ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪುಕೋಟೆ ಹಿಂಸಾಚಾರ: ಡಚ್ ಪ್ರಜೆ, ಸಿಖ್ ಯುವಕ ಮನಿಂದರ್‌ಜಿತ್ ಸಿಂಗ್ ಬಂಧನ

Last Updated 10 ಮಾರ್ಚ್ 2021, 7:25 IST
ಅಕ್ಷರ ಗಾತ್ರ

ನವದೆಹಲಿ: ರೈತರ ಟ್ರ್ಯಾಕ್ಟರ್ ರ್‍ಯಾಲಿ ವೇಳೆ ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಡಚ್ ಪ್ರಜೆ, ಬ್ರಿಟನ್ ನಿವಾಸಿಯಾಗಿರುವ 23 ವರ್ಷದ ಸಿಖ್ ಯುವಕ ಮನಿಂದರ್‌ಜಿತ್ ಸಿಂಗ್‌ನನ್ನು ಬಂಧಿಸಲಾಗಿದೆ.

ಈತ ಫೋರ್ಜರಿ ಮಾಡಿದ ದಾಖಲೆಗಳೊಂದಿಗೆ ದೇಶದಿಂದ ಪರಾರಿಯಾಗಲು ಯತ್ನಿಸಿದ್ದ. ಆರೋಪಿಗಳ ಸೆರೆಗಾಗಿ ದೆಹಲಿ ಅಪರಾಧ ದಳದ ಪೊಲೀಸರು ಪಂಜಾಬ್‌ನ ಹಲವು ಕಡೆಗಳಲ್ಲಿ ದಾಳಿ ನಡೆಸಿದ್ದರು ಎಂದು ಡಿಸಿಪಿ ಮೋನಿಕಾ ಭಾರದ್ವಾಜ್ ಬುಧವಾರ ತಿಳಿಸಿದ್ದಾರೆ.

ಗಲಭೆ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಮತ್ತೊಬ್ಬ ಯುವಕ, ಖೇಮ್‌ಪ್ರೀತ್‌ ಸಿಂಗ್ ಎಂಬಾತನನ್ನೂ ಮಂಗಳವಾರ ಬಂಧಿಸಲಾಗಿತ್ತು.

ಜನವರಿ 26ರಂದು ಪ್ರತಿಭಟನಾಕಾರರು ಕೆಂಪುಕೋಟೆ ಬಳಿ ಈಟಿಗಳನ್ನು ಹೊತ್ತುಕೊಂಡು ಹೋಗುತ್ತಿದ್ದಾಗ ಮನಿಂದರ್‌ಜಿತ್ ಸಿಂಗ್ ಕೂಡ ಕಾಣಿಸಿಕೊಂಡಿದ್ದಾನೆ. ಎಲೆಕ್ಟ್ರಾನಿಕ್‌ ಪುರಾವೆಯಿಂದ ಈ ವಿಚಾರ ತಿಳಿದುಬಂದಿದೆ ಎಂದು ಭಾರದ್ವಾಜ್ ಹೇಳಿದ್ದಾರೆ.

ಆರೋಪಿಗಳು ಕೆಂಪುಕೋಟೆ ತಲುಪುವ ಮಾರ್ಗವನ್ನು ತಿಳಿಯಲು ಎಲೆಕ್ಟ್ರಾನಿಕ್‌ ನಕಾಶೆ ತಯಾರಿಸಿದ್ದರು ಎಂಬುದು ತನಿಖೆ ವೇಳೆ ತಿಳಿದುಬಂದಿದೆ. ಸಿಂಘು ಗಡಿಯಿಂದ ಸಂಜಯ್ ಗಾಂಧಿ ಟ್ರಾನ್ಸ್‌ಪೋರ್ಟ್‌ ನಗರ, ಬುರಾರಿ, ಮಂಜು ಕಾ ತಿಲ ಮಾರ್ಗವಾಗಿ ಕೆಂಪುಕೋಟೆ ತಲುಪಿದ್ದರು ಎಂದೂ ಅವರು ತಿಳಿಸಿದ್ದಾರೆ.

ಆರೋಪಿಗಳು ಹಲವು ಬಾರಿ ಪ್ರತಿಭಟನಾ ಸ್ಥಳವಾದ ಸಿಂಘು ಗಡಿಗೆ ಭೇಟಿ ನೀಡಿದ್ದ ವಿಚಾರವೂ ಎಲೆಕ್ಟ್ರಾನಿಕ್‌ ಪುರಾವೆಗಳಿಂದ ತಿಳಿದುಬಂದಿದೆ ಎಂದು ಭಾರದ್ವಾಜ್ ಹೇಳಿದ್ದಾರೆ.

ಆರೋಪಿಯು ತಾನು ಜರ್ಮನ್‌ಜೀತ್ ಸಿಂಗ್ ಎಂದು ಹೇಳಿಕೊಂಡು ಫೋರ್ಜರಿ ದಾಖಲೆಗಳೊಂದಿಗೆ ದೇಶಬಿಟ್ಟು ಪರಾರಿಯಾಗಲು ಯತ್ನಿಸಿದ್ದ. ಆತನ ವಿರುದ್ಧ ಲುಕ್‌ಔಟ್ ಕಾರ್ನರ್ ನೋಟಿಸ್ ಸಹ ಹೊರಡಿಸಲಾಗಿದೆ. ಮೊದಲು ನೇಪಾಳಕ್ಕೆ ತೆರಳಿ ಅಲ್ಲಿಂದ ಬ್ರಿಟನ್‌ಗೆ ಪ್ರಯಾಣಿಸಲು ಆತ ಯೋಜನೆ ರೂಪಿಸಿದ್ದ ಎಂದು ಅವರು ತಿಳಿಸಿದ್ದಾರೆ.

ಮನಿಂದರ್‌ಜಿತ್ ಭಾರತದಲ್ಲಿ ಜನಿಸಿದ್ದ. ಆದರೆ ಆತನ ತಂದೆ ಡಚ್ ಪ್ರಜೆ. ಹೀಗಾಗಿ ಆತ ಡಚ್ ಪೌರತ್ವ ಹೊಂದಿದ್ದಾನೆ. ಸದ್ಯ ಆತನ ಕುಟುಂಬ ಬ್ರಿಟನ್‌ನ ಬರ್ಮಿಂಗ್‌ಹ್ಯಾಂನಲ್ಲಿ ನೆಲೆಸಿದ್ದು, ಈತ ಅಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾನೆ.

2019ರ ಡಿಸೆಂಬರ್‌ನಲ್ಲಿ ಭಾರತಕ್ಕೆ ಬಂದಿದ್ದ ಮನಿಂದರ್‌ಜಿತ್ ಕೋವಿಡ್–19 ಲಾಕ್‌ಡೌನ್‌ನಿಂದಾಗಿ ವಾಪಸ್ ತೆರಳಲು ಸಾಧ್ಯವಾಗಿರಲಿಲ್ಲ.

ಆರೋಪಿಯನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT