ಮಂಗಳವಾರ, ಏಪ್ರಿಲ್ 13, 2021
23 °C

ಇಟಲಿ ನೌಕಾ ಸಿಬ್ಬಂದಿಯಿಂದ ಮೀನುಗಾರರ ಹತ್ಯೆ: ಅರ್ಜಿ ವಿಚಾರಣೆಗೆ ಸುಪ್ರೀಂ ಒಪ್ಪಿಗೆ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: 2012ರ ಫೆಬ್ರವರಿಯಲ್ಲಿ ಕೇರಳದ ಕರಾವಳಿಯಲ್ಲಿ ಇಬ್ಬರು ಭಾರತೀಯ ಮೀನುಗಾರರನ್ನು ಕೊಂದ ಆರೋಪದ ಮೇಲೆ ಇಬ್ಬರು ಇಟಲಿಯ ನೌಕಾಪಡೆ ಸಿಬ್ಬಂದಿ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ಮುಕ್ತಾಯಗೊಳಿಸುವಂತೆ ಕೋರಿ ಕೇಂದ್ರ ಸರ್ಕಾರ ಸಲ್ಲಿರುವ ಅರ್ಜಿಯನ್ನು ಏಪ್ರಿಲ್ 9 ರಂದು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಬುಧವಾರ ಒಪ್ಪಿಗೆ ನೀಡಿದೆ.

ಈ ಸಂಬಂಧ ನ್ಯಾಯಾಲಯಕ್ಕೆ ಕೇಂದ್ರ ಸರ್ಕಾರ ಸಲ್ಲಿಸಿರುವ ಅರ್ಜಿಯಲ್ಲಿ, ಸಂತ್ರಸ್ತ ಮೀನುಗಾರರ ಕುಟುಂಬದ ಸದಸ್ಯರನ್ನು ಸಂಪರ್ಕಿಸಿ, ಪರಿಹಾರವನ್ನೂ ನೀಡಲಾಗಿದೆ ಎಂದು ‌ಉಲ್ಲೇಖಿಸಿದೆ.

ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಈ ಅರ್ಜಿಯನ್ನು ತುರ್ತು ವಿಲೇವಾರಿ ಪ್ರಕರಣಗಳ ಪಟ್ಟಿಗೆ ಸೇರಿಸಬೇಕೆಂದು ಮುಖ್ಯ ನ್ಯಾಯಮೂರ್ತಿ ಎಸ್‌.ಎ ಬೊಬಡೆ ಮತ್ತು ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರನ್ನೊಳಗೊಂಡ ನ್ಯಾಯಪೀಠಕ್ಕೆ ಮನವಿ ಮಾಡಿದ್ದರು.

ಇದು ಭಾರತ ಮತ್ತು ಇಟಲಿ ಸರ್ಕಾರಗಳಿಗೆ ಸಂಬಂಧಿಸಿದ ವಿಚಾರವಾದ್ದರಿಂದ ಈ ಅರ್ಜಿ ವಿಚಾರಣೆಯನ್ನು ಶುಕ್ರವಾರ ಕೈಗೆತ್ತಿಕೊಳ್ಳುವಂತೆ ಮೆಹ್ತಾ ಅವರು ನ್ಯಾಯಪೀಠಕ್ಕೆ ಮನವಿ ಮಾಡಿದರು. ಈ ಮನವಿ ಆಲಿಸಿದ ನ್ಯಾಯಪೀಠ, ಅರ್ಜಿಯ ವಿಚಾರಣೆಯನ್ನು ಶುಕ್ರವಾರ ನಡೆಸಲು ಒಪ್ಪಿಗೆ ಸೂಚಿಸಿತು.

ಈ ಹಿಂದೆ ಇದೇ ಪ್ರಕರಣದ ವಿಚಾರಣೆಯ ವೇಳೆ, ನ್ಯಾಯಾಲಯವು, ಕೇಂದ್ರ ಸರ್ಕಾರಕ್ಕೆ ಸಂತ್ರಸ್ತ ಕುಟುಂಬವನ್ನು ಸಂಪರ್ಕಿಸುವಂತೆ ಕೇಳಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ತುಷಾರ್ ಮೆಹ್ತಾ ಅವರು, ‘ಸಂತ್ರಸ್ತ ಕುಟುಂಬವನ್ನು ಕೇಂದ್ರ ಸರ್ಕಾರ ಸಂಪರ್ಕಿಸಿ, ಬಾಕಿಯಿದ್ದ ಪರಿಹಾರವನ್ನೂ ನೀಡಿದೆ‘ ಎಂದು ಹೇಳಿದ್ದರು. ನಂತರ ನ್ಯಾಯಪೀಠ ಅರ್ಜಿ ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು