ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಯಾ ಮರಣ: ಜ್ಯುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ಅನುಮತಿ ಬೇಕಿಲ್ಲ- ಸುಪ್ರೀಂ ಕೋರ್ಟ್‌

ಮಾರ್ಗಸೂಚಿ ಪರಿಷ್ಕರಿಸಿದ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ
Last Updated 24 ಜನವರಿ 2023, 15:36 IST
ಅಕ್ಷರ ಗಾತ್ರ

ನವದೆಹಲಿ: ದಯಾ ಮರಣಕ್ಕೆ ಸಂಬಂಧಿಸಿದಂತೆ 2018ರಲ್ಲಿ ಐತಿಹಾಸಿಕ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್‌, ‘ಮರಣ ಇಚ್ಛೆಯ ಉಯಿಲು’ (ಲಿವಿಂಗ್ ವಿಲ್) ಕುರಿತ ಮಾರ್ಗಸೂಚಿಯನ್ನು ಇನ್ನಷ್ಟು ಸರಳೀಕರಿಸಿದೆ.

ಈ ಮೊದಲು ಮಾರಣಾಂತಿಕ ರೋಗದಿಂದ ಬಳಲುತ್ತಿರುವ ವ್ಯಕ್ತಿಗೆ ಅಳವಡಿಸಿರುವ ಜೀವ ರಕ್ಷಕ ಸಾಧನ ತೆಗೆಯುವುದಕ್ಕೆ ಪ್ರಥಮ ದರ್ಜೆಯ ಜ್ಯುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ (ಜೆಎಂಎಫ್‌ಸಿ) ಅನುಮತಿಯನ್ನು ಕಡ್ಡಾಯಗೊಳಿಸಲಾಗಿತ್ತು. ಈ ಷರತ್ತನ್ನು ನ್ಯಾಯಮೂರ್ತಿ ಕೆ.ಎಂ.ಜೋಸೆಫ್‌ ನೇತೃತ್ವದ ಐವರು ಸದಸ್ಯರನ್ನೊಳಗೊಂಡ ಸಾಂವಿಧಾನಿಕ ನ್ಯಾಯಪೀಠವು ಮಂಗಳವಾರ ಮಾರ್ಗಸೂಚಿಯಿಂದ ತೆಗೆದುಹಾಕಿದೆ.

‘ಇನ್ನು ಮುಂದೆ ಮರಣ ಇಚ್ಛೆಯ ಉಯಿಲು ಬರೆಯುವ ವ್ಯಕ್ತಿಯು ಇಬ್ಬರು ಸಾಕ್ಷಿಗಳ ಸಮ್ಮುಖದಲ್ಲಿ ದಾಖಲೆಗಳಿಗೆ ಸಹಿ ಹಾಕಬೇಕು. ಅದನ್ನು ನೋಟರಿ ಅಥವಾ ಗೆಜೆಟೆಡ್‌ ಅಧಿಕಾರಿ ದೃಢೀಕರಿಸಬೇಕು’ ಎಂದು ನ್ಯಾಯಮೂರ್ತಿಗಳಾದ ಅಜಯ್‌ ರಸ್ತೋಗಿ, ಅನಿರುದ್ಧ್‌ ಬೋಸ್‌, ಹೃಷಿಕೇಶ್‌ ರಾಯ್‌ ಮತ್ತು ಸಿ.ಟಿ.ರವಿಕುಮಾರ್‌ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ.

‘ವ್ಯಕ್ತಿಯು ಬಲವಂತಕ್ಕೆ ಒಳಗಾಗದೆ, ಸಂಬಂಧಿತ ಎಲ್ಲಾ ಮಾಹಿತಿಗಳನ್ನು ಪರಿಪೂರ್ಣವಾಗಿ ಅರ್ಥಮಾಡಿಕೊಂಡ ನಂತರ ಸ್ವಯಂ ಪ್ರೇರಣೆಯಿಂದ ದಾಖಲೆಗಳಿಗೆ ಸಹಿ ಮಾಡಿದ್ದಾರೆ ಎಂಬುದನ್ನು ಸಾಕ್ಷಿಗಳು ಮತ್ತು ನೋಟರಿ ದೃಢೀಕರಿಸಬೇಕು. ಈ ಬಗ್ಗೆ ಅವರಿಗೆ ಸಂಪೂರ್ಣವಾಗಿ ತೃಪ್ತಿ ಇರಬೇಕು’ ಎಂದು ಸಾಂವಿಧಾನಿಕ ಪೀಠವು ತಿಳಿಸಿದೆ.

ಉಯಿಲು ಬರೆಯುವ ವ್ಯಕ್ತಿಯು ತಮ್ಮ ಕುಟುಂಬದ ವೈದ್ಯರಿಗೆ ಈ ಕುರಿತ ಮಾಹಿತಿ ಒದಗಿಸುವ ಮತ್ತು ಮುಂಚಿತವಾಗಿ ನೀಡಲಾಗುವ ನಿರ್ದೇಶನಗಳ ಪ್ರತಿಯನ್ನು ಅವರಿಗೆ ಒಪ್ಪಿಸುವ ಬಗ್ಗೆ ನೀಡಲಾದ ಸಲಹೆಯನ್ನು ನ್ಯಾಯಪೀಠ ಮಾನ್ಯ ಮಾಡಿತು.

2018ರಲ್ಲಿ ಹೊರಡಿಸಲಾಗಿದ್ದ ಮಾರ್ಗಸೂಚಿ ಪ್ರಕಾರ ಮಾರಣಾಂತಿಕ ರೋಗದಿಂದ ಬಳಲುತ್ತಿರುವ ವ್ಯಕ್ತಿಯು ಇಬ್ಬರು ಸಾಕ್ಷಿಗಳು ಹಾಗೂ ಜೆಎಂಎಫ್‌ಸಿ ಅವರ ಸಮಕ್ಷಮದಲ್ಲಿ ಉಯಿಲು ಪತ್ರಕ್ಕೆ ಸಹಿ ಹಾಕಬೇಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT