ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಂದೆ ಬಣಕ್ಕೆ ಶಿವಸೇನಾ ಚಿಹ್ನೆ: ಆದೇಶಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ನಕಾರ

ಏಕನಾಥ ಶಿಂದೆ ಬಣಕ್ಕೆ ಶಿವಸೇನಾ ಹೆಸರು ಮಂಜೂರು ಮಾಡಿರುವುದನ್ನು ಪ್ರಶ್ನಿಸಿದ್ದ ಅರ್ಜಿ
Last Updated 22 ಫೆಬ್ರುವರಿ 2023, 15:57 IST
ಅಕ್ಷರ ಗಾತ್ರ

ನವದೆಹಲಿ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಬಣಕ್ಕೆ ‘ಶಿವಸೇನಾ’ ಹೆಸರು ಹಾಗೂ ಬಿಲ್ಲು–ಬಾಣ ಒಳಗೊಂಡ ಪಕ್ಷದ ಚಿಹ್ನೆ ಮಂಜೂರು ಮಾಡಿರುವ ಚುನಾವಣಾ ಆಯೋಗದ ಆದೇಶಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. ಇದರಿಂದ ಉದ್ಧವ್‌ ಠಾಕ್ರೆ ಬಣಕ್ಕೆ ಮತ್ತೆ ಹಿನ್ನಡೆ ಎದುರಾಗಿದೆ.

ಆಯೋಗದ ಆದೇಶ ಪ್ರಶ್ನಿಸಿ ಉದ್ಧವ್‌ ಬಣ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ತ್ರಿಸದಸ್ಯ ನ್ಯಾಯಪೀಠವು ಶಿಂದೆ ಬಣಕ್ಕೆ ನೋಟಿಸ್‌ ಜಾರಿಗೊಳಿಸಿದ್ದು, ಎರಡು ವಾರಗಳೊಳಗೆ ಈ ಕುರಿತು ಪ್ರತಿಕ್ರಿಯೆ ಸಲ್ಲಿಸುವಂತೆ ಬುಧವಾರ ಸೂಚಿಸಿದೆ.

‘ಶಿಂದೆ ಬಣವು ಪಕ್ಷದ ಕಚೇರಿ ಹಾಗೂ ಬ್ಯಾಂಕ್‌ ಖಾತೆಗಳನ್ನು ತನ್ನ ಸುಪರ್ದಿಗೆ ಪಡೆಯುವ ಪ್ರಕ್ರಿಯೆ ಆರಂಭಿಸಿದೆ. ಇದರಿಂದ ಕಾನೂನು ಸುವ್ಯವಸ್ಥೆಯ ಸಮಸ್ಯೆ ತಲೆದೋರಬಹುದು. ಹೀಗಾಗಿ ಆಯೋಗದ ಆದೇಶಕ್ಕೆ ತಡೆ ನೀಡಬೇಕು’ ಎಂದು ಉದ್ಧವ್‌ ಬಣದ ‍ಪರ ವಕೀಲರಾದ ಕಪಿಲ್‌ ಸಿಬಲ್‌, ಅಭಿಷೇಕ್‌ ಮನು ಸಿಂಘ್ವಿ, ದೇವದತ್ತ ಕಾಮತ್‌ ಹಾಗೂ ಅಮಿತ್‌ ಆನಂದ್‌ ತಿವಾರಿ ಅವರು ಮನವಿ ಮಾಡಿದರು.

‘ಚುನಾವಣಾ ಆಯೋಗವು ಶಿಂದೆ ಬಣದ ಪರವಾಗಿ ತೀರ್ಪು ನೀಡಿದೆ. ಈ ಹಂತದಲ್ಲಿ ಆಯೋಗದ ಆದೇಶಕ್ಕೆ ತಡೆ ನೀಡಲು ಆಗುವುದಿಲ್ಲ’ ಎಂದು ನ್ಯಾಯಮೂರ್ತಿಗಳಾದ ಪಿ.ಎಸ್‌.ನರಸಿಂಹ ಹಾಗೂ ಜೆ.ಬಿ.ಪಾರ್ದಿವಾಲಾ ಅವರನ್ನೊಳಗೊಂಡ ನ್ಯಾಯಪೀಠವು ತಿಳಿಸಿತು.

ಮುಂದಿನ ಆದೇಶದವರೆಗೂ ಪಂಜಿನ ಚಿಹ್ನೆ ಹಾಗೂ ‘ಶಿವಸೇನಾ–ಉದ್ಧವ್‌ ಬಾಳಾಸಾಹೇಬ್‌ ಠಾಕ್ರೆ’ ಹೆಸರನ್ನು ತನ್ನಲ್ಲಿಯೇ ಉಳಿಸಿಕೊಳ್ಳಲು ಉದ್ಧವ್‌ ಬಣಕ್ಕೆ ನ್ಯಾಯಾಲಯ ಅವಕಾಶ ನೀಡಿತು.

ಆಯೋಗವು ಶಿಂದೆ ಬಣವನ್ನು ನೈಜ ಶಿವಸೇನಾ ಎಂದು ಮಾನ್ಯ ಮಾಡಿರುವುದರಿಂದ ಅದು ಉದ್ಧವ್‌ ಬಣದ ಶಾಸಕರನ್ನು ಅನರ್ಹಗೊಳಿಸುವ ಪ್ರಕ್ರಿಯೆ ಆರಂಭಿಸುವ ಸಾಧ್ಯತೆ ಇದೆ ಎಂದು ಉದ್ಧವ್‌ ಬಣದ ಪರ ವಕೀಲರು ನ್ಯಾಯಾಲಯಕ್ಕೆ ಹೇಳಿದರು.

‘ವಿಪ್‌ ಜಾರಿಗೊಳಿಸುವ ಅಥವಾ ಶಾಸಕರನ್ನು ಅನರ್ಹಗೊಳಿಸುವಂತಹ ಅವಸರದ ತೀರ್ಮಾನವನ್ನು ನಾವು ಕೈಗೊಳ್ಳುವುದಿಲ್ಲ’ ಎಂದು ಶಿಂದೆ ಬಣದ ಪರ ವಕೀಲರಾದ ನೀರಜ್‌ ಕಿಶನ್‌ ಕೌಲ್‌, ಮಹೇಶ್‌ ಜೇಠ್ಮಲಾನಿ ಹಾಗೂ ಮಣಿಂದರ್‌ ಸಿಂಗ್‌ ಅವರು ತಿಳಿಸಿದರು.

‘ಆಯೋಗವು ಶಾಸಕರ ಬಲದ ಆಧಾರದಲ್ಲಿ ಶಿಂದೆ ಬಣವನ್ನು ನೈಜ ಶಿವಸೇನಾ ಎಂದು ಮಾನ್ಯ ಮಾಡಿದೆ. ಪಕ್ಷದ ಪ್ರತಿನಿಧಿ ಸಭೆಯಲ್ಲಿ ಉದ್ಧವ್‌ ಬಣಕ್ಕೆ ಬಹುಮತ ಇದ್ದು, ಅದನ್ನು ಕಡೆಗಣಿಸಿದೆ’ ಎಂದು ವಕೀಲ ಕಪಿಲ್‌ ಸಿಬಲ್‌ ಅವರು ನ್ಯಾಯಪೀಠಕ್ಕೆ ಹೇಳಿದರು.

‘ಪ್ರತಿನಿಧಿ ಸಭೆಯಲ್ಲಿ ಅಂದಾಜು 200 ಮಂದಿ ಸದಸ್ಯರಿದ್ದು. ಈ ಪೈಕಿ ಅರ್ಜಿದಾರರಿಗೆ (ಉದ್ಧವ್‌) 160 ಮಂದಿಯ ಬೆಂಬಲವಿದೆ. ಆಯೋಗವು ಪಕ್ಷದ ನಡಾವಳಿಗಳನ್ನು ಕಡೆಗಣಿಸುವ ಮೂಲಕ ಶಿಂದೆ ಬಣದ ಪರವಾಗಿ ತೀರ್ಪು ನೀಡಿದೆ. ಶಿಂದೆ ಬಣದ ಪರ ಶಾಸಕರ ಅನರ್ಹತೆಯ ಅರ್ಜಿಯ ವಿಚಾರಣೆ ಬಾಕಿ ಇದೆ. ಈ ಹಂತದಲ್ಲಿ ಆಯೋಗವು ಶಾಸಕರ ಬಲದ ಆಧಾರದಲ್ಲಿ ಅವರಿಗೆ ಪಕ್ಷದ ಹೆಸರು ಹಾಗೂ ಚಿಹ್ನೆ ಮಂಜೂರು ಮಾಡಿರುವುದು ಸರಿಯಲ್ಲ. ಇದು ಪ್ರಜಾಪ್ರಭುತ್ವ ವಿರೋಧಿ ನಿಲುವು’ ಎಂದು ಉದ್ಧವ್‌ ಬಣದ ಪರ ವಕೀಲ ಅಮಿತ್‌ ಆನಂದ್‌ ತಿವಾರಿ ನ್ಯಾಯಪೀಠಕ್ಕೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT