ಗುರುವಾರ , ಜೂನ್ 17, 2021
22 °C

ಜುಲೈವರೆಗೂ ಕೋವಿಡ್‌ ಎರಡನೇ ಅಲೆ: ವೈರಾಣು ತಜ್ಞ ಶಾಹಿದ್‌ ಜಮೀಲ್‌

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತದಲ್ಲಿ ಕೋವಿಡ್‌–19ರ ಎರಡನೇ ಅಲೆಯು ಏರುಗತಿಯನ್ನು ಮುಗಿಸಿದಂತೆ ಕಂಡುಬಂದರೂ, ಅದು ಕೆಳಗೆ ಇಳಿಯವುದಕ್ಕೆ ದೀರ್ಘ ಅವಧಿ ತೆಗೆದುಕೊಳ್ಳುತ್ತದೆ. ಬಹುಶಃ ಜುಲೈವರೆಗೂ ಮುಂದುವರೆಯಬಹುದು ಎಂದು ವೈರಾಣು ತಜ್ಞ ಶಾಹಿದ್‌ ಜಮೀಲ್‌ ಅಭಿಪ್ರಾಯಪಟ್ಟಿದ್ದಾರೆ.

‘ವೈರಸ್‌ನ ಹೊಸ ರೂಪಾಂತರಗಳಿಂದ ಪ್ರಕರಣಗಳ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗಲು ಕಾರಣವಾಗಿದ್ದರೂ, ರೂಪಾಂತರಿತ ವೈರಸ್‌ಗಳು ಹೆಚ್ಚು ಮಾರಕವಾಗಿವೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ’ ಎಂದು ಅಶೋಕ ವಿಶ್ವವಿದ್ಯಾಲಯದ ತ್ರಿವೇದಿ ಸ್ಕೂಲ್ ಆಫ್ ಬಯೋಸೈನ್ಸ್‌ನ ನಿರ್ದೇಶಕರಾಗಿರುವ ಅವರು ಹೇಳಿದ್ದಾರೆ.

ಇಂಡಿಯನ್ ಎಕ್ಸ್‌ಪ್ರೆಸ್ ಮಂಗಳವಾರ ಸಂಜೆ ಆಯೋಜಿಸಿದ್ದ ಆನ್‌ಲೈನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು. ಕೋವಿಡ್ ಅಲೆ ಉತ್ತುಂಗಕ್ಕೇರಿದೆ ಎಂದು ಈಗಲೇ ಹೇಳುವುದಕ್ಕೆ ಆಗುವುದಿಲ್ಲ ಎಂದರು.

ಕೋವಿಡ್‌–19ರ ಎರಡನೇ ಅಲೆಯು ಇಳಿದಂತೆ ತೋರುತ್ತಿದ್ದರೂ, ಅದು ದೀರ್ಘ ಪ್ರಕ್ರಿಯೆ ಆಗಿದೆ. ಬಹುಷಃ ಜುಲೈವರೆಗೂ ಈ ಇದು ನಡೆಯಬಹುದು. ಅಲೆಯು ಕ್ಷೀಣಿಸಲು ಆರಂಭಿಸಿದರೂ ಪ್ರತಿದಿನ ಹೆಚ್ಚಿನ ಸಂಖ್ಯೆಯ ಸೋಂಕಿತರವನ್ನು ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

‘ಮೊದಲ ಅಲೆಯಲ್ಲಿ ನಾವು ಸ್ಥಿರವಾದ ಕುಸಿತವನ್ನು ಕಂಡಿದ್ದೇವೆ. ಆಗ ದಿನಕ್ಕೆ 96ರಿಂದ 97 ಸಾವಿರ ಪ್ರಕರಣಗಳು ದಾಖಲಾಗುತ್ತಿದ್ದವು. ಆದರೆ ಎರಡನೇ ಅಲೆಯ ಈ ಸಂದರ್ಭದಲ್ಲಿ ನಿತ್ಯ ಸುಮಾರು 4 ಲಕ್ಷ ಪ್ರಕರಣಗಳು ದಾಖಲಾಗುತ್ತಿವೆ. ಹಾಗಾಗಿ ಎರಡನೇ ಅಲೆಯ ಇಳಿಕೆ ಪ್ರಕ್ರಿಯೆ ದೀರ್ಘವಾಗಿರುತ್ತದೆ’ ಎಂದು ಅವರು ವಿವರಿಸಿದರು.

‘ಭಾರತದಲ್ಲಿ ಮರಣ ಮಾಹಿತಿಯನ್ನು ತಪ್ಪಾಗಿ ನೀಡಲಾಗುತ್ತಿದೆ. ಇಲ್ಲಿ ದತ್ತಾಂಶವನ್ನು ಸಂಗ್ರಹಿಸುವ ವಿಧಾನವೇ ದೋಷಯುಕ್ತವಾಗಿದೆ’ ಎಂದು ಅವರು ಅಭಿಪ್ರಾಯಪಟ್ಟರು.

‘ಡಿಸೆಂಬರ್‌ನಲ್ಲಿ ಸೋಂಕಿನ ಪ್ರಮಾಣ ಇಳಿಕೆಯ ಹಾದಿಯಲ್ಲಿತ್ತು. ಜನವರಿ ಮತ್ತು ಫೆಬ್ರುವರಿಯಲ್ಲಿ ದೊಡ್ಡ ಪ್ರಮಾಣದಲ್ಲಿ ವಿವಾಹ ಮಹೋತ್ಸವಗಳು, ಕಾರ್ಯಕ್ರಮಗಳು ಜರುಗಿದವು. ಇದು ಸೋಂಕು ಹರಡಲು ಕಾರಣವಾಯಿತು. ಜತೆಗೆ ದೇಶದ ವಿವಿಧೆಡೆ ನಡೆದ ಚುನಾವಣೆ, ರ್‍ಯಾಲಿ, ಧಾರ್ಮಿಕ ಸಮಾವೇಶಗಳು ಕೋವಿಡ್–19ರ ಎರಡನೇ ಅಲೆ ತೀವ್ರವಾಗುವಂತೆ ಮಾಡಿ, ಹೆಚ್ಚು ಸೋಂಕು ಪ್ರಕರಣಗಳು ದಾಖಲಾಗುತ್ತಿವೆ’ ಎಂದು ಅವರು ವಿವರಿಸಿದರು.

ಭಾರತದಲ್ಲಿ ಲಸಿಕೆ ಅಭಿಯಾನ ಇನ್ನಷ್ಟು ಚುರುಕಾಗಿಸಬೇಕು. ಬಹುತೇಕರಿಗೆ ಲಸಿಕೆ ದೊರೆಯುವಂತಾಗಬೇಕು ಎಂದು ಅವರು ಇದೇ ವೇಳೆ ಪ್ರತಿಪಾದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು