ಗುರುವಾರ , ನವೆಂಬರ್ 26, 2020
21 °C
ಮಹಾರಾಷ್ಟ್ರ ವಿಧಾನಸಭೆ ಕಾರ್ಯದರ್ಶಿಗೆ ಸಮನ್ಸ್‌

ಹಕ್ಕು ಚ್ಯುತಿ ಪ್ರಕರಣ: ಅರ್ನಬ್ ಗೋಸ್ವಾಮಿ ಬಂಧನಕ್ಕೆ ಸುಪ್ರೀಂ ಕೋರ್ಟ್‌ ತಡೆ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಮಹಾರಾಷ್ಟ್ರ ವಿಧಾನಸಭೆಯ ಕಾರ್ಯದರ್ಶಿಗೆ ಕೋರ್ಟ್‌ಗೆ ಹಾಜರಾಗುವಂತೆ ಸುಪ್ರೀಂ ಕೋರ್ಟ್‌ ಶುಕ್ರವಾರ ನೋಟಿಸ್‌ ಜಾರಿ ಮಾಡಿದೆ. ಹಕ್ಕು ಚ್ಯುತಿ ನೋಟಿಸ್‌ ಉಲ್ಲಂಘಿಸಿರುವ ಕುರಿತು ರಿಪಬ್ಲಿಕ್‌ ಟಿವಿ ಪ್ರಧಾನ ಸಂಪಾದಕ ಅರ್ನಬ್‌ ಗೋಸ್ವಾಮಿ ಅವರಿಗೆ ವಿಧಾನಸಭೆ ಕಾರ್ಯದರ್ಶಿ ಅಕ್ಟೋಬರ್‌ 13ರಂದು ಪತ್ರ ಬರೆದಿದ್ದರು. ಸುಪ್ರೀಂ ಕೋರ್ಟ್‌ಗೆ ಹೋಗುವುದನ್ನು ತಪ್ಪಿಸುವ ಪ್ರಯತ್ನ ಇದಾಗಿದೆ ಎಂದು ಕೋರ್ಟ್‌ ಪರಿಗಣಿಸಿದೆ.

ಅಕ್ಟೋಬರ್‌ 13ರಂದು ಅರ್ನಬ್‌ ಅವರಿಗೆ ತಲುಪಿಸಿರುವ ಪತ್ರವನ್ನು ಅವರ ವಕೀಲ ಹರೀಶ್‌ ಸಾಲ್ವೆ ಕೋರ್ಟ್‌ಗೆ ಸಲ್ಲಿಸಿದ್ದಾರೆ. ಅರ್ನಬ್‌ ಜೈಲಿನಲ್ಲಿರುವ ಕಾರಣ, ಅವರ ಪತ್ನಿಯ ಅಫಿಡವಿಟ್‌ ಸಹಿತ ಅರ್ಜಿ ಸಲ್ಲಿಸಲಾಗಿದೆ. ಸ್ಪೀಕರ್ ಅನುಮತಿ ಪಡೆಯದೆ ವಿಧಾನಸಭಾ ಪ್ರಕ್ರಿಯೆಗಳ ಪ್ರತಿಯನ್ನು ಸುಪ್ರೀಂಕೋರ್ಟ್‌‌ಗೆ ಸಲ್ಲಿಸುವ ಮೂಲಕ ವಿಧಾನಸಭೆ ಪ್ರಕ್ರಿಯೆಗಳ ಗೌಪ್ಯತೆಯನ್ನು ಉಲ್ಲಂಘಿಸಿರುವುದಾಗಿ ಅಕ್ಟೋಬರ್‌ 13ರಂದು ವಿಧಾನಸಭೆ ಕಾರ್ಯದರ್ಶಿ ಅರ್ನಬ್‌ ಅವರಿಗೆ ಪತ್ರ ಬರೆದಿದ್ದರು.

ಪತ್ರಕ್ಕೆ ಸಂಬಂಧಿಸಿದ ವಿಚಾರಣೆಗೆ ಹಾಜರಾಗುವಂತೆ ಮಹಾರಾಷ್ಟ್ರ ವಿಧಾನಸಭೆಯ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್‌ ಸೂಚಿಸಿದೆ. ಎರಡು ವಾರಗಳ ನಂತರ ವಿಚಾರಣೆ ನಡೆಸುವುದಾಗಿ ಕೋರ್ಟ್‌ ಹೇಳಿದ್ದು, ಆವರೆಗೂ 'ಹಕ್ಕು ಚ್ಯುತಿ' ವಿಚಾರದಲ್ಲಿ ಅರ್ನಬ್‌ ಅವರನ್ನು ಬಂಧಿಸದಂತೆ ಆದೇಶಿಸಿದೆ.

ಈ ಪ್ರಕರಣದಲ್ಲಿ ಸಹಕಾರ ನೀಡಲು ಹಿರಿಯ ವಕೀಲ ಅರವಿಂದ್ ದಾತಾರ್ ಅವರನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ಅವರ ನೇತೃತ್ವದ ನ್ಯಾಯಪೀಠವು ನೇಮಿಸಿದೆ. ವಿಧಾನಸಭೆ ಕಾರ್ಯದರ್ಶಿ ಬರೆಯಲಾಗಿರುವ ಪತ್ರವು ಕೋರ್ಟ್‌ನ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿದಂತೆ, ಅರ್ನಬ್‌ ಕೋರ್ಟ್‌ಗೆ ಹೋಗಿರುವುದಕ್ಕೆ ಬೆದರಿಯೊಡ್ಡಿದಂತಿದೆ.

ಸ್ಪೀಕರ್ ಅನುಮತಿ ಪಡೆಯದೆ ವಿಧಾನಸಭಾ ಪ್ರಕ್ರಿಯೆಗಳ ಪ್ರತಿಯನ್ನು ಸುಪ್ರೀಂಕೋರ್ಟ್‌‌ಗೆ ಸಲ್ಲಿಸಿದ್ದಕ್ಕಾಗಿ ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಬ್‌ ಗೋಸ್ವಾಮಿ ಅವರಿಗೆ ಹಕ್ಕು ಚ್ಯುತಿ ಉಲ್ಲಂಘನೆ ನೋಟಿಸನ್ನು ಮಹಾರಾಷ್ಟ್ರ ವಿಧಾನಸಭೆ ಕಾರ್ಯದರ್ಶಿ ನೀಡಿದ್ದಾರೆ. 'ಪತ್ರವು ಆಘಾತಕಾರಿ ಹಾಗೂ ಇಂಥದ್ದು ಹಿಂದೆಂದೂ ಕಂಡಿರಲಿಲ್ಲ' ಎಂದು ನ್ಯಾಯಮೂರ್ತಿಗಳಾದ ಎ.ಎಸ್‌.ಬೋಪಣ್ಣ ಮತ್ತು ವಿ.ರಾಮಸುಬ್ರಮಣಿಯನ್‌ ಅಭಿಪ್ರಾಯ ಪಟ್ಟಿದ್ದಾರೆ.

ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸುವುದು ಸಂವಿಧಾನದ 32ನೇ ಅನುಚ್ಛೇದದ ಅಡಿಯಲ್ಲಿ ಮೂಲಭೂತ ಹಕ್ಕು ಆಗಿರುವುದನ್ನು ವಿಧಾಸಭೆಗೆ ಸರಿಯಾಗಿ ತಿಳಿಯಪಡಿಸಬೇಕಿದೆ' ಎಂದು ಕೋರ್ಟ್‌ ಹೇಳಿದೆ.

ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ 2018ರ ಪ್ರಕರಣದ ಸಂಬಂಧ ಬುಧವಾರ ಮಹಾರಾಷ್ಟ್ರ ಪೊಲೀಸರು ಅರ್ನಬ್‌ ಗೋಸ್ವಾಮಿ ಅವರನ್ನು ಬಂಧಿಸಿ, ಅಲಿಬಾಗ್‌ ಕೋರ್ಟ್‌ಗೆ ಹಾಜರು ಪಡಿಸಿದ್ದರು. ಕೋರ್ಟ್‌ ಆದೇಶದಂತೆ ಅರ್ನಬ್‌ ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು