ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಾಯಕ್ಕಿಂತ ಅಧಿಕ ಆಸ್ತಿ : ನಿವೃತ್ತ ಮುಖ್ಯ ಎಂಜಿನಿಯರ್‌ ವಿಚಾರಣೆಗೆ ತಡೆ

ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿದ ಆರೋಪ
Last Updated 15 ಅಕ್ಟೋಬರ್ 2021, 20:28 IST
ಅಕ್ಷರ ಗಾತ್ರ

ನವದೆಹಲಿ: ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ನಿವೃತ್ತ ಮುಖ್ಯ ಎಂಜಿನಿಯರ್ ಒಬ್ಬರ ವಿರುದ್ಧ ಅಪರಾಧ ಪ್ರಕರಣದ ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.

ಹೇಮಾವತಿ ಯೋಜನೆಯಲ್ಲಿ 2008ರಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿರುವ ಮುಖ್ಯ ಎಂಜಿನಿಯರ್‌ ಎಸ್‌.ಸಿ. ಜಯಚಂದ್ರ ವಿರುದ್ಧ ಸಮನ್ಸ್‌ ಜಾರಿ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡುವಂತೆಯೂ ನ್ಯಾಯಮೂರ್ತಿಗಳಾದ ಆರ್‌.ಸುಭಾಷ ರೆಡ್ಡಿ ಹಾಗೂ ಹೃಷಿಕೇಶ ರಾಯ್ ಅವರಿದ್ದ ಪೀಠ ಕರ್ನಾಟಕ ಲೋಕಾಯುಕ್ತಕ್ಕೆ ನೋಟಿಸ್‌ ನೀಡಿದೆ.

ಅರ್ಜಿದಾರರು ಸೇವೆ ಸಲ್ಲಿಸುವ ಇಲಾಖೆಯ ಅಧಿಕಾರಿಯು ವಿಚಾರಣೆ ನಡೆಸಲು ಸ್ವತಂತ್ರವಾಗಿ ಅನುಮತಿ ನೀಡಿಲ್ಲ. ಬದಲಿಗೆ, ತನಿಖಾಧಿಕಾರಿಯ ಆದೇಶದಂತೆ ವಿಚಾರಣೆ ನಡೆಸಲಾಗಿದೆ ಎಂದು ಆದೇಶದಲ್ಲಿ ಸ್ಪಷ್ಟವಾಗಿ ಹೇಳಿದ್ದಾಗಿ ಅರ್ಜಿದಾರರ ಪರ ವಕೀಲರಾದ ದೇವದತ್ತ ಕಾಮತ್ ಹಾಗೂ ನಿಶಾಂತ್ ಪಾಟೀಲ ವಾದ ಮಂಡಿಸಿದರು.

ಅರ್ಜಿದಾರರ ವಿರುದ್ಧ ಮೊದಲು ಸಲ್ಲಿಸಿದ್ದ ಆರೋಪಪಟ್ಟಿಯನ್ನು ರದ್ದುಗೊಳಿಸಲಾಗಿದ್ದು, ಅನುಮತಿರಹಿತವಾಗಿ ಹೊಸದಾಗಿ ವಿಚಾರಣೆ ನಡೆಸಲಾಗದು ಎಂದೂ ಅವರು ಹೇಳಿದರು.

ಅರ್ಜಿದಾರರ ಕುಟುಂಬವು, ಅವರ ಉದ್ಯೋಗದ ಹೊರತಾಗಿಯೂ ವಿವಿಧ ಆದಾಯದ ಮೂಲಗಳನ್ನು ಹೊಂದಿದೆ. ಪತ್ನಿಯ ಆದಾಯ ಮೂಲಗಳಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸಲ್ಲಿಸಿದ್ದರೂ ಅದನ್ನು ಪರಿಗಣಿಸುವಲ್ಲಿ ಹೈಕೋರ್ಟ್ ವಿಫಲವಾಗಿದೆ ಎಂದು ಅವರು ಹೇಳಿದರು.

ಲೋಕಾಯುಕ್ತ ಪೊಲೀಸರು ಅರ್ಜಿದಾರರ ವಿರುದ್ಧ 2008ರಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದರಾದರೂ, 10 ವರ್ಷಗಳ ನಂತರ 2018ರಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

2019ರ ಮಾರ್ಚ್ 20ರಂದು ಹೊಸದಾಗಿ ನೀಡಲಾದ ಅನುಮತಿಯ ಆಧಾರದಲ್ಲಿ ಅಧೀನ ನ್ಯಾಯಾಲಯವು ಸಮನ್ಸ್ ಜಾರಿ ಮಾಡಿ ಆದೇಶಿಸಿದೆ. ಈ ಆದೇಶ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ತಿರಸ್ಕರಿಸಿ ರಾಜ್ಯ ಹೈಕೋರ್ಟ್‌ 2020ರ ಮೇ 18ರಂದು ನೀಡಿರುವ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT