ಬುಧವಾರ, ನವೆಂಬರ್ 25, 2020
22 °C

ಉತ್ತರ ಪ್ರದೇಶ: ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ಶ್ವಾಸಕೋಶ ಬಗೆದು ಕೊಲೆ

ಪಿಟಿಐ Updated:

ಅಕ್ಷರ ಗಾತ್ರ : | |

Rape and murder

ಕಾನ್ಪುರ: ಉತ್ತರಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿ ಆರು ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಶ್ವಾಸಕೋಶ ಬಗೆದು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.

ಅರಣ್ಯ ಪ್ರದೇಶದಲ್ಲಿ ಬಾಲಕಿಯ ಮೃತದೇಹ ಭಾನುವಾರ ಪತ್ತೆಯಾಗಿತ್ತು. ಮೃತದೇಹದಿಂದ ಶ್ವಾಸಕೋಶವನ್ನು ಹೊರಗೆಳೆದು ತೆಗೆಯಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆಯೊಬ್ಬರಿಗೆ ಮಗುವಾಗದೇ ಇರುವುದರಿಂದ ವಾಮಾಚಾರ ಮಾಡುವುದಕ್ಕಾಗಿ ಈ ಕೃತ್ಯ ಎಸಗಲಾಗಿತ್ತು ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: 

ಗೌತಮಪುರ ಪ್ರದೇಶದ ಬಾಲಕಿಯು ದೀಪಾವಳಿಯ ದಿನ ರಾತ್ರಿ ನಾಪತ್ತೆಯಾಗಿದ್ದಳು. ಬಳಿಕ ಆಕೆಯ ಮೃತದೇಹ ಪತ್ತೆಯಾಗಿತ್ತು. ಘಟನೆಗೆ ಸಂಬಂಧಿಸಿ ಅಂಕುಲ್ ಕುಮಾರ್ (20) ಮತ್ತು ಬೀರನ್ (31) ಎಂಬುವವರನ್ನು ಭಾನುವಾರ ಪೊಲೀಸರು ಬಂಧಿಸಿದ್ದರು. ಇವರಿಬ್ಬರೂ ಬಾಲಕಿಯನ್ನು ಹತ್ಯೆ ಮಾಡಿ ಶ್ವಾಸಕೋಶವನ್ನು ಹೊರತೆಗೆದು ಮುಖ್ಯ ಸಂಚುಕೋರ ಪರಶುರಾಮ್ ಕುರಿಲ್‌ಗೆ ವಾಮಾಚಾರ ಮಾಡುವುದಕ್ಕಾಗಿ ನೀಡಿದ್ದರು ಎಂದು ಗೌತಮಪುರ ಗ್ರಾಮೀಣ ವಿಭಾಗದ ಎಎಸ್‌ಪಿ ಬ್ರಿಜೇಶ್ ಶ್ರೀವಾಸ್ತವ ತಿಳಿಸಿದ್ದಾರೆ.

ಪರಶುರಾಮ್‌ನನ್ನು ಸೋಮವಾರ ಬಂಧಿಸಲಾಗಿದ್ದು ಆತನ ಪತ್ನಿಯನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ಆದರೆ ಆಕೆ ಈವರೆಗೂ ಯಾವುದೇ ಹೇಳಿಕೆ ನೀಡಿಲ್ಲ ಎಂದು ಶ್ರೀವಾಸ್ತವ ತಿಳಿಸಿದ್ದಾರೆ.

ಪರಶುರಾಮ್ ಆರಂಭದಲ್ಲಿ ಪೊಲೀಸರನ್ನು ಹಾದಿತಪ್ಪಿಸುವ ಹೇಳಿಕೆ ನೀಡಿದ್ದ. ತೀವ್ರ ವಿಚಾರಣೆ ಬಳಿಕ ತಪ್ಪೊಪ್ಪಿಕೊಂಡಿದ್ದಾನೆ ಎಂದು ಅವರು ತಿಳಿಸಿದ್ದಾರೆ.

1999ರಲ್ಲಿ ಮದುವೆಯಾಗಿತ್ತು. ಈವರೆಗೂ ಮಕ್ಕಳಾಗಿಲ್ಲ ಎಂದು ತಿಳಿಸಿರುವ ಆರೋಪಿ, ಬಾಲಕಿಯನ್ನು ಕೊಲೆ ಮಾಡಿ ಆಕೆಯ ಶ್ವಾಸಕೋಶ ತೆಗೆಯುವಂತೆ ತನ್ನ ಅಳಿಯ ಅಂಕುಲ್ ಮತ್ತು ಆತನ ಸ್ನೇಹಿತ ಬೀರನ್ ಅವರನ್ನು ಒಪ್ಪಿಸಿದ್ದ ಎಂದು ಎಎಸ್‌ಪಿ ತಿಳಿಸಿದ್ದಾರೆ.

ಶನಿವಾರ ರಾತ್ರಿ ಬಾಲಕಿಯು ಪಟಾಕಿ ಖರೀದಿಸಲೆಂದು ತೆರಳುತ್ತಿದ್ದಾಗ ಇಬ್ಬರು ಆರೋಪಿಗಳು ಆಕೆಯನ್ನು ಅಪಹರಿಸಿದ್ದರು. ಆ ವೇಳೆ ಅವರಿಬ್ಬರೂ ಮದ್ಯದ ಅಮಲಿನಲ್ಲಿದ್ದರು. ಬಾಲಕಿಯನ್ನು ಅಪಹರಿಸಿದ ಅವರು ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು