ಶುಕ್ರವಾರ, ಮೇ 20, 2022
26 °C

ಪರಮ್ ವೀರ್ ಸಿಂಗ್– ವಾಜೆ ರಹಸ್ಯ ಭೇಟಿ: ಮುಂಬೈನ ನಾಲ್ವರು ಪೊಲೀಸರಿಗೆ ನೋಟಿಸ್

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ:ಕಳೆದ ವರ್ಷ ನವೆಂಬರ್‌ನಲ್ಲಿ ಮುಂಬೈನ ಮಾಜಿ ಪೊಲೀಸ್ ಕಮಿಷನರ್ ಪರಮ್ ವೀರ್ ಸಿಂಗ್ ಮತ್ತು ವಜಾಗೊಂಡಿರುವ ಪೊಲೀಸ್ ಅಧಿಕಾರಿ ಸಚಿನ್ ವಾಜೆ ನಡುವಿನ 'ರಹಸ್ಯ' ಸಭೆಗೆ ಸಂಬಂಧಿಸಿದಂತೆ ನವಿ ಮುಂಬೈ ಪೊಲೀಸರು ನಾಲ್ವರು ಪೊಲೀಸ್ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ದಕ್ಷಿಣ ಮುಂಬೈನ ಕಟ್ಟಡವೊಂದರಲ್ಲಿ ಜಸ್ಟೀಸ್ ಚಾಂಡಿವಾಲ್ ಆಯೋಗದ ಕೊಠಡಿಯ ಪಕ್ಕದ ಕೊಠಡಿಯಲ್ಲಿ ಇಬ್ಬರೂ ಭೇಟಿಯಾಗಿದ್ದರು. ಮುಂಬೈ ಪೊಲೀಸ್ ಕಮಿಷನರ್ ಹುದ್ದೆಯಿಂದ ವಜಾಗೊಂಡ ನಂತರ ಪರಮ್ ಬೀರ್ ಸಿಂಗ್ ಅವರು ಆಗಿನ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ಮೇಲೆ ಹೊರಿಸಲಾದ ಭ್ರಷ್ಟಾಚಾರದ ಆರೋಪಗಳನ್ನು ಏಕಸದಸ್ಯ ಸಮಿತಿಯು ತನಿಖೆ ನಡೆಸುತ್ತಿದೆ. ನವಿ ಮುಂಬೈ ಪೊಲೀಸ್‌ನ ಸ್ಥಳೀಯ ಶಸ್ತ್ರಾಸ್ತ್ರ ಘಟಕದ ನಾಲ್ವರು ಸಿಬ್ಬಂದಿ ವಾಜೆ ಅವರನ್ನು ತಲೋಜಾ ಜೈಲಿನಿಂದ ದಕ್ಷಿಣ ಮುಂಬೈನಲ್ಲಿ ಆಯೋಗದ ಮುಂದೆ ವಿಚಾರಣೆಗೆ ಕರೆದೊಯ್ದಿದ್ದರು. ಈ ಸಂದರ್ಭ ಅವರು ಮತ್ತು ಮರಮ್ ಬೀರ್ ಸಿಂಗ್ ರಹಸ್ಯವಾಗಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ..

‘ಪ್ರಕರಣ ಕುರಿತಂತೆ ತನಿಖೆ ನಡೆಸಿದ ನವಿ ಮುಂಬೈನ ಡಿಸಿಪಿ ಅವರ ಕಚೇರಿಯಿಂದ ನಾಲ್ವರು ಪೊಲೀಸರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಅವರು ವರದಿ ನೀಡಿದ ನಂತರ ನಾವು ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ’ಎಂದು ನವಿ ಮುಂಬೈನ ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನೋಟಿಸ್ ಪಡೆದಿರುವ ನಾಲ್ವರು ಸಿಬ್ಬಂದಿಯಲ್ಲಿ ಒಬ್ಬರು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮತ್ತು ಮೂವರು ಕಾನ್‌ಸ್ಟೆಬಲ್‌ಗಳು ಸೇರಿದ್ದಾರೆ ಎಂದು ಅವರು ಹೇಳಿದ್ದಾರೆ.

ಕಳೆದ ವರ್ಷ ಫೆಬ್ರವರಿಯಲ್ಲಿ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ದಕ್ಷಿಣ ಮುಂಬೈನ ನಿವಾಸದ ಹೊರಗೆ ಸ್ಫೋಟಕ ತುಂಬಿದ ಎಸ್‌ಯುವಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಜೆ ಪ್ರಸ್ತುತ ನವಿ ಮುಂಬೈನ ತಲೋಜಾ ಸೆಂಟ್ರಲ್ ಜೈಲಿನಲ್ಲಿದ್ದಾರೆ. ವಾಜೆ, ಥಾಣೆ ಉದ್ಯಮಿ ಮನಸುಖ್ ಹಿರೇನ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ.

‘ಸಿಂಗ್ ಮತ್ತು ವಾಜೆ ನಡುವಿನ ಸಭೆಯ ಮಾಹಿತಿ ಬೆಳಕಿಗೆ ಬಂದ ನಂತರ, ಮುಂಬೈ ಪೊಲೀಸ್‌ನ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ನವಿ ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಾವು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಮತ್ತು ನಾಲ್ವರು ಪೊಲೀಸ್ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ. ಆರೋಪಿಯನ್ನು ಕರೆದೊಯ್ಯುವಾಗ ಪ್ರೋಟೊಕಾಲ್ ಉಲ್ಲಂಘನೆಯಾಗಿದೆ’ ಎಂದು ಅಧಿಕಾರಿ ಹೇಳಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು