ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕಕಾಲಕ್ಕೆ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಿರ್ಬಂಧ: ಅರ್ಜಿ ವಜಾ

Last Updated 2 ಫೆಬ್ರುವರಿ 2023, 11:29 IST
ಅಕ್ಷರ ಗಾತ್ರ

ನವದೆಹಲಿ: ಅಭ್ಯರ್ಥಿಯು ಒಂದೇ ಹುದ್ದೆಗೆ ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಿಂದ ಚುನಾವಣೆಗೆ ಸ್ಪರ್ಧಿಸುವುದನ್ನು ನಿರ್ಬಂಧಿಸಲು ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ಸುಪ್ರೀಂ ಕೋರ್ಟ್‌, ಇದು ‘ಶಾಸಕಾಂಗ ನೀತಿ’ಯ ವಿಷಯವಾಗಿದೆ ಎಂದು ಗುರುವಾರ ಹೇಳಿದೆ.

ಹಲವು ಕಾರಣಗಳಿಗೆ ಅಭ್ಯರ್ಥಿಗಳು ವಿವಿಧ ಸ್ಥಾನಗಳಿಂದ ಚುನಾವಣೆಗೆ ಸ್ಪರ್ಧಿಸಬಹುದು ಮತ್ತು ಅಂತಹ ಆಯ್ಕೆ ಸಂಸತ್ತಿಗೆ ಬಿಟ್ಟಿದ್ದು ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠ ಅಭಿಪ್ರಾಯಪಟ್ಟಿದೆ.

1951ರ ಪ್ರಜಾ ಪ್ರಾತಿನಿಧ್ಯ ಕಾಯ್ದೆ ಸೆಕ್ಷನ್ 33(7) ಘೋಷಿಸುವಂತೆ ಕೋರಿ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ, ಜೆ.ಬಿ.ಪರ್ಡಿವಾಲಾ ಪೀಠ ನಡೆಸಿತು.

ಉಪಾಧ್ಯಾಯ ಪರ ಹಾಜರಾದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್, ಅಭ್ಯರ್ಥಿಯು ಎರಡು ಕ್ಷೇತ್ರಗಳಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ಎರಡರಿಂದಲೂ ಆಯ್ಕೆಯಾದರೆ, ಒಂದು ತೆರವು ಮಾಡಬೇಕಾಗುತ್ತದೆ. ಇದು ಉಪಚುನಾವಣೆಗೆ ಕಾರಣವಾಗುತ್ತದೆ. ಇದು ಬೊಕ್ಕಸಕ್ಕೆ ಹೆಚ್ಚುವರಿ ಆರ್ಥಿಕ ಹೊರೆಯಾಗಲಿದೆ ಎಂದು ಹೇಳಿದರು.

1996 ರ ತಿದ್ದುಪಡಿಗೆ ಮೊದಲು, ಅಭ್ಯರ್ಥಿಯು ಚುನಾವಣೆಯಲ್ಲಿ ಸ್ಪರ್ಧಿಸಬಹುದಾದ ಕ್ಷೇತ್ರಗಳ ಸಂಖ್ಯೆಗೆ ಯಾವುದೇ ನಿರ್ಬಂಧವಿರಲಿಲ್ಲ. ತಿದ್ದುಪಡಿಯು ಆ ಸಂಖ್ಯೆಯನ್ನು ಎರಡಕ್ಕೆ ಸೀಮಿತಗೊಳಿಸಿತು ಎಂದು ಅವರು ಹೇಳಿದರು.

‘ಅಭ್ಯರ್ಥಿಯು ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಬಹುದೇ ಎಂದು ನಿರ್ಧರಿಸುವುದು ಸಂಸತ್ತಿಗೆ ಬಿಟ್ಟದ್ದು. ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿದಾಗ, ಎಲ್ಲಿಂದ ಆಯ್ಕೆಯಾಗುತ್ತೀರಿ ಎಂದು ನಿಮಗೆ ತಿಳಿದಿರುವುದಿಲ್ಲ. ಅದರಲ್ಲಿ ತಪ್ಪೇನಿದೆ? ಇದು ಚುನಾವಣಾ ಪ್ರಜಾಪ್ರಭುತ್ವದ ಭಾಗವಾಗಿದೆ’ ಎಂದು ನ್ಯಾಯಾಲಯ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT