ಬೋಗಸ್ ಫಲಾನುಭವಿಗಳ ಪತ್ತೆಗೆ ಕ್ರಮ: ಆರ್.ಅಶೋಕ್

ನವದೆಹಲಿ: ‘ರಾಜ್ಯದಲ್ಲಿ ಎಲ್ಲೂ ವಿಧವಾ ಮತ್ತು ವೃದ್ಧಾಪ್ಯ ವೇತನ ಹಂಚಿಕೆ ಸ್ಥಗಿತಗೊಂಡಿಲ್ಲ. ಬದಲಿಗೆ, ಬೋಗಸ್ ಫಲಾನುಭವಿಗಳನ್ನು ಪತ್ತೆ ಮಾಡಿ ಅರ್ಹರ ಬ್ಯಾಂಕ್ ಖಾತೆಗೇ ನೇರವಾಗಿ ಮಾಸಾಶನ (ಪಿಂಚಣಿ) ಜಮಾ ಮಾಡಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
‘ಸಾಮಾಜಿಕ ಭದ್ರತೆ ಪಿಂಚಣಿ ಯೋಜನೆ ಅಡಿ ವಿಧವಾ ಮತ್ತು ವೃದ್ಧಾಪ್ಯ ವೇತನ ನೀಡುವುದಕ್ಕೇ ರಾಜ್ಯ ಸರ್ಕಾರದ ಬಳಿ ಹಣವಿಲ್ಲ. ಅಂಥದ್ದರಲ್ಲಿ ಜಾತಿಗೊಂದು ಪ್ರಾಧಿಕಾರ ರಚಿಸುತ್ತ, ನಿಗಮ– ಮಂಡಳಿಗಳಿಗೆ ಆತುರದಲ್ಲೇ ನೇಮಕ ಮಾಡಲಾಗತ್ತಿದೆ’ ಎಂಬ ವಿರೋಧ ಪಕ್ಷಗಳ ಆರೋಪದ ಕುರಿತು ಅವರು ಪ್ರತಿಕ್ರಿಯೆ ನೀಡಿದರು.
ವಿಧವೆಯರು ಮತ್ತು ವೃದ್ಧರ ಮಾಸಾಶನದ ವಿತರಣೆಯಲ್ಲಿ ಮಧ್ಯವರ್ತಿಗಳ ಹಾವಳಿಯೂ ಅಧಿಕವಾಗಿದೆ. ಅಂಚೆ ಕಚೇರಿಯವರೂ ಎರಡರಿಂದ ನಾಲ್ಕು ತಿಂಗಳುಗಳ ಕಾಲ ಪಿಂಚಣಿಯನ್ನು ತಡವಾಗಿ ಹಂಚುತ್ತಿರುವುದು ಬೆಳಕಿಗೆ ಬಂದಿದೆ. ಇದನ್ನು ತಪ್ಪಿಸುವುದಕ್ಕೇ ಬೋಗಸ್ ಫಲಾನುಭವಿಗಳ ಪತ್ತೆ ಕಾರ್ಯ ನಡೆದಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಶೇಕಡ 3ರಿಂದ 4ರಷ್ಟು ಬೋಗಸ್ ಫಲಾನುಭವಿಗಳು ಪತ್ತೆಯಾಗಿದ್ದಾರೆ. ಅರ್ಹರಿಗೆ ಪಿಂಚಣಿ ತಲುಪಿಸುವುಲ್ಲಿಯೂ ಅಂಚೆ ಕಚೇರಿ ಸಿಬ್ಬಂದಿ ವಿಳಂಬ ಮಾಡುತ್ತಿರುವುದು ಬೆಳಕಿಗೆ ಬಂದಿದ್ದರಿಂದ ಮುಂದಿನ ಒಂದೂವರೆ ತಿಂಗಳಲ್ಲಿ ಅಂಚೆ ಕಚೇರಿಯ ಸಂಪರ್ಕ ತಪ್ಪಿಸಿ, ಬ್ಯಾಂಕ್ ಖಾತೆಗೇ ಪಿಂಚಣಿ ಜಮಾ ಮಾಡಲುಲಾಗುತ್ತದೆ ಎಂದು ಅವರು ಹೇಳಿದರು.
ಶೇಕಡಾ 98ರಷ್ಟು ಫಲಾನುಭವಿಗಳ ಬ್ಯಾಂಕ್ ಹಾಗೂ ಪಿಂಚಣಿ ಖಾತೆಗಳನ್ನು ಆಧಾರ್ನೊಂದಿಗೆ ಜೋಡಿಸುವ ಕಾರ್ಯ ಮುಗಿದಿದೆ. ಆನ್ಲೈನ್ ಮೂಲಕವೇ ಪಿಂಚಣಿ ತಲುಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.