ಗುರುವಾರ , ಆಗಸ್ಟ್ 18, 2022
25 °C

ರೈತರ ಬೇಡಿಕೆಗಾಗಿ ಜ.30ರಿಂದ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಮುಂಬೈ: ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯ ರಾಳೆಗಣಸಿದ್ಧಿಯಲ್ಲಿ ಜನವರಿ 30ರಿಂದ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಹಿರಿಯ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಗುರುವಾರ ಘೋಷಿಸಿದ್ದಾರೆ.

ಅಲ್ಲದೆ ಬೆಂಬಲಿಗರೆಲ್ಲರೂ ತಮ್ಮ ತಮ್ಮ ಸ್ಥಳದಿಂದಲೇ ಪ್ರತಿಭಟನೆ ನಡೆಸುವಂತೆ ಅಣ್ಣಾ ಹಜಾರೆ ಕರೆ ನೀಡಿದ್ದಾರೆ.

ಕೇಂದ್ರ ಸರ್ಕಾರದ ವಿವಾದಿತ ಮೂರು ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ದೆಹಲಿ ಗಡಿ ಪ್ರದೇಶಗಳಲ್ಲಿ ರೈತರು ನವೆಂಬರ್ 26ರಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರದ ಜೊತೆಗೆ ಹಲವು ಸುತ್ತಿನ ಮಾತುಕತೆಯೂ ವಿಫಲಗೊಂಡಿದೆ. ಈ ನಡುವೆ ಗಣರಾಜ್ಯೋತ್ಸವದ ದಿನದಂದು ರಾಷ್ಟ್ರ ರಾಜಧಾನಿಯಲ್ಲಿ ನಡೆಸಿದ ಟ್ರ್ಯಾಕ್ಟರ್ ಪೆರೇಡ್‌ನಲ್ಲಿ ಹಿಂಸಾಚಾರ ನಡೆದಿತ್ತು.

ಇದನ್ನೂ ಓದಿ: 

ಇದಾದ ಎರಡು ದಿನಗಳಲ್ಲೇ ಅಣ್ಣಾ ಹಜಾರೆ ಮಹತ್ವದ ಘೋಷಣೆ ಮಾಡಿರುವುದು ಹೆಚ್ಚಿನ ಗಮನ ಸೆಳೆದಿದೆ. ಕಳೆದ ತಿಂಗಳಿನಲ್ಲಷ್ಟೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದ ಅಣ್ಣಾ ಹಜಾರೆ ರೈತರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಬೇಕೆಂಬ ತಮ್ಮ ಬೇಡಿಕೆಗಳನ್ನು ಜನವರಿ ಒಳಗಾಗಿ ಈಡೇರಿಸದಿದ್ದರೆ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಎಚ್ಚರಿಕೆ ನೀಡಿದ್ದರು.

 

 

 

ಮಹಾತ್ಮ ಗಾಂಧಿ ಪುಣ್ಯತಿಥಿಯಂದೇ ಉಪವಾಸ ಸತ್ಯಾಗ್ರಹ ಪ್ರಾರಂಭ...

 

ಕಳೆದ ನಾಲ್ಕು ವರ್ಷಗಳಿಂದ ರೈತರ ಪ್ರಮುಖ ಬೇಡಿಕೆಗಳನ್ನು ಮುಂದಿರಿಸಿ ಅಂದೋಲನ ನಡೆಸುತ್ತಾ ಬಂದಿದ್ದೇನೆ. ಆದರೆ ರೈತರ ವಿಚಾರದಲ್ಲಿ ಸರ್ಕಾರ ಸರಿಯಾದ ಕ್ರಮ ಕೈಗೊಂಡಿಲ್ಲ. ಈ ಬಾರಿಯೂ ಕಳೆದ ಮೂರು ತಿಂಗಳಲ್ಲಿ ಐದು ಬಾರಿ ಪ್ರಧಾನಿ ಹಾಗೂ ಕೃಷಿ ಸಚಿವರಿಗೆ ಪತ್ರ ಬರೆದಿದ್ದೇನೆ. ಸರ್ಕಾರದ ಪ್ರತಿನಿಧಿ ಬಂದು ಚರ್ಚೆ ನಡೆಸಿದರೂ ಈ ವರೆಗೆ ಪೂರಕವಾದ ನಿರ್ಣಯ ಕೈಗೊಂಡಿಲ್ಲ. ಹಾಗಾಗಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಪುಣ್ಯತಿಥಿಯಂದು ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಅಣ್ಣಾ ಹಜಾರೆ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಎಲ್ಲ ಬೆಂಬಲಿಗರಲ್ಲೂ ಮಾಡುವ ವಿನಂತಿ ಏನೆಂದರೆ ರಾಳೆಗಣಸಿದ್ಧಿಯಲ್ಲಿ ನಾನು ಒಬ್ಬನೇ ಹೋರಾಟ ನಡೆಸಲಿದ್ದೇನೆ. ಎಲ್ಲರೂ ತಮ್ಮ ತಮ್ಮ ಗ್ರಾಮ, ತಾಲೂಕು ಹಾಗೂ ಜಿಲ್ಲಾಧಿಕಾರಿ ಕಚೇರಿಗಳ ಎದುರುಗಡೆ ಶಾಂತಿ ಹಾಗೂ ಅಹಿಂಸಾತ್ಮಕ ರೀತಿಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಬೇಕು. ಈಗ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಕಾಲಘಟ್ಟವಾಗಿದ್ದರಿಂದ ರಾಳೆಗಣಸಿದ್ಧಿಯಲ್ಲಿ ಹೆಚ್ಚು ಜನ ಸೇರುವುದು ಉಚಿತವಲ್ಲ ಎಂದು ಹೇಳಿದರು.

ನವದೆಹಲಿಯಲ್ಲಿ ನಡೆದ ಅಂದೋಲನ ಸಂಬಂಧ ಜನವರಿ 26ರಂದು ನಡೆದ ಘಟನೆ ಕುರಿತು ನಮಗೆಲ್ಲರಿಗೂ ವಿಷಾದವಿದೆ. ನಾನು ಯಾವತ್ತೂ ಅಹಿಂಸಾತ್ಮಕ ಹಾಗೂ ಶಾಂತಿಯುತ ಪ್ರತಿಭಟನೆಯನ್ನು ಬಯಸುತ್ತೇನೆ. ಕಳೆದ 40 ವರ್ಷಗಳಲ್ಲಿ ಅನೇಕ ಬಾರಿ ಸತ್ಯಾಗ್ರಹ ನಡೆಸಿದ್ದೇನೆ. 2011ರಲ್ಲಿ ದಿಲ್ಲಿಯಲ್ಲಿ ನಡೆದ ಲೋಕಪಾಲ್ ಅಂದೋಲನದಲ್ಲಿ ಲಕ್ಷಾಂತರ ಮಂದಿ ಭಾಗವಹಿಸಿದ್ದರು. ಆದರೆ ಒಂದೇ ಒಂದು ಕಲ್ಲು ಕೂಡಾ ಬೀಳಲಿಲ್ಲ. ಇದನ್ನೇ ಗಾಂಧೀಜಿ ನಮಗೆ ಕಲಿಸಿ ಕೊಟ್ಟಿದ್ದಾರೆ. ಯಾವುದೇ ರೀತಿಯ ಅಂದೋಲನದಲ್ಲಿ ಹಿಂಸಾಚಾರ ಮಾಡಬಾರದು. ಇದನ್ನೇ ಎಲ್ಲ ಬೆಂಬಲಿಗರಲ್ಲೂ ವಿನಂತಿ ಮಾಡುತ್ತೇನೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು