ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮ, ಸಂಸ್ಕೃತಿ ಮತ್ತು ಭಾಷೆ ಆಧಾರದಲ್ಲಿ ಸಮಾಜದ ವಿಭಜನೆ: ಮನಮೋಹನ್ ಸಿಂಗ್

Last Updated 26 ಮಾರ್ಚ್ 2021, 14:29 IST
ಅಕ್ಷರ ಗಾತ್ರ

ಗುವಾಹಟಿ: ಧರ್ಮ, ಸಂಸ್ಕೃತಿ ಮತ್ತು ಭಾಷೆಯ ಆಧಾರದ ಮೇಲೆ ಸಮಾಜವನ್ನು ವಿಭಜಿಸಲಾಗುತ್ತಿದೆ ಎಂದು ಆರೋಪಿಸಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು, ಸಂವಿಧಾನ ಮತ್ತು ಪ್ರಜಾಪ್ರಭುತ್ವದ ತತ್ತ್ವಗಳನ್ನು ಎತ್ತಿಹಿಡಿಯುವ ಸರ್ಕಾರವನ್ನು ಆಯ್ಕೆ ಮಾಡುವಂತೆ ಜನರಿಗೆ ಮನವಿ ಮಾಡಿದರು.

ಅಸ್ಸಾಂನಲ್ಲಿ ಮಾರ್ಚ್ 27ರಂದು ನಡೆಯಲಿರುವ ಮೊದಲ ಹಂತದ ಮತದಾನಕ್ಕೂ ಒಂದು ದಿನ ಮೊದಲು ವಿಡಿಯೊ ಸಂದೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೇರಲು ಮತ ಹಾಕಿದರೆ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಬರುವುದಿಲ್ಲ ಎಂದು ಅಸ್ಸಾಂನ ಜನರನ್ನು ಕಾಂಗ್ರೆಸ್‌ಗೆ ಮತ ಚಲಾಯಿಸುವಂತೆ ಆಗ್ರಹಿಸಿದರು.

'ಇಂದು, ನಾನು ನಿಮ್ಮಲ್ಲಿ ಒಬ್ಬನಾಗಿ ಮಾತನಾಡುತ್ತಿದ್ದೇನೆ. ಮತ್ತೊಮ್ಮೆ, ವಿಧಾನಸಭಾ ಚುನಾವಣೆಯಲ್ಲಿ ನಿಮ್ಮ ಮತವನ್ನು ಚಲಾಯಿಸುವ ಸಮಯ ಬಂದಿದೆ. ನೀವು ಬುದ್ಧಿವಂತಿಕೆಯಿಂದ ಮತ ಚಲಾಯಿಸಬೇಕು. ನಿಮ್ಮ ಭವಿಷ್ಯ ಮತ್ತು ನಿಮ್ಮ ಮಕ್ಕಳ ಭವಿಷ್ಯವು ನಿಮ್ಮ ಕೈಯಲ್ಲಿದೆ. ಕಾಂಗ್ರೆಸ್ ನೇತೃತ್ವದ 'ಮಹಾಜೋತ್‌' ಮೈತ್ರಿಗೆ ಮತ ಚಲಾಯಿಸುವಂತೆ ನಾನು ನಿಮ್ಮನ್ನು ಒತ್ತಾಯಿಸುತ್ತೇನೆ' ಎಂದರು.

ರಾಜ್ಯದಲ್ಲಿ ಉದ್ವಿಗ್ನತೆ ಮತ್ತು ಭಯದ ವಾತಾವರಣವಿದೆ ಎಂದ ಅವರು, ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ತತ್ತ್ವಗಳನ್ನು ಎತ್ತಿಹಿಡಿಯುವ ಮತ್ತು ಎಲ್ಲರ ಸಮಗ್ರ ಅಭಿವೃದ್ಧಿ ಮಾಡುವ ಸರ್ಕಾರವನ್ನು ಆಯ್ಕೆ ಮಾಡುವಂತೆ ಮಾಜಿ ಪ್ರಧಾನಿ ಜನರನ್ನು ಒತ್ತಾಯಿಸಿದರು.

ಅಸ್ಸಾಂ ಚುನಾವಣೆಗೆ ಸ್ಟಾರ್ ಪ್ರಚಾರಕರಾಗಿರುವ ಮನಮೋಹನ್ ಸಿಂಗ್ ಅವರು, ಆರೋಗ್ಯ ಕಾರಣಗಳು ಮತ್ತು ಕೋವಿಡ್ ನಿರ್ಬಂಧಗಳಿಂದ ಭೌತಿಕವಾಗಿ ಅಲ್ಲಿಗೆ ಹೋಗಲು ಸಾಧ್ಯವಾಗಿಲ್ಲ.

ಅಸ್ಸಾಂನ ಜನರು ಸುದೀರ್ಘ ದಂಗೆ ಮತ್ತು ಅಶಾಂತಿಯ ಮೂಲಕ ಭೀಕರ ಸಂಕಟಗಳನ್ನು ಸಹಿಸಿಕೊಂಡಿದ್ದಾರೆ ಮತ್ತು 2001 ರಿಂದ 2016 ರವರೆಗೆ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ಅವರ ನೇತೃತ್ವದಲ್ಲಿ ಶಾಂತಿ ಮತ್ತು ಅಭಿವೃದ್ಧಿಯತ್ತ ರಾಜ್ಯವು ಹೊಸ ಆರಂಭಕ್ಕೆ ನಾಂದಿ ಹಾಡಿತು. ಆದಾಗ್ಯೂ, ಇದೀಗ ಬಹಳ ಗಂಭೀರ ಹಿನ್ನಡೆ ಎದುರಿಸುತ್ತಿದೆ. ಧರ್ಮ, ಸಂಸ್ಕೃತಿ ಮತ್ತು ಭಾಷೆಯ ಆಧಾರದ ಮೇಲೆ ಸಮಾಜವನ್ನು ವಿಭಜಿಸಲಾಗುತ್ತಿದೆ. ಸಾಮಾನ್ಯ ಜನರ ಮೂಲಭೂತ ಹಕ್ಕುಗಳನ್ನು ನಿರಾಕರಿಸಲಾಗುತ್ತಿದೆ. ಉದ್ವೇಗ ಮತ್ತು ಭಯದ ವಾತಾವರಣ ನಿರ್ಮಾಣವಾಗಿದೆ' ಎಂದು ಹೇಳಿದರು.

'ನೋಟು ಅಮಾನ್ಯೀಕರಣ ಮತ್ತು ಕೆಟ್ಟದಾಗಿ ಜಾರಿಗೆ ತಂದ ಜಿಎಸ್‌ಟಿ' ಆರ್ಥಿಕತೆಯನ್ನು ದುರ್ಬಲಗೊಳಿಸಿದೆ ಮತ್ತು ಲಕ್ಷಾಂತರ ಜನರು ತಮ್ಮ ಜೀವನೋಪಾಯವನ್ನು ಕಳೆದುಕೊಂಡಿದ್ದಾರೆ. ಯೋಗ್ಯ ಉದ್ಯೋಗಕ್ಕಾಗಿ ಯುವಕರು ಪರದಾಡುತ್ತಿದ್ದಾರೆ. ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆ ಏರಿಕೆಯು ಸಾಮಾನ್ಯ ಜನರ ಜೀವನಕ್ಕೆ ಹೊರೆಯಾಗಿದೆ. 'ಬಡವರು ಬಡವರಾಗುತ್ತಿದ್ದಾರೆ ಮತ್ತು ಕೋವಿಡ್-19 ಇದನ್ನು ಇನ್ನಷ್ಟು ಹದಗೆಡಿಸುತ್ತಿದೆ' ಎಂದು ತಿಳಿಸಿದರು.

'ಹಾಗಾಗಿ, ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ತತ್ತ್ವಗಳನ್ನು ಎತ್ತಿಹಿಡಿಯುವ ಸರ್ಕಾರಕ್ಕೆ ನೀವು ಮತ ಚಲಾಯಿಸಬೇಕು. ಪ್ರತಿಯೊಬ್ಬ ನಾಗರಿಕನಿಗೂ, ಪ್ರತಿ ಸಮುದಾಯಕ್ಕೂ ಕಾಳಜಿ ವಹಿಸುವ ಸರ್ಕಾರಕ್ಕೆ ನೀವು ಮತ ಚಲಾಯಿಸಬೇಕು. ಅಂತರ್ಗತ ಬೆಳವಣಿಗೆಯನ್ನು ಖಚಿತಪಡಿಸುವ ಸರ್ಕಾರಕ್ಕೆ ನೀವು ಮತ ಚಲಾಯಿಸಬೇಕು. ಅಸ್ಸಾಂ ಅನ್ನು ಮತ್ತೊಮ್ಮೆ ಶಾಂತಿ ಮತ್ತು ಅಭಿವೃದ್ಧಿಯ ಹಾದಿಯಲ್ಲಿ ಸಾಗಿಸುವ ಸರ್ಕಾರಕ್ಕೆ ನೀವು ಮತ ಚಲಾಯಿಸಬೇಕು' ಎಂದು ಮನವಿ ಮಾಡಿದರು.

126 ಸದಸ್ಯ ಬಲದ ಅಸ್ಸಾಂ ವಿಧಾನಸಭೆಗೆ ಮಾರ್ಚ್ 27, ಏಪ್ರಿಲ್ 1 ಮತ್ತು ಏಪ್ರಿಲ್ 6 ರಂದು ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮೇ 2ರಂದು ಫಲಿತಾಂಶ ಲಭ್ಯವಾಗಲಿದೆ.

ಸಿಂಗ್ ಅವರು 1991 ರಿಂದ 2019ರವರೆಗೆ ರಾಜ್ಯಸಭೆಯಲ್ಲಿ 28 ವರ್ಷಗಳ ಕಾಲ ಅಸ್ಸಾಂ ಅನ್ನು ಪ್ರತಿನಿಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT