ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19 ಪರಿಸ್ಥಿತಿ: ವಲಸೆ ಕಾರ್ಮಿಕರಿಗೆ ಉಚಿತ ಪಡಿತರ

ಜು. 31ರೊಳಗೆ ‘ಒಂದು ರಾಷ್ಟ್ರ, ಒಂದು ಪಡಿತರ ಚೀಟಿ’ ಯೋಜನೆ ಜಾರಿ: ಸುಪ್ರೀಂ ನಿರ್ದೇಶನ
Last Updated 29 ಜೂನ್ 2021, 22:06 IST
ಅಕ್ಷರ ಗಾತ್ರ

ನವದೆಹಲಿ: ‘ದೇಶದಲ್ಲಿ ಕೋವಿಡ್‌–19 ಪರಿಸ್ಥಿತಿ ಇರುವವರೆಗೂ ವಲಸೆ ಕಾರ್ಮಿಕರಿಗೆ ಉಚಿತವಾಗಿ ವಿತರಿಸಲು ಪಡಿತರವನ್ನು ಒದಗಿಸಬೇಕು’ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಕೇಂದ್ರ ಸರ್ಕಾರಕ್ಕೆ ತಿಳಿಸಿದೆ.

ಅಲ್ಲದೆ, ‘ಒಂದು ದೇಶ, ಒಂದು ಪಡಿತರ ಚೀಟಿ’ ಯೋಜನೆಯನ್ನು ಜುಲೈ 31ರ ಒಳಗೆ ಅನುಷ್ಠಾನಗೊಳಿಸಬೇಕು ಎಂದೂ ಇದೇ ಸಂದರ್ಭದಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ‘ಸುಪ್ರಿಂ’ ನಿರ್ದೇಶಿಸಿತು.

ವಲಸೆ ಕಾರ್ಮಿಕರ ಸಂಕಷ್ಟಗಳನ್ನು ಕುರಿತು ಮೂವರು ಕಾರ್ಯಕರ್ತರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಗೆ ಸಂಬಂಧಿಸಿ ನ್ಯಾಯಮೂರ್ತಿಗಳಾದ ಅಶೋಕ್‌ ಭೂಷಣ್‌ ಮತ್ತು ಎಂ.ಆರ್‌.ಶಾ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿತು.

ಕೋವಿಡ್‌ ಎರಡನೆ ಅಲೆಯಲ್ಲಿ ದೇಶದ ವಿವಿಧೆಡೆ ಲಾಕ್‌ಡೌನ್‌ ಮತ್ತು ಕರ್ಫ್ಯೂ ಕಾರಣದಿಂದ ಸಂಕಷ್ಟಕ್ಕೀಡಾಗಿರುವ ವಲಸೆ ಕಾರ್ಮಿಕರಿಗೆ ಆಹಾರ ಭದ್ರತೆ, ಹಣ ವರ್ಗಾವಣೆ ಮತ್ತು ಇತರೆ ಕಲ್ಯಾಣ ಕಾರ್ಯಕ್ರಮಗಳ ಜಾರಿಗೆ ಒತ್ತು ನೀಡುವಂತೆ ಕೇಂದ್ರ, ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದರು.

‘ಒಂದು ದೇಶ, ಒಂದು ಪಡಿತರ ಚೀಟಿ’ ಬಡವರ ಕಲ್ಯಾಣಕ್ಕಾಗಿ ಇರುವ ಕಾರ್ಯಕ್ರಮ. ಇದು, ವಲಸೆ ಕಾರ್ಮಿಕರಿಗೆ ತಮ್ಮ ಕೆಲಸದ ಸ್ಥಳದಲ್ಲಿಯೇ ಪಡಿತರ ಪಡೆಯಲು ನೆರವಾಗಲಿದೆ. ಅಲ್ಲದೆ, ಇದು ಸೇರಿದಂತೆ ಅಸಂಘಟಿತ ವಲಯದ ಕಾರ್ಮಿಕರು ವಿವಿಧ ಕಲ್ಯಾಣ ಯೋಜನೆಗಳ ಅನುಕೂಲ ಪಡೆಯಲು ಎನ್‌ಐಸಿ ನೆರವಿನಲ್ಲಿ ಪ್ರತ್ಯೇಕ ವೆಬ್‌ಸೈಟ್ ಅನ್ನು ಜುಲೈ 31ರ ಒಳಗೆ ಆರಂಭಿಸಬೇಕು’ ಎಂದೂ ಪೀಠ ಕೇಂದ್ರಕ್ಕೆ ಸ್ಪಷ್ಟ ಸೂಚನೆ ನೀಡಿತು.

ವಲಸೆ ಕಾರ್ಮಿಕರಿಗೆ ಉಚಿತವಾಗಿ ಪಡಿತರವನ್ನು ವಿತರಿಸಲು ಸೂಕ್ತ ಕಾರ್ಯಕ್ರಮ ರೂಪಿಸಬೇಕು.ಸಮುದಾಯ ಭೋಜನ ಶಾಲೆಗಳನ್ನು ನಡೆಸಬೇಕು. ಇವು, ಕೋವಿಡ್ ಪರಿಸ್ಥಿತಿ ಇರುವವರೆಗೂ ಮುಂದುವರಿಯಬೇಕು ಎಂದೂ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.

ಎಲ್ಲ ಗುತ್ತಿಗೆದಾರರು ಮತ್ತು ಸಂಸ್ಥೆಗಳನ್ನು ಅಂತರ ರಾಜ್ಯ ವಲಸೆ ಕಾರ್ಮಿಕರ (ಉದ್ಯೋಗ ಮತ್ತು ಸೇವಾ ಸ್ಥಿತಿ) ಕಾಯ್ದೆ 1979ರ ಅಡಿ ನೋಂದಣಿ ಮಾಡಬೇಕು ಎಂದು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶಿಸಿದೆ.

ಕಾರ್ಯಕರ್ತರಾದ ಅಂಜಲಿ ಭಾರಧ್ವಾಜ್, ಹರ್ಷ ಮಂದೇರ್ ಮತ್ತು ಜಗದೀಪ್‌ ಚೋಕರ್ ಅವರು ಅರ್ಜಿ ಸಲ್ಲಿಸಿದ್ದರು. ಪೀಠವು ಜೂನ್‌ 11ರಂದು ತನ್ನ ತೀರ್ಪು ಕಾಯ್ದಿರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT