಷಾರ್ ಮೆಹ್ತಾ ಅವರು ತೀರ್ಪು ಮರುಪರಿಶೀಲನೆಗೆ ವಿರೋಧ ವ್ಯಕ್ತಪಡಿಸಿದರು.

ನ್ಯಾಯಮೂರ್ತಿಗಳಾದ ದಿನೇಶ್‌
ಮಾಹೇಶ್ವರಿ ಮತ್ತು ಸಿ.ಟಿ. ರವಿಕುಮಾರ್‌ ಅವರೂ ಇದ್ದ ತ್ರಿಸದಸ್ಯ ಪೀಠ, ‘ಕಪ್ಪು ಹಣ ಚಲಾವಣೆ ಮತ್ತು ಹಣ ಅಕ್ರಮ ವರ್ಗಾವಣೆ ಅಪರಾಧಗಳನ್ನು ತಡೆಗಟ್ಟಲು ನ್ಯಾಯಾಲಯ ಸಂಪೂರ್ಣ ಬೆಂಬಲ ನೀಡುತ್ತಿದೆ. ಇಂತಹ ಅಪರಾಧಗಳನ್ನು ರಾಷ್ಟ್ರವು ಸಹಿಸದು. ಹಣ ಅಕ್ರಮ ವರ್ಗಾವಣೆ ಗಂಭೀರ ಅಪರಾಧ. ಇದರ ವಿರುದ್ಧದ ಕಾಯ್ದೆ ಉದಾತ್ತವಾಗಿದೆ. ಕಾಯ್ದೆ ಬಗೆಗಿನ ತೀರ್ಪಿನ ಬಗ್ಗೆ ವಿಸ್ತೃತ ಚರ್ಚೆಯ ಅಗತ್ಯವಿಲ್ಲ. ಆದರೆ, ಇದರಲ್ಲಿ ಅಗತ್ಯವಿರುವ ಎರಡು ಅಂಶಗಳನ್ನು ಮಾತ್ರ ಮರುಪರಿಶೀಲಿಸಲಾಗುವುದು’ ಎಂದು ಅಭಿಪ್ರಾಯಪಟ್ಟಿತು.

ಈ ವಿಷಯದಲ್ಲಿ ಏನೇ ಇರಲಿ,ಮಧ್ಯಂತರ ರಕ್ಷಣೆಯನ್ನು ಇನ್ನೂ ನಾಲ್ಕು ವಾರಗಳವರೆಗೆ ವಿಸ್ತರಿಸಲಾಗುವುದು. ಪ್ರಕರಣವನ್ನು ಸೂಕ್ತ ಪೀಠದ ಮುಂದೆ ವಿಚಾರಣೆಗೆ ಪಟ್ಟಿ ಮಾಡಲಾಗುವುದು ಎಂದು ಹೇಳಿದ ಪೀಠ, ಕೇಂದ್ರ ಸರ್ಕಾರಕ್ಕೆ
ಪ್ರತಿಕ್ರಿಯೆ ಸಲ್ಲಿಸಲು ನೋಟಿಸ್‌ ಜಾರಿ ಮಾಡಿತು.

ಸುಪ್ರೀಂ ಕೋರ್ಟ್ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಕೋರಿ ಕಾರ್ತಿ ಚಿದಂಬರಂ ಅವರು ಕಳೆದ ತಿಂಗಳು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿತ್ತು. ಕಾರ್ತಿ ಅವರು ಮತ್ತೊಮ್ಮೆ ಸಲ್ಲಿಸಿದ ಪುನರ್ ಪರಿಶೀಲನಾ ಅರ್ಜಿಯಲ್ಲಿ, ಈ ತೀರ್ಪಿನಲ್ಲಿ ದೋಷಗಳಿವೆ ಮತ್ತು ಸಂವಿಧಾನದ ನಿಯಮಗಳಿಗೂ ವಿರುದ್ಧವಾಗಿದೆ ಎಂದು ವಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT