ಶನಿವಾರ, ಜನವರಿ 28, 2023
15 °C
ಸಂಶೋಧಕರ ತಂಡದ ವರದಿಯಲ್ಲಿ ಬಹಿರಂಗ

ಭಾರತ ಸೇರಿ ಹಲವು ದೇಶಗಳಲ್ಲಿ ವೀರ್ಯಾಣು ಸಂಖ್ಯೆ ಗಣನೀಯ ಇಳಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತ ಸೇರಿದಂತೆ ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಹಲವು ವರ್ಷಗಳಿಂದ ವೀರ್ಯಾಣುಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿರುವುದನ್ನು ಅಂತರರಾಷ್ಟ್ರೀಯ ಸಂಶೋಧಕರ ತಂಡವೊಂದು ಪತ್ತೆ ಹಚ್ಚಿದೆ. 

‘ವೀರ್ಯಾಣುಗಳ ಸಂಖ್ಯೆ ಮಾನವನ ಫಲವತ್ತತೆಯ ಸೂಚಕವಷ್ಟೇ ಅಲ್ಲ, ಅವು ಪುರುಷರ ಆರೋಗ್ಯದ ಸಂಕೇತ ಕೂಡ. ವೀರ್ಯಾಣುಗಳ ಸಂಖ್ಯೆಯಲ್ಲಿನ ಇಳಿಕೆಯು ದೀರ್ಘಕಾಲದ ಕಾಯಿಲೆ, ವೃಷಣ ಕ್ಯಾನ್ಸರ್‌ ಮತ್ತು ಜೀವಿತಾವಧಿ ಕಡಿಮೆಯಾಗುವುದಕ್ಕೆ ದಾರಿ ಮಾಡಿಕೊಡುತ್ತದೆ’ ಎಂದು ಸಂಶೋಧಕರು ಹೇಳಿದ್ದಾರೆ. 

53 ರಾಷ್ಟ್ರಗಳಲ್ಲಿ ಲಭ್ಯವಿದ್ದ ದತ್ತಾಂಶದ ಆಧಾರದಲ್ಲಿ ಸಿದ್ಧಪಡಿಸಲಾಗಿರುವ ಈ ಸಂಶೋಧನಾ ವರದಿಯು ‘ಹ್ಯೂಮನ್‌ ರೀಪ್ರೊಡಕ್ಷನ್‌ ಅಪ್‌ಡೇಟ್‌’ ನಿಯತಕಾಲಿಕೆಯಲ್ಲಿ ಮಂಗಳವಾರ ಪ್ರಕಟಗೊಂಡಿದೆ. ದಕ್ಷಿಣ ಅಮೆರಿಕ, ಏಷ್ಯಾ ಮತ್ತು ಆಫ್ರಿಕಾದ ರಾಷ್ಟ್ರಗಳಲ್ಲಿನ ಪುರುಷರ ವೀರ್ಯಾಣು ಸಂಖ್ಯೆಯ ಪ್ರವೃತ್ತಿಗಳನ್ನು ಕೇಂದ್ರೀಕರಿಸಿ ಸಂಶೋಧನೆ ನಡೆಸಲಾಗಿದೆ. ಈ ಭಾಗದಲ್ಲಿನ ಪುರುಷರಲ್ಲಿನ ಒಟ್ಟಾರೆ ವೀರ್ಯಾಣು ಸಂಖ್ಯೆ ಹಾಗೂ ವೀರ್ಯಾಣು ಸಾಂಧ್ರತೆಯು ಇದೇ ಮೊದಲ ಬಾರಿಗೆ ಕುಸಿತ ಕಂಡಿರುವುದು ಸಂಶೋಧನೆಯಿಂದ ಬೆಳಕಿಗೆ ಬಂದಿದೆ.

‘46 ವರ್ಷಗಳಲ್ಲಿ ಜಗತ್ತಿನಾದ್ಯಂತ ವೀರ್ಯಾಣು ಸಂಖ್ಯೆಯಲ್ಲಿ ಶೇ 50ರಷ್ಟು ಕುಸಿತ ಕಂಡಿರುವುದನ್ನು ನಾವು ಕಾಣಬಹುದಾಗಿದೆ.  ಇತ್ತೀಚಿನ ವರ್ಷಗಳಲ್ಲಿ ಈ ಪ್ರಕ್ರಿಯೆ ಮತ್ತಷ್ಟು ವೇಗ ಪಡೆದುಕೊಂಡಿದೆ’ ಎಂದು ಸಂಶೋಧನಾ ತಂಡದ ಸದಸ್ಯ ಪ್ರೊ.ಹಗಾಯ್‌ ಲಿವೈನ್ ಹೇಳಿದ್ದಾರೆ.

‘ಜೀವನಶೈಲಿಯ ಆಯ್ಕೆ ಹಾಗೂ ಪರಿಸರದಲ್ಲಿನ ರಾಸಾಯನಿಕಗಳು ಭ್ರೂಣದ ಬೆಳವಣಿಗೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿವೆ’ ಎಂದೂ ಲಿವೈನ್‌ ತಿಳಿಸಿದ್ದಾರೆ.

ವೀರ್ಯಾಣು ಸಂಖ್ಯೆ ಇಳಿಕೆಗೆ ನಿಖರ ಕಾರಣ ಏನೆಂಬುದನ್ನು ಸಂಶೋಧಕರು ಪತ್ತೆ ಮಾಡಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು