ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋವು ಆಮ್ಲಜನಕ ಹೀರಿ, ಅದನ್ನೇ ಬಿಡುತ್ತೆ ಎಂಬುದು ವಿಜ್ಞಾನಿಗಳ ನಂಬಿಕೆ: ಹೈಕೋರ್ಟ್

Last Updated 3 ಸೆಪ್ಟೆಂಬರ್ 2021, 13:53 IST
ಅಕ್ಷರ ಗಾತ್ರ

ಅಲಹಾಬಾದ್‌: ಗೋವು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸುವಂತೆ ಸೂಚಿಸುವ ಮೂಲಕ ಸುದ್ದಿಯಾಗಿದ್ದ ಅಲಹಾಬಾದ್‌ ಹೈಕೋರ್ಟ್‌ನ ನ್ಯಾಯಮೂರ್ತಿ ಶೇಖರ್‌ ಕುಮಾರ್‌ ಯಾದವ್‌, 'ಗೋವು ಮಾತ್ರವೇ ಆಮ್ಲಜನಕವನ್ನು ಹೀರಿ, ಆಮ್ಲಜನಕವನ್ನೇ ಹೊರಬಿಡುವ ಏಕೈಕ ಪ್ರಾಣಿ ಎಂದು ವಿಜ್ಞಾನಿಗಳು ನಂಬಿದ್ದಾರೆ' ಎಂದು ತಮ್ಮ ಆದೇಶದಲ್ಲಿ ಪ್ರಸ್ತಾಪಿಸಿದ್ದಾರೆ.

ಗೋ ಹತ್ಯೆ ಆರೋಪದಲ್ಲಿ ಜಾಮೀನು ಕೋರಿ ಸಲ್ಲಿಕೆಯಾಗಿದ್ದ ಮನವಿಯನ್ನು ತಿರಸ್ಕರಿಸಿರುವ ನ್ಯಾಯಮೂರ್ತಿ ಶೇಖರ್‌ ಕುಮಾರ್‌ ಯಾದವ್‌, ಆದೇಶದಲ್ಲಿ ಗೋವಿನ ಮಹತ್ವವನ್ನೂ ಪ್ರಸ್ತಾಪಿಸಿದ್ದಾರೆ. ಗೋವಿನ ಹಾಲು, ಮೊಸರು, ತುಪ್ಪ, ಮೂತ್ರ (ಗಂಜಲ) ಹಾಗೂ ಸಗಣಿಯನ್ನು ಸೇರಿಸಿ ತಯಾರಿಸುವ 'ಪಂಚಗವ್ಯವು' ವಾಸಿಯಾಗದ ಹಲವು ಕಾಯಿಲೆಗಳನ್ನು ಗುಣಪಡಿಸಲು ಸಹಕಾರಿಯಾಗಿದೆ ಎಂದು ತಿಳಿಸಿದ್ದಾರೆ.

ಗೋವನ್ನು ಕದ್ದು, ಕೊಂದ ಆರೋಪ ಸಾಂಬಲ್‌ ಜಿಲ್ಲೆಯ ಜಾವೇದ್‌ ಮೇಲಿದ್ದು, ನ್ಯಾಯಾಲಯವು ಜಾಮೀನು ನಿರಾಕರಿಸಿದೆ.

'ಇದು ಅರ್ಜಿದಾರರ ಮೊದಲ ಅಪರಾಧವಲ್ಲ. ಈ ಅಪರಾಧಕ್ಕೂ ಮುನ್ನ, ಅವರು ಗೋ ಹತ್ಯೆಯನ್ನು ಮಾಡಿದ್ದಾರೆ. ಜಾಮೀನಿನ ಮೇಲೆ ಅವರನ್ನು ಬಿಡುಗಡೆ ಮಾಡಿದರೆ, ಮತ್ತೆ ಅವರು ಅದೇ ಅಪರಾಧ ಮಾಡುತ್ತಾರೆ' ಎಂದು ನ್ಯಾಯಾಲಯ ಬುಧವಾರ ಹೇಳಿದೆ.

'ಹಿಂದೂ ಧರ್ಮದ ಪ್ರಕಾರ, 33 ಬಗೆಯ ದೇವರು, ದೇವತೆಗಳು ಗೋವಿನಲ್ಲಿ ವಾಸಿಸುತ್ತಾರೆ. ಭಗವಂತ ಕೃಷ್ಣ ತಮ್ಮ ಎಲ್ಲ ಜ್ಞಾನವನ್ನು ಗೋವಿನ ಕಾಲುಗಳಿಂದ ಪಡೆದರು' ಎಂದು ನ್ಯಾಯಾಲಯದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

'ಗೋವು ಅಥವಾ ಗೂಳಿಯನ್ನು ಕೊಲ್ಲುವುದು ಮನುಷ್ಯರನ್ನು ಹತ್ಯೆ ಮಾಡುವುದಕ್ಕೆ ಸಮನಾದುದು ಎಂದು ಏಸು ಕ್ರಿಸ್ತ ಹೇಳಿದ್ದರು. 'ನೀವು ನನ್ನನ್ನು ಬೇಕಾದರೆ ಕೊಂದುಬಿಡಿ ಆದರೆ ಗೋವನ್ನು ಹಿಂಸಿಸಬೇಡಿ' ಎಂದು ಬಾಲ ಗಂಗಾಧರ್‌ ತಿಲಕ್‌ ಹೇಳಿದ್ದರು. ಗೋ ಹತ್ಯೆಯನ್ನು ಸಂಪೂರ್ಣ ನಿಷೇಧಿಸುವಂತೆ ಪಂಡಿತ್‌ ಮದನ್‌ ಮೋಹನ್‌ ಮಾಳವಿಯಾ ಸಲಹೆ ಮಾಡಿದ್ದರು.

'ಭಗವಂತ ಬುದ್ಧ ಗೋವನ್ನು ಮನುಷ್ಯನ ಸ್ನೇಹಿತ ಎಂದಿದ್ದರು, ಜೈನರು ಗೋವನ್ನು ಸ್ವರ್ಗವೆಂದು ಕರೆದರು' ಎಂದು ಆದೇಶದಲ್ಲಿದೆ.

ಗೋವು ಉಸಿರಾಡುವಾಗ ಆಮ್ಲಜನಕವನ್ನು ಹೀರಿಕೊಂಡು ಆಮ್ಲಜನಕವನ್ನೇ ಹೊರಬಿಡುವುದಾಗಿ ವಿಜ್ಞಾನಿಗಳು ನಂಬಿದ್ದಾರೆ ಎಂದೂ ಆದೇಶದಲ್ಲಿ ತಿಳಿಸಲಾಗಿದೆ.

'ಭಾರತದ ಸಂವಿಧಾನ ರಚನೆಯ ಸಮಯದಲ್ಲಿ ಗೋ ರಕ್ಷಣೆಯನ್ನು ಮೂಲಭೂತ ಹಕ್ಕು ಆಗಿ ಸೇರಿಸುವಂತೆ ಹಲವು ಸದಸ್ಯರು ಪ್ರಸ್ತಾಪಿಸಿದ್ದರು. ಹಿಂದೂಗಳು ಹಲವು ಶತಮಾನಗಳಿಂದ ಗೋವು ಪೂಜಿಸುತ್ತಿದ್ದಾರೆ. ಇತರೆ ಧರ್ಮೀಯರು ಸಹ ಇದನ್ನು ಅರ್ಥ ಮಾಡಿಕೊಂಡಿದ್ದಾರೆ, ಹಾಗಾಗಿಯೇ ಮೊಘಲ್‌ ಆಡಳಿತಾವಧಿಯಲ್ಲಿ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗುತ್ತದೆಂದು ಗೋ ಹತ್ಯೆಯನ್ನು ತೀವ್ರವಾಗಿ ಖಂಡಿಸಲಾಗಿತ್ತು' ಎಂದು ನ್ಯಾಯಾಲಯವು ಆದೇಶದಲ್ಲಿ ವಿವರಿಸಿದೆ.

ದೇಶದ ಬಹುತೇಕ ಮುಸ್ಲಿಂ ನಾಯಕರು ರಾಷ್ಟ್ರವ್ಯಾಪಿ ಗೋ ಹತ್ಯೆ ನಿಷೇಧದ ಪರವಾಗಿದ್ದರು. ಗೋವುಗಳ ಹತ್ಯೆ ನಡೆಸದಂತೆ ಖ್ವಾಜಾ ಹಸನ್‌ ನಿಜಾಮಿ ಅವರು 'ತರ್ಕ್–ಎ–ಗಾಂ ಕುಷಿ' ಪುಸ್ತಕದಲ್ಲಿ ಬರೆದಿದ್ದಾರೆ ಹಾಗೂ ಆಂದೋಲನವನ್ನೇ ಶುರು ಮಾಡಿದ್ದರು. ಚಕ್ರಾಧಿಪತಿ ಅಕ್ಬರ್‌, ಹುಮಾಯುನ್‌ ಹಾಗೂ ಬಾಬರ್‌ ಅವರು ತಮ್ಮ ಆಡಳಿತಾವಧಿಯಲ್ಲಿ ಗೋಹತ್ಯೆ ನಡೆಸದಂತೆ ಮನವಿ ಮಾಡಿದ್ದರು.

ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸುವ ಹಾಗೂ ಗೋ ರಕ್ಷಣೆಯನ್ನು ಹಿಂದೂಗಳ ಮೂಲಭೂತ ಹಕ್ಕು ಆಗಿ ಸೇರಿಸುವ ಅಗತ್ಯವಿದೆ ಎಂದು ಕೋರ್ಟ್‌ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT