ಗುರುವಾರ , ಆಗಸ್ಟ್ 5, 2021
28 °C
ಪವಾರ್ ನೇತೃತ್ವದ ಪ್ರತಿಪಕ್ಷಗಳ ಸಭೆಗೆ ಬಾರದ ಕಾಂಗ್ರೆಸ್

ಬಿಜೆಪಿ ವಿರೋಧಿಗಳ ಒಗ್ಗಟ್ಟು?

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ : ಟಿಎಂಸಿ, ಎಸ್‌ಪಿ, ಎಎಪಿ, ಆರ್‌ಎಲ್‌ಡಿ, ಎಡರಂಗ ಸೇರಿದಂತೆ ಪ್ರತಿಪಕ್ಷಗಳ ಮುಖಂಡರು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಭಾಗಿಯಾಗಿದ್ದರು. ದೇಶದ ಮುಂದಿರುವ ಹಲವು ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ.

ಸಭೆಯ ಅಧ್ಯಕ್ಷತೆಯನ್ನು ಎನ್‌ಸಿಪಿ ಮುಖಂಡ ಶರದ್‌ ಪವಾರ್‌ ವಹಿಸಿದ್ದರೂ, ಸಭೆಯನ್ನು  ಯಶವಂತ್ ಸಿನ್ಹಾ ಅವರ ‘ರಾಷ್ಟ್ರ ಮಂಚ್’ನ ನೇತೃತ್ವದಲ್ಲಿ ಆಯೋಜಿಸಲಾಗಿತ್ತು ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಎನ್‌ಸಿಪಿಯ ಮುಖಂಡರೊಬ್ಬರು ತಿಳಿಸಿದ್ದಾರೆ. ಎಡಪಕ್ಷ ಹೊರತು ಪಡಿಸಿದರೆ, ಬಹುತೇಕ ಪ್ರಾದೇಶಿಕ ಪಕ್ಷಗಳ ಮುಖಂಡರೇ ಸಭೆಯಲ್ಲಿದ್ದರು. ದೇಶದಲ್ಲಿ ಸಂಭಾವ್ಯ ತೃತೀಯ ರಂಗದ ಸಭೆ ಇದಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಪವಾರ್ ನಿವಾಸದಲ್ಲಿ ಎರಡು ಗಂಟೆಗಳು ಮಾತುಕತೆ ನಡೆಯಿತು. ಯಶವಂತ್‌ ಸಿನ್ಹಾ, ಎಸ್‌ಪಿಯ ಘನಶ್ಯಾಮ್ ತಿವಾರಿ, ಆರ್‌ಎಲ್‌ಡಿ ಪಕ್ಷದ ಮುಖ್ಯಸ್ಥ ಜಯಂತ್ ಚೌಧರಿ, ಆಮ್ ಆದ್ಮಿ ಪಕ್ಷದ ಸುಶೀಲ್ ಗುಪ್ತಾ, ಸಿಪಿಐನ  ಬಿನೋಯ್ ವಿಶ್ವಂ ಅವರು ಸಭೆಯಲ್ಲಿ ಇದ್ದರು.

ಇವರೆ ಜೊತೆಗೆ ಎನ್‌ಸಿ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ, ಕಾಂಗ್ರೆಸ್‌ನ ಮಾಜಿ ಮುಖಂಡ ಸಂಜಯ್ ಝಾ, ಜೆಡಿಯು ಮಾಜಿ ಮುಖಂಡ ಪವನ್ ವರ್ಮಾ, ಪ್ರಸಿದ್ಧ ಗೀತರಚನಕಾರ ಜಾವೇದ್ ಅಖ್ತರ್, ಮಾಜಿ ರಾಜತಾಂತ್ರಿಕ ಕೆ.ಸಿ. ಸಿಂಗ್ ಹಾಗೂ ಇತರ ಗಣ್ಯರಿದ್ದರು.

ಕೆಲವು ಕಾಂಗ್ರೆಸ್ ಮುಖಂಡರಿಗೆ ಆಹ್ವಾನ ಕಳುಹಿಸಲಾಗಿದ್ದರೂ ಅವರು ಭಾಗವಹಿಸಲಿಲ್ಲ. ಆ ಮೂಲಕ ಪ್ರಾದೇಶಿಕ ಪಕ್ಷಗಳ ನೇತೃತ್ವದ ಗುಂಪಿನ ಭಾಗವಾಗಿರಲು ಮುಖ್ಯ ವಿರೋಧ ಪಕ್ಷವು ಬಯಸುವುದಿಲ್ಲ ಎಂಬ ಸಂದೇಶವನ್ನು ಕಾಂಗ್ರೆಸ್ ರವಾನಿಸಿತು.

‘ಇದು ರಾಜಕೀಯ ಸಭೆಯಲ್ಲ, ಸಮಾನ ಮನಸ್ಕರ ಸಂವಹನ. ಕೋವಿಡ್ ನಿರ್ವಹಣೆ, ಸಾಂವಿಧಾನಿಕ ಸಂಸ್ಥೆಗಳ ಮೇಲಿನ ದಾಳಿ, ನಿರುದ್ಯೋಗ ಮುಂತಾದ ವಿಷಯಗಳನ್ನು ಸಭೆಯಲ್ಲಿ ಚರ್ಚಿಸಲಾಗಿದೆ’ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಸಿಪಿಎಂ ನಾಯಕ ನಿಲೋತ್ಪಲ ಬಸು ಹೇಳಿದ್ದಾರೆ.

ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಅಧಿಕಾರದಲ್ಲಿರುವ ಶಿವಸೇನೆ, ಡಿಎಂಕೆ ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾದಂತಹ ಅನೇಕ ಪ್ರಮುಖ ಪ್ರಾದೇಶಿಕ ಪಕ್ಷಗಳು ಪವಾರ್ ಅವರ ಮನೆಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿರಲಿಲ್ಲ.

‘ರಾಜಕೀಯ ಚರ್ಚೆಗೆ ಸಮಯವಲ್ಲ’

ವಿವಿಧ ಪಕ್ಷಗಳ ನಾಯಕರು ನಡೆಸಿದ ಸಭೆ ಹಾಗೂ ತೃತೀಯ ರಂಗ ರಚನೆ ಸಾಧ್ಯತೆಯ ಬಗ್ಗೆ ಪ್ರತಿಕ್ರಿಯಿಸಲು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನಿರಾಕರಿಸಿದ್ದಾರೆ. ಮಂಗಳವಾರ ವರ್ಚುವಲ್ ಪತ್ರಿಕಾಗೋಷ್ಠಿ ನಡೆಸಿದ ಅವರು, ‘ಕೋವಿಡ್ ಪರಿಸ್ಥಿತಿ ಹಾಗೂ ಮುಂದೆ ಸಂಭವಿಸಬಹುದಾದ ಮೂರನೇ ಅಲೆಯಿಂದ ದೇಶವನ್ನು ರಕ್ಷಿಸುವುದು ಹೇಗೆ ಎಂಬತ್ತ ಗಮನ ಹರಿಸುತ್ತಿದ್ದೇನೆ. ಈ ಕಡೆಗೆ ಗಮನಹರಿಸಿ ಪರಿಣಾಮಕಾರಿಯಾಗಿ ಕೆಲಸ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರುವುದು ನನ್ನ ಈಗಿನ ಜವಾಬ್ದಾರಿಯಾಗಿದೆ. ರಾಜಕೀಯದಲ್ಲಿ ಏನು ನಡೆಯುತ್ತಿದೆ ಎಂದು ನಿಮಗೆ ತಿಳಿದಿದೆ. ಹೀಗಾಗಿ ನಾನು ಗಮನವನ್ನು ಬೇರೆಡೆಗೆ ತಿರುಗಿಸಲು ಹೋಗುವುದಿಲ್ಲ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು