ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿಗೆ ಭದ್ರತೆ ಲೋಪ: ತನಿಖಾ ಸಮಿತಿಗೆ ಜಸ್ಟಿಸ್‌ ಇಂದು ಮಲ್ಹೋತ್ರ ನೇತೃತ್ವ

Last Updated 12 ಜನವರಿ 2022, 6:11 IST
ಅಕ್ಷರ ಗಾತ್ರ

ನವದೆಹಲಿ: ಜನವರಿ 5ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‌ಗೆ ಭೇಟಿ ನೀಡಿದ್ದಾಗ ಭದ್ರತೆಯಲ್ಲಿ ಉಂಟಾಗಿದ್ದ ಲೋಪದ ಬಗ್ಗೆ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಇಂದು ಮಲ್ಹೋತ್ರ ನೇತೃತ್ವದಲ್ಲಿ ತನಿಖಾ ಸಮಿತಿಯನ್ನು ಸುಪ್ರೀಂ ಕೋರ್ಟ್‌ ಬುಧವಾರ ರಚಿಸಿದೆ.

ಸುಪ್ರೀಂ ಕೋರ್ಟ್‌ ರಚಿಸಿರುವ ಸಮಿತಿಗೆ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಇಂದು ಮಲ್ಹೋತ್ರ ಮುಖ್ಯಸ್ಥರಾಗಿರುತ್ತಾರೆ. ರಾಷ್ಟ್ರೀಯ ತನಿಖಾ ಸಂಸ್ಥೆಯ ಮಹಾ ನಿರೀಕ್ಷಕ, ಪಂಜಾಬ್‌ನ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಭದ್ರತೆ), ಚಂಡೀಗಡದ ಪೊಲೀಸ್‌ ಮಹಾ ನಿರ್ದೇಶಕ ಹಾಗೂ ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್‌ ಸಮಿತಿಯ ಸದಸ್ಯರಾಗಿರುತ್ತಾರೆ.

ಸೋಮವಾರ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ ಪೀಠವು, 'ಪ್ರಧಾನಿಯ ಭದ್ರತೆಯಲ್ಲಿ ಆಗಿರುವ ಲೋಪವನ್ನು ನ್ಯಾಯಾಲಯವು ಗಂಭೀರವಾಗಿ ಪರಿಗಣಿಸಿದೆ' ಎಂದು ಹೇಳಿತ್ತು. ಅತ್ಯಂತ ಅಲ್ಪ ಅವಧಿಯಲ್ಲಿ ವರದಿ ಸಲ್ಲಿಸುವಂತೆ ಸಮಿತಿಗೆ ಸೂಚಿಸಲಾಗುವುದು ಎಂದು ತಿಳಿಸಿತ್ತು.

ಕೇಂದ್ರ ಸರ್ಕಾರ ಮತ್ತು ಪಂಜಾಬ್‌ ಸರ್ಕಾರ ಆರಂಭಿಸಿದ್ದ ತನಿಖೆಯನ್ನು ಸ್ಥಗಿತಗೊಳಿಸುವಂತೆಯೂ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ಮತ್ತು ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಮತ್ತು ಹಿಮಾ ಕೊಹ್ಲಿ ಅವರಿದ್ದ ಪೀಠವು ಸೂಚಿಸಿತ್ತು.

ಪ್ರತಿಭಟನಕಾರರು ರಸ್ತೆ ತಡೆ ನಡೆಸಿದ್ದ ಕಾರಣ, ಪಂಜಾಬ್‌ನ ಫಿರೋಜ್‌ಪುರ ಸಮೀಪದ ಫ್ಲೈಓವರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಬುಧವಾರ ಸುಮಾರು 20 ನಿಮಿಷ ಸಿಲುಕಿಕೊಂಡಿದ್ದರು. ಅಲ್ಲಿ ಆಯೋಜಿಸಲಾಗಿದ್ದ ರ‍್ಯಾಲಿಯಲ್ಲಿ ಭಾಗವಹಿಸದೆಯೇ ಪ್ರಧಾನಿ ಹಿಂದಿರುಗಿದ್ದರು.

ಪಂಜಾಬ್‌ ಪೊಲೀಸರ ಜತೆಗಿನ ಸಮನ್ವಯದಲ್ಲಿ ಭದ್ರತೆಯನ್ನು ಒದಗಿಸಲಾಗಿತ್ತು. ಇದರಲ್ಲಿ ಲೋಪ ಆಗಿದೆ ಎಂದು ಲಾಯರ್ಸ್‌ ವಾಯ್ಸ್‌ ಸಂಸ್ಥೆಯು ಸಲ್ಲಿಸಿದ ಅರ್ಜಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT