ಭಾನುವಾರ, ಏಪ್ರಿಲ್ 2, 2023
23 °C
ಪ್ರಜಾಪ್ರಭುತ್ವ ಉಳಿವಿಗೆ ಮೈತ್ರಿ: ಉದ್ಧವ್‌

ಮುಂಬೈ ಮಹಾನಗರ ಪಾಲಿಕೆ ಚುನಾವಣೆ: ಪ್ರಕಾಶ್‌ ಅಂಬೇಡ್ಕರ್‌, ಉದ್ಧವ್‌ ಮೈತ್ರಿ ಘೋಷಣೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ (ಪಿಟಿಐ): ಶಿವಸೇನಾ (ಉದ್ಧವ್‌ ಠಾಕ್ರೆ ಬಣ) ಹಾಗೂ ಪ್ರಕಾಶ್‌ ಅಂಬೇಡ್ಕರ್‌ ಅವರ ವಂಚಿತ್‌ ಬಹುಜನ್‌ ಆಘಾಡಿ (ವಿಬಿಎ) ಪಕ್ಷಗಳು ಸೋಮವಾರ ಮೈತ್ರಿ ಘೋಷಿಸಿವೆ. ಶಿವಸೇನಾ ವಿಭಜನೆಯ ನಂತರ ಮುಂಬೈ ಮಹಾನಗರ ಪಾಲಿಕೆಗೆ ಇದೇ ಮೊದಲ ಬಾರಿಗೆ ಚುನಾವಣೆ ನಡೆಯಲಿದೆ.

ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವಸೇನಾ (ಉದ್ಧವ್‌ ಠಾಕ್ರೆ ಬಣ) ಮುಖ್ಯಸ್ಥ ಉದ್ಧವ್‌ ಠಾಕ್ರೆ, ‘ಇಂದು (ಸೋಮವಾರ) ದಿವಂಗತ ಬಾಳಾ ಸಾಹೇಬ್‌ ಠಾಕ್ರೆ ಅವರ ಜಯಂತಿ. ನನ್ನ ಅಜ್ಜ ಕೇಶವ್‌ ಠಾಕ್ರೆ ಹಾಗೂ ಪ್ರಕಾಶ್‌ ಅಂಬೇಡ್ಕರ್‌ ಅವರ ಅಜ್ಜ ಡಾ. ಬಿ.ಆರ್‌. ಅಂಬೇಡ್ಕರ್‌ ಅವರು ಸಮಕಾಲೀನರು ಹಾಗೂ ಪರಸ್ಪರ ಗೌರವ ಇಟ್ಟುಕೊಂಡವರಾಗಿದ್ದರು. ಸಾಮಾಜಿಕ ಕೆಡುಕುಗಳನ್ನು, ತಪ್ಪು ನಡವಳಿಕೆಗಳನ್ನು ನಿರ್ಮೂಲನೆ ಮಾಡಲು ಜೊತೆಗೂಡಿ ಹೋರಾಡಿದ್ದಾರೆ’ ಎಂದರು.

‘ರಾಜಕೀಯದಲ್ಲಿರುವ ಕೆಟ್ಟ ನಡವಳಿಕೆಗಳನ್ನು ಹೋಗಲಾಡಿಸಲು, ಅಂಥ ದೊಡ್ಡ ನಾಯಕರ ಮುಂದಿನ ಪೀಳಿಗೆಯವರಾದ ನಾವು ಒಗ್ಗೂಡಿದ್ದೇವೆ. ದೇಶದ ಹಿತ ಕಾಪಾಡಲು, ಪ್ರಜಾಪ್ರಭುತ್ವವನ್ನು ಜೀವಂತವಾಗಿರಿಸಲು ನಾವುಗಳು ಒಂದಾಗಿದ್ದೇವೆ’ ಎಂದರು.

ಮಹಾರಾಷ್ಟ್ರ ಹಾಗೂ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಹೆಸರನ್ನು ಉಲ್ಲೇಖಿಸದೆ ಮಾತನಾಡಿದ ಉದ್ಧವ್‌, ‘ದೇಶವು ನಿರಂಕುಶ ಪ್ರಭುತ್ವದತ್ತ ಸಾಗುತ್ತಿದೆ’ ಎಂದರು. ‘ಸಾಧ್ಯವಾದರೆ, ವಿಧಾನಸಭಾ ಚುನಾವಣೆಯನ್ನು ಆದಷ್ಟು ಬೇಗ ಘೋಷಣೆ ಮಾಡಲಿ’ ಎಂದು ಸವಾಲೆಸೆದರು.

ಮೈತ್ರಿ ಮಾತುಕತೆ

ಕಳೆದ ಕೆಲವು ತಿಂಗಳಿನಿಂದಲೂ ಶಿವಸೇನಾ (ಉದ್ಧವ್‌ ಬಣ) ಹಾಗೂ ವಿಬಿಎ ಪಕ್ಷಗಳ ಮಧ್ಯೆ ಮೈತ್ರಿಯ ಕುರಿತು ಮಾತುಕತೆಗಳು ನಡೆದಿದ್ದವು. ಈ ಸಂಬಂಧ ಪ್ರತಿಕ್ರಿಯಿಸಿದ್ದ ಪ್ರಕಾಶ್‌ ಅಂಬೇಡ್ಕರ್‌ ಅವರು, ‘ಮೈತ್ರಿಯ ಕುರಿತು ನಿರ್ಧಾರ ತೆಗೆದುಕೊಳ್ಳುವುದು ಉದ್ಧವ್‌ ಠಾಕ್ರೆ ಅವರಿಗೆ ಬಿಟ್ಟ ವಿಚಾರ’ ಎಂದು ಹೇಳಿದ್ದರು.

‘ಈ ಮೈತ್ರಿಯು ವಿಬಿಎ ಹಾಗೂ ಶಿವಸೇನಾ (ಉದ್ಧವ್‌ ಬಣ) ಮಧ್ಯೆ ಮಾತ್ರ ನಡೆದಿದೆ. ಮಹಾ ವಿಕಾಸ ಅಘಾಡಿಯ ಇನ್ನಿತರ ಪಕ್ಷಗಳಾದ ಕಾಂಗ್ರೆಸ್‌ ಹಾಗೂ ಎನ್‌ಸಿಪಿ ಪಕ್ಷಗಳು ನಮ್ಮ ಜೊತೆ ಕೈಜೋಡಿಸುತ್ತವೆ ಎಂದು ನಿರೀಕ್ಷಿಸುತ್ತೇನೆ’ ಎಂದರು.

ಜೋಗಿಂದರ್‌ ಕವಾಡೆ ಅವರ ನೇತೃತ್ವದ ಪೀಪಲ್ಸ್‌ ರಿಪಬ್ಲಿಕ್‌ ಪಕ್ಷವು (ಪಿಆರ್‌ಪಿ) ಶಿವಸೇನಾದ ಏಕನಾಥ ಶಿಂದೆ ಬಣದ ಜೊತೆಗೆ ಕಳೆದ ತಿಂಗಳು ಕೈಜೋಡಿಸಿದೆ.

***

ಶಿವಸೇನಾ (ಉದ್ಧವ್‌ ಬಣ) ಹಾಗೂ ವಂಚಿತ್‌ ಬಹುಜನ್‌ ಆಘಾಡಿಯು ಒಂದಾಗಿರುವುದು ಹೊಸ ರಾಜಕೀಯದ ಆರಂಭ

-ಪ್ರಕಾಶ್‌ ಅಂಬೇಡ್ಕರ್‌, ವಂಚಿತ್‌ ಬಹುಜನ್‌ ಆಘಾಡಿಯ ಮುಖ್ಯಸ್ಥ

***

ಮಹಾ ವಿಕಾಸ ಆಘಾಡಿಗೆ ವಿಬಿಎ ಸೇರ್ಪಡೆಗೊಳ್ಳಲು ಕಾಂಗ್ರೆಸ್‌ ಹಾಗೂ ಎನ್‌ಸಿಪಿ ಪಕ್ಷಗಳಿಂದ ಬಹುಶಃ ವಿರೋಧ ಇಲ್ಲ ಎಂದು ಭಾವಿಸಿದ್ದೇನೆ

-ಉದ್ಧವ್‌ ಠಾಕ್ರೆ, ಶಿವಸೇನಾ (ಉದ್ಧವ್‌ ಬಣ) ಮುಖ್ಯಸ್ಥ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು