ಗುರುವಾರ , ಜೂನ್ 24, 2021
25 °C
ಕೊರೊನಾ ವೈರಸ್‌ ತಳಿ ಕುರಿತ ಕೇಜ್ರಿವಾಲ್‌ ಹೇಳಿಕೆ: ಸಿಂಗಪುರ ಆಕ್ಷೇಪ

ಕೊರೊನಾ ವೈರಸ್‌ನ ತಳಿ ಕುರಿತ ಕೇಜ್ರಿವಾಲ್ ಹೇಳಿಕೆಗೆ ಸಿಂಗಪುರ ಕಟು ಟೀಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸಿಂಗಪುರದಲ್ಲಿ ಕಂಡುಬಂದಿರುವ ಕೊರೊನಾ ವೈರಸ್‌ನ ತಳಿ ಕುರಿತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ನೀಡಿರುವ ಹೇಳಿಕೆಗೆ ಸಿಂಗಪುರ ಸರ್ಕಾರ ಕಟುವಾದ ಮಾತುಗಳಲ್ಲಿ ಬುಧವಾರ ಆಕ್ಷೇಪ ವ್ಯಕ್ತಪಡಿಸಿದೆ.

ಕೇಜ್ರಿವಾಲ್‌ ಹೇಳಿಕೆಯನ್ನು ಖಂಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸಹ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಇನ್ನೊಂದೆಡೆ, ಸಿಂಗಪುರ ಸರ್ಕಾರದಿಂದ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ, ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರು, ‘ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಹೇಳಿಕೆ ಭಾರತದ ನಿಲುವನ್ನು ಪ್ರತಿನಿಧಿಸುವುದಿಲ್ಲ’ ಎಂದು ಹೇಳಿದ್ದಾರೆ.

‘ಕೋವಿಡ್‌–19 ಪಿಡುಗು ವಿರುದ್ಧ ಭಾರತ ನಡೆಸುತ್ತಿರುವ ಹೋರಾಟಕ್ಕೆ ಸಿಂಗಪುರ ಬೆಂಬಲ ನೀಡುತ್ತಿದೆ. ಸಂಕಷ್ಟದ ಸಮಯದಲ್ಲಿ ಭಾರತಕ್ಕೆ ಅಗತ್ಯ ವೈದ್ಯಕೀಯ ಪರಿಕರಗಳು ಹಾಗೂ ಆಮ್ಲಜನಕ ಸಿಲಿಂಡರ್‌ಗಳು, ಕಾನ್ಸಂಟ್ರೇಟರ್‌ಗಳನ್ನು ಕಳಿಸುವ ಮೂಲಕ ಸಿಂಗಪುರ ಭಾರತದ ಹೋರಾಟಕ್ಕೆ ಕೈಜೋಡಿಸಿದೆ’ ಎಂದು ಜೈಶಂಕರ್‌ ತಮ್ಮ ಟ್ವೀಟ್‌ನಲ್ಲಿ ಪ್ರಶಂಸಿಸಿದ್ದಾರೆ.

‘ಸಿಂಗಪುರದಲ್ಲಿ ಕಂಡು ಬಂದಿರುವ ಕೊರೊನಾ ವೈರಸ್‌ನ ತಳಿ ಮಕ್ಕಳಿಗೆ ಬಹಳ ಅಪಾಯಕಾರಿಯಾಗಿದೆ. ಈ ತಳಿ ಭಾರತದಲ್ಲಿ ಕೋವಿಡ್‌ನ ಮೂರನೇ ಅಲೆಗೆ ಕಾರಣವಾಗಬಹುದು’ ಎಂದು ಕೇಜ್ರಿವಾಲ್‌ ಮಂಗಳವಾರ ಹೇಳಿದ್ದರು.

ಈ ಹೇಳಿಕೆಯನ್ನು ವಿರೋಧಿಸಿರುವ ಸಿಂಗಪುರ ಸರ್ಕಾರ, ಭಾರತದ ಹೈಕಮಿಷನರ್‌ ಪಿ.ಕುಮಾರನ್‌ ಅವರ ಬಳಿ ತನ್ನ ಆಕ್ಷೇಪವನ್ನು ದಾಖಲಿಸಿತು.

‘ಕೊರೊನಾ ವೈರಸ್‌ನ ಸಿಂಗಪುರ ತಳಿ ಎಂಬುದು ಇಲ್ಲ. ಈಗ ವರದಿಯಾಗುತ್ತಿರುವ ಕೋವಿಡ್‌–19 ಪ್ರಕರಣಗಳಿಗೆ ವೈರಸ್‌ನ ಬಿ.1.617 ತಳಿಯೇ ಕಾರಣವಾಗಿದೆ. ಈ ತಳಿ ಭಾರತದಲ್ಲಿಯೇ ಮೊದಲು ಪತ್ತೆಯಾಗಿದೆ’ ಎಂದು ಸಿಂಗಪುರ ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿರುವ ಪ್ರಕಟಣೆ ತಿಳಿಸಿದೆ.

‘ಪ್ರಮುಖ ರಾಜಕೀಯ ಮುಖಂಡರೊಬ್ಬರು ವಾಸ್ತವಾಂಶ ಅರಿಯದೇ ಇಂಥ ಹೇಳಿಕೆ ನೀಡಿರುವುದು ನಿರಾಶೆ ತರುವ ಸಂಗತಿ’ ಎಂದೂ ಪ್ರಕಟಣೆಯಲ್ಲಿ ಹೇಳಲಾಗಿದೆ.

ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್‌ ಬಾಗ್ಚಿ, ‘ಕೋವಿಡ್‌–19ಗೆ ಕಾರಣವಾಗುವ ವೈರಸ್‌ನ ತಳಿಗಳ ಕುರಿತು ಅಭಿಪ್ರಾಯ ತಿಳಿಸಲು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಯಾವುದೇ ಅರ್ಹತೆ ಹೊಂದಿಲ್ಲ ಎಂಬುದಾಗಿ ಭಾರತದ ಹೈಕಮಿಷನರ್‌ ಅವರು ಸಿಂಗಪುರ ಸರ್ಕಾರಕ್ಕೆ ತಿಳಿಸಿದ್ದಾರೆ’ ಎಂದು ಹೇಳಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಬಾಗ್ಚಿ ಅವರು, ‘ನಾಗರಿಕ ವಿಮಾನಯಾನಕ್ಕೆ ಸಂಬಂಧಿಸಿದ ನೀತಿಗಳ ಕುರಿತು ಹೇಳಿಕೆ ನೀಡಲು ಸಹ ಕೇಜ್ರಿವಾಲ್‌ ಅರ್ಹರಲ್ಲ’ ಎಂದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು