ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರದ್ಧಾ ಭೀಕರ ಹತ್ಯೆ: ಅಫ್ತಾಬ್‌ನ ಮುಖದಲ್ಲಿಲ್ಲ ಅಪರಾಧಿಪ್ರಜ್ಞೆ, ಪ್ರಾಯಶ್ಚಿತ್ತ!

ಕಾಲ್‌ಸೆಂಟರ್‌ ಉದ್ಯೋಗಿ ಶ್ರದ್ಧಾ ವಾಲಕರ್‌ ಹತ್ಯೆ ತನಿಖೆಯ ಜಾಡಿನಲ್ಲಿ
Last Updated 26 ನವೆಂಬರ್ 2022, 11:31 IST
ಅಕ್ಷರ ಗಾತ್ರ

ನವದೆಹಲಿ/ಮುಂಬೈ: ತನ್ನ ಸಹಜೀವನ ಸಂಗಾತಿಯನ್ನು ಭೀಕರ ಹತ್ಯೆ ಮಾಡಿ, ಶವವನ್ನು ತುಂಡು ತುಂಡಾಗಿ ಕತ್ತರಿಸಿ ಬಿಸಾಡಿದ ಕೊಲೆಗಡುಕ ಅಫ್ತಾಬ್‌ ಅಮೀನ್‌ ಪೂನಾವಾಲಾ ಮುಖದಲ್ಲಿ ಅಪರಾಧಿಪ್ರಜ್ಞೆ, ಪಶ್ಚಾತ್ತಾಪ, ಪ್ರಾಯಶ್ಚಿತ್ತ ಯಾವುದೊಂದು ಕಾಣಿಸುತ್ತಿಲ್ಲ. ಬದಲಾಗಿ ಆತ್ಮವಿಶ್ವಾಸ ಕಾಣಿಸುತ್ತಿದೆ.

ವೃತ್ತಿಯಲ್ಲಿ ಫುಡ್‌ ಬ್ಲಾಗರ್‌ ಮತ್ತು ಛಾಯಾಗ್ರಾಹಕನಾಗಿರುವ28ರ ಹರೆಯದ ಆರೋಪಿ ಅಫ್ತಾಬ್‌ ಬಾಣಸಿಗ ತರಬೇತಿಯನ್ನೂ ಪಡೆದಿದ್ದ. ಆತನ ಇನ್ನೊಂದು ಮುಖವನ್ನು ಈಗ ಕುಖ್ಯಾತ ಸರಣಿ ಹಂತಕ ಮತ್ತು ಲೈಂಗಿಕ ಅಪರಾಧಿ ಜೆಫ್ರಿ ಡೇಹ್ಮರ್ ಹಾಗೂ ಹಲವು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ವಿಕೃತವಾಗಿ ಕೊಂದ ಹಂತಕಟೆಡ್ ಬಂಡಿಗೆ ಹೋಲಿಸಲಾಗುತ್ತಿದೆ.

ಅಪರಾಧ ಕುರಿತ ಸರಣಿ ಟಿ.ವಿ ಕಾರ್ಯಕ್ರಮಗಳ ವೀಕ್ಷಕನಾಗಿದ್ದ ಆರೋಪಿ ಅಫ್ತಾಬ್‌ ಅಮೀನ್‌, ಮದುವೆ ವಿಚಾರದಲ್ಲಿ ನಡೆದ ಜಗಳದಿಂದ ತನ್ನ ಸಂಗಾತಿ ಶ್ರದ್ಧಾ ವಾಲಕರ್‌ ಅನ್ನು ಬರ್ಬರವಾಗಿ ಕೊಲ್ಲಲು ಅಮೆರಿಕದ ಜನಪ್ರಿಯ ‘ಆರ್‌ಡೆಕ್ಸ್‌ಟರ್‌’ ಅಪರಾಧ ಕುರಿತಟಿ.ವಿ ಸರಣಿ ಕಾರ್ಯಕ್ರಮ ಪ್ರೇರಣೆ ನೀಡಿದೆ. ಜತೆಗಾತಿಯ ಶವವನ್ನು 35 ತುಂಡುಗಳಾಗಿ ಕತ್ತರಿಸುವ ಆಲೋಚನೆ ಹೊಳೆಯಲೂ ಅದೇ ಕಾರ್ಯಕ್ರಮ ಸ್ಫೂರ್ತಿ ಎಂದು ವಿಚಾರಣೆಯಲ್ಲಿ ಕೊಲೆಗಾರ ಬಾಯಿ ಬಿಟ್ಟಿದ್ದಾನೆ.

ಅಫ್ತಾಬ್‌ನ ಕೊಲೆಗಡುಕ ಮುಖ ಅನಾವರಣ: ಮುಂಬೈನಲ್ಲಿ ಹುಟ್ಟಿ ಬೆಳೆದ ಅಫ್ತಾಬ್‌ ತಮ್ಮ ಅಹಾದ್, ತಂದೆ ಅಮೀನ್ ಮತ್ತು ತಾಯಿ ಮುನೀರಾ ಬೆನ್ ಅವರೊಂದಿಗೆ ವಸೈ ಉಪನಗರದಲ್ಲಿರುವ ಯೂನಿಕ್‌ ಪಾರ್ಕ್ ಹೌಸಿಂಗ್ ಸೊಸೈಟಿಯಲ್ಲಿ ವಾಸಿಸುತ್ತಿದ್ದ. ಅಣ್ಣ–ತಮ್ಮ ಆಗಾಗ ಜಗಳ ಆಡುತ್ತಿದ್ದರು. ಆದರೆ, ಆತನ ಇಂಥ ಕ್ರೂರ ಮುಖ ಅನಾವರಣವಾಗಿರಲಿಲ್ಲ ಎಂದು ನೆನಪಿಸಿಕೊಳ್ಳುತ್ತಾರೆ ನೆರೆಹೊರೆಯ ನಿವಾಸಿಗಳು.

ಮುಂಬೈನ ಎಲ್‌.ಎಸ್‌. ರಹೇಜಾ ಕಾಲೇಜಿನಲ್ಲಿ ಪದವಿ ಪಡೆದ ನಂತರ ಅಫ್ತಾಬ್‌, ಶ್ರದ್ಧಾ ವಾಲಕರ್‌ ಅವರನ್ನು ಆನ್‌ಲೈನ್‌ ಡೇಟಿಂಗ್‌ ಆ್ಯಪ್‌ ಮೂಲಕ ಭೇಟಿಯಾಗಿದ್ದ. ನಂತರ ಇಬ್ಬರೂ ಮುಂಬೈನ ಒಂದೇ ಕಾಲ್‌ಸೆಂಟರ್‌ನಲ್ಲಿ ಉದ್ಯೋಗ ಮಾಡುವಾಗ ಪ್ರೀತಿಸಲಾರಂಭಿಸಿದ್ದರು. ಇಬ್ಬರೂ ಬೇರೆ ಬೇರೆ ಧರ್ಮದವರಾದ ಕಾರಣ ಕುಟುಂಬದವರ ವಿರೋಧದಿಂದಾಗಿ ಈ ವರ್ಷಾರಂಭದಲ್ಲಿ ದೆಹಲಿಯ ಮಹರೌಲಿಗೆ ವಾಸ್ತವ್ಯ ಬದಲಿಸಿದ್ದರು. ಅಫ್ತಾಬ್‌ಇನ್‌ಸ್ಟಾಗ್ರಾಮ್‌ನಲ್ಲಿಹೊಂದಿರುವ ‘ಹಂಗ್ರಿಚೋಕ್ರೊ(HungryChokro)’ ಪುಟಕ್ಕೆ ಸುಮಾರು 29 ಸಾವಿರ ಮಂದಿ ಫಾಲೊವರ್‌ಗಳು ಇದ್ದಾರೆ.

ಎರಡು ದಿನಗಳಲ್ಲಿಶ್ರದ್ಧಾ ಶವ35 ತುಂಡು

ಹೋಟೆಲ್ ನಿರ್ವಹಣೆ ಕೋರ್ಸ್‌ ಅಧ್ಯಯನ ಮಾಡಿದ್ದ ಅಫ್ತಾಬ್‌, ಮಾಂಸ ಕತ್ತರಿಸುವ ಬಗ್ಗೆಯೂ ಎರಡು ವಾರಗಳ ತರಬೇತಿ ಪಡೆದಿದ್ದ. ಇದರಿಂದತೀಕ್ಷ್ಣ ಹರಿತ ಚಾಕುಗಳನ್ನು ಬಳಸುವುದು ಆತನಿಗೆ ಗೊತ್ತಿತ್ತು. ಆ ಜ್ಞಾನವನ್ನು ಆತ ಶ್ರದ್ಧಾ ದೇಹವನ್ನು 35 ತುಂಡುಗಳಾಗಿ ಕತ್ತರಿಸಲು ಬಳಸಿದ್ದಾನೆ. ಆಕೆಯ ದೇಹವನ್ನು ಎರಡು ದಿನಗಳ ಕಾಲ ಕತ್ತರಿಸಿದ್ದಾನೆ. ಕತ್ತರಿಸಿದ ತುಂಡುಗಳನ್ನು ಪ್ರಿಜ್‌ನಲ್ಲಿರಿಸಿ, ಅವುಗಳನ್ನುಪಾಲಿಥೀನ್ ಚೀಲಗಳಲ್ಲಿ ಪ್ಯಾಕ್ ಮಾಡಿಕೊಂಡು 20 ದಿನಗಳ ಕಾಲ ಪ್ರತಿ ರಾತ್ರಿ 2 ಗಂಟೆ ಸುಮಾರಿಗೆ ಹತ್ತಿರದ ಅರಣ್ಯ ಪ್ರದೇಶಕ್ಕೆ ಹೋಗಿ ಒಂದೊಂದಾಗಿ ಬಿಸಾಡಿ ಬರುತ್ತಿದ್ದುದಾಗಿ ಆರೋಪಿ ಪೊಲೀಸ್‌ ತನಿಖೆಯಲ್ಲಿ ಬಾಯಿಬಿಟ್ಟಿದ್ದಾನೆ.

ಕೊಲೆ ರಹಸ್ಯ ಭೇದಿಸಲು ನೆರವಾದ ಶ್ರದ್ಧಾ ಸಕ್ರಿಯ ಖಾತೆ

ಆರೋಪಿಯನ್ನು ‘ಚತುರ ಬುದ್ಧಿವಂತ’ ಎಂದು ಬಣ್ಣಿಸಿರುವ ಪೊಲೀಸರು, ಆತನಿಗೆಹಿಂದಿ ಗೊತ್ತಿದ್ದರೂ ವಿಚಾರಣೆ ವೇಳೆ ಇಂಗ್ಲಿಷಿನಲ್ಲಿ ಸರಾಗವಾಗಿ ಉತ್ತರಿಸುತ್ತಿದ್ದ.ಅದೃಷ್ಟದಿಂದ ಆತ ಈ ಪ್ರಕರಣದಿಂದ ಪಾರಾಗಬಹುದೆಂದು ಭಾವಿಸಿದ್ದ, ಆದರೆ ಅಷ್ಟರಲ್ಲಿ ಪೊಲೀಸರು ಆತನ ಮನೆ ಬಾಗಿಲು ತಟ್ಟಿದರು. ಶ್ರದ್ಧಾಅವರ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಆರೋಪಿ ಸಕ್ರಿಯವಾಗಿದ್ದುದೇ ಶ್ರದ್ಧಾ ನಿಗೂಢ ನಾಪತ್ತೆ– ಭೀಕರ ಹತ್ಯೆಯ ರಹಸ್ಯ ಭೇದಿಸಲು ನೆರವಾಯಿತು ಎನ್ನುತ್ತಾರೆ ತನಿಖಾಧಿಕಾರಿಗಳು.

ಈ ಪ್ರಕರಣದ ತನಿಖೆಯಲ್ಲಿ ಮೈಜುಮ್ಮೆನಿಸುವಭಯಾನಕ ಸಂಗತಿಗಳುಒಂದೊಂದೇ ಹೊರಬೀಳುತ್ತಿವೆ. ಇನ್ನೂ ಪತ್ತೆಯಾಗದಿರುವ ಶ್ರದ್ಧಾ ಶವದ ಭಾಗಗಳಿಗೆ ಪೊಲೀಸರ ಶೋಧ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT