ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ: ಎಂಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಘಟಾನುಘಟಿಗಳ ಕಣ್ಣು

ಮಹಾರಾಷ್ಟ್ರ ಉಸ್ತುವಾರಿ ಎಚ್‌.ಕೆ.ಪಾಟೀಲರಿಂದ ಸರಣಿ ಸಭೆ
Last Updated 6 ಜನವರಿ 2021, 13:58 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್‌ ಸಮಿತಿ (ಎಂಪಿಸಿಸಿ) ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ ದೊಡ್ಡದಾಗಿದ್ದು, ಪ್ರಭಾವಿ ನಾಯಕರೂ ಸಹ ಆಕಾಂಕ್ಷಿಗಳಾಗಿರುವುದರಿಂದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವುದು ಪಕ್ಷದ ವರಿಷ್ಠರಿಗೆ ಸವಾಲಿನ ಕೆಲಸವಾಗಿದೆ.

ಎಂಪಿಸಿಸಿಯ ಅಧ್ಯಕ್ಷರಾಗಿರುವ ಬಾಳಾಸಾಹೇಬ್‌ ಥೋರಟ್‌ ಅವರು ಆ ಸ್ಥಾನದಿಂದ ಕೆಳಗಿಳಿಯುವ ಇಂಗಿತ ವ್ಯಕ್ತಪಡಿಸಿರುವ ಕಾರಣ, ಹೊಸ ಅಧ್ಯಕ್ಷರ ಹುಡುಕಾಟಕ್ಕೆ ಹೈಕಮಾಂಡ್‌ ಮುಂದಾಗಿದೆ. ಥೋರಟ್‌ ಅವರು ಸದ್ಯ ಕಂದಾಯ ಸಚಿವರಾಗಿದ್ದಾರೆ.

ಪಕ್ಷದ ರಾಜ್ಯ ಮುಖಂಡರೊಂದಿಗೆ ಸಮಾಲೋಚನೆ ನಡೆಸಿ, ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸಲುವಾಗಿ ಮಹಾರಾಷ್ಟ್ರದ ಉಸ್ತುವಾರಿಯಾಗಿರುವ, ಕರ್ನಾಟಕದಲ್ಲಿ ಪಕ್ಷದ ಹಿರಿಯ ಮುಖಂಡ ಎಚ್‌.ಕೆ.ಪಾಟೀಲ ಅವರನ್ನು ಕಾಂಗ್ರೆಸ್‌ ಹೈಕಮಾಂಡ್‌ ರಾಜ್ಯಕ್ಕೆ ಕಳುಹಿಸಿದೆ.

ಎಚ್‌.ಕೆ.ಪಾಟೀಲ ಅವರು ಮಾಜಿ ಮುಖ್ಯಮಂತ್ರಿಗಳಾದ ಪೃಥ್ವಿರಾಜ್‌ ಚವಾಣ್‌, ಅಶೋಕ್‌ ಚೌಹಾಣ್‌ ಅವರನ್ನು ಭೇಟಿ ಚರ್ಚೆ ಮಾಡಿದ್ದಾರೆ. ಈ ಪೈಕಿ ಅಶೋಕ್‌ ಚೌಹಾಣ್‌ ಅವರು ಈಗ ಲೋಕೋಪಯೋಗಿ ಸಚಿವರಾಗಿದ್ದಾರೆ. ಪಕ್ಷದ ಶಾಸಕರೊಂದಿಗೂ ಸಮಾಲೋಚನೆ ನಡೆಸಿ, ಅಭಿಪ್ರಾಯ ಸಂಗ್ರಹಿಸಿದ್ದಾರೆ.

ಆಕಾಂಕ್ಷಿಗಳು: ಪಕ್ಷದ ಘಟಾನುಘಟಿ ನಾಯಕರು ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ಧಾರೆ. ನಾನಾ ಪಾಟೋಳೆ, ಅಮಿತ್‌ ದೇಶಮುಖ್‌, ಯಶೋಮತಿ ಠಾಕೂರ್‌, ರಜನಿ ಪಾಟೀಲ್, ವಿಜಯ್‌ ವಡ್ಡೆಟ್ಟಿವರ್, ರಾಜೀವ್‌ ಸತಾವ್‌ ಹಾಗೂ ವಿಶ್ವಜೀತ್‌ ಕದಂ ಸ್ಪರ್ಧೆಯಲ್ಲಿರುವ ಪ್ರಮುಖರು.

ಪಕ್ಷದ ‘ಫೈರ್ ಬ್ರ್ಯಾಂಡ್‌’ ಎಂದೇ ಕರೆಯಲಾಗುವ ನಾನಾ ಪಾಟೋಳೆ ಅವರು ಈಗ ವಿಧಾನಸಭೆ ಸ್ಪೀಕರ್‌. ಈ ಮೊದಲು ಬಿಜೆಪಿಯ ಸಂಸದರಾಗಿದ್ದ ನಾನಾ, ನರೇಂದ್ರ ಮೋದಿ ನಾಯಕತ್ವದ ವಿರುದ್ಧ ಗುಡುಗಿದ ಮೊದಲ ಮುಖಂಡ. ನಂತರ ಅವರು ಕೇಸರಿ ಪಕ್ಷವನ್ನು ತೊರೆದು ಕಾಂಗ್ರೆಸ್‌ ಸೇರಿದರು.

ಒಬಿಸಿ ವರ್ಗಕ್ಕೆ ಸೇರಿದ ಕುಣಬಿ ಮರಾಠಾ ಸಮುದಾಯಕ್ಕೆ ಸೇರಿದ ಪಾಟೋಳೆ 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಭಾವಿ ಮುಖಂಡ ನಿತಿನ್‌ ಗಡ್ಕರಿ ವಿರುದ್ಧ ಸ್ಪರ್ಧಿಸಿ ಪರಾಭವಗೊಂಡರು.

ಅಮಿತ್‌ ದೇಶಮುಖ್‌ ಸದ್ಯ ರಾಜ್ಯದ ವೈದ್ಯ ಶಿಕ್ಷಣ ಹಾಗೂ ಸಾಂಸ್ಕೃತಿಕ ವ್ಯವಹಾರಗಳ ಸಚಿವರಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ವಿಲಾಸ್‌ರಾವ್‌ ದೇಶಮುಖ್‌ ಪುತ್ರ.

ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಯಶೋಮತಿ ಠಾಕೂರ್‌ ಸದ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ. ಅವರೂ ಸಹ ಫೈರ್‌ಬ್ರ್ಯಾಂಡ್‌ ನಾಯಕಿ ಎಂದೇ ಗುರುತಿಸಿಕೊಂಡಿದ್ದಾರೆ.

ರಜನಿ ಪಾಟೀಲ್‌ ಅವರು ರಾಜ್ಯಸಭೆಯ ಮಾಜಿ ಸದಸ್ಯೆ. ವಿಶ್ವಸಂಸ್ಥೆಯ ಕೇಂದ್ರ ಕಚೇರಿ ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಮಹಿಳಾ ಆಯೋಗದ 49ನೇ ಅಧಿವೇಶನದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

ಇಂಧನ ಸಚಿವ ಡಾ.ರಾವುತ್‌ ಅವರು ಕಾಂಗ್ರೆಸ್‌ನ ಎಸ್‌ಸಿ ಮೋರ್ಚಾದ ಅಧ್ಯಕ್ಷ. ಸತಾವ್‌ ಅವರು ರಾಜ್ಯಸಭೆ ಸದಸ್ಯ ಹಾಗೂ ರಾಹುಲ್‌ ಗಾಂಧಿ ಆಪ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT