ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಅಧ್ಯಕ್ಷೆಯಾಗಿ ಸೋನಿಯಾ ಮುಂದುವರಿಕೆ: ನಿಷ್ಠ ಬಣದ ಗಾಂಧಿ ಗುಣಗಾನ

ಹೊಸ ನಾಯಕತ್ವದ ಆಯ್ಕೆಗೆ ಅಧಿವೇಶನ
Last Updated 24 ಆಗಸ್ಟ್ 2020, 20:06 IST
ಅಕ್ಷರ ಗಾತ್ರ

ನವದೆಹಲಿ: ಪಕ್ಷದಲ್ಲಿ ಸೃಷ್ಟಿಯಾಗಿರುವ ನಾಯಕತ್ವ ಬಿಕ್ಕಟ್ಟಿಗೆಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯ(ಸಿಡಬ್ಲ್ಯುಸಿ) ಏಳು ತಾಸುಗಳ ಸುದೀರ್ಘ ಸಭೆಯಲ್ಲಿಯೂ ಪರಿಹಾರ ಸಿಕ್ಕಿಲ್ಲ.ಅಖಿಲ ಭಾರತ ಕಾಂಗ್ರೆಸ್‌ ಸಮಿತಿಯ (ಎಐಸಿಸಿ) ಅಧಿವೇಶನ ನಡೆಯುವವರೆಗೆ ಸೋನಿಯಾ ಗಾಂಧಿ ಅವರೇ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.

ಪೂರ್ಣಾವಧಿ ಮತ್ತು ಸಕ್ರಿಯ ಅಧ್ಯಕ್ಷರು ಬೇಕು ಎಂದು ಒತ್ತಾಯಿಸಿ ಪಕ್ಷದ 23 ಮುಖಂಡರು ಬರೆದ ಪತ್ರದ ಕಾರಣಕ್ಕೆ ಸಿಡಬ್ಲ್ಯುಸಿ ಸಭೆ ಸೋಮವಾರ ನಡೆಯಿತು. ಸಭೆಯ ಆರಂಭದಲ್ಲಿಯೇ, ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಯುವ ಇಂಗಿತವನ್ನು ಸೋನಿಯಾ ವ್ಯಕ್ತಪಡಿಸಿದರು. ಹೊಸ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಆರಂಭಿಸಿ ಎಂದೂ ಅವರು ಹೇಳಿದರು.

ಆದರೆ, ‘ಎಐಸಿಸಿ ಅಧಿವೇಶನ ನಡೆಸಲು ಸಾಧ್ಯವಾಗುವವರೆಗೆ ಅಧ್ಯಕ್ಷೆಯಾಗಿ ಸೋನಿಯಾ ಅವರೇ ಮುಂದುವರಿಯಬೇಕು ಎಂದು ಸಿಡಬ್ಲ್ಯುಸಿ ಸದಸ್ಯರು ಸರ್ವಾನುಮತದಿಂದ ಒತ್ತಾಯಿಸಿದರು’ ಎಂಬ ನಿರ್ಣಯವನ್ನು ವಿಡಿಯೊ ಕಾನ್ಫರೆನ್ಸ್‌ ಮೂಲಕ ನಡೆದ ಸಭೆಯಲ್ಲಿ
ಅಂಗೀಕರಿಸಲಾಗಿದೆ. ಪಕ್ಷ ಸಂಘಟನೆಯಲ್ಲಿ ಅಗತ್ಯ ಬದಲಾವಣೆ ತರುವ ಹೊಣೆಯನ್ನೂ ಸೋನಿಯಾ ಅವರಿಗೆ ನೀಡಲಾಗಿದೆ.

ಎಐಸಿಸಿ ಅಧಿವೇಶನ ನಡೆಸಲು ಸಮಯದ ಗಡುವು ಹಾಕಿಕೊಳ್ಳಲಾಗಿಲ್ಲ. ಆದಷ್ಟು ಬೇಗನೆ ಸಭೆ ನಡೆಯಲಿದೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಹೇಳಿದ್ದಾರೆ.

ಸೋನಿಯಾ ಅಧ್ಯಕ್ಷರಾಗಿ ಮುಂದುವರಿಯಬೇಕು ಎಂದು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಮತ್ತು ಪಕ್ಷದ ಹಿರಿಯ ಮುಖಂಡ ಎ.ಕೆ. ಆ್ಯಂಟನಿ ಅವರು ಒತ್ತಡ ಹೇರಿದರು. 23 ಮುಖಂಡರ ಪತ್ರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಪತ್ರವನ್ನು ‘ಕ್ರೂರ’ ಎಂದು ಬಣ್ಣಿಸಿದ ಆ್ಯಂಟನಿ, ಅಧ್ಯಕ್ಷರಾಗಿ ಮುಂದುವರಿಯುವ ಇಚ್ಛೆ ಸೋನಿಯಾ ಅವರಿಗೆ ಇಲ್ಲದಿದ್ದರೆ ರಾಹುಲ್ ಗಾಂಧಿ‌ ಅಧ್ಯಕ್ಷರಾಗಲಿ ಎಂದರು.

ಸೋನಿಯಾ ಅವರು ಅನಾರೋಗ್ಯದಿಂದ ಇದ್ದಾಗ, ಅವರು ರಾಜಸ್ಥಾನದ ಬಿಕ್ಕಟ್ಟು ಪರಿಹರಿಸಲು ಶ್ರಮಿಸುತ್ತಿದ್ದಾಗ ನಾಯಕತ್ವದ ಕುರಿತು ಪತ್ರ ಬರೆದಿರುವುದು ಸರಿಯಲ್ಲ ಎಂದು ರಾಹುಲ್‌ ಗಾಂಧಿ ಆಕ್ರೋಶ ವ್ಯಕ್ತಪಡಿಸಿದರು. ಪತ್ರಕ್ಕೆ ಸಹಿ ಹಾಕಿದವರ ಪೈಕಿ ಗುಲಾಂ ನಬಿ ಆಜಾದ್‌, ಆನಂದ್‌ ಶರ್ಮಾ ಮತ್ತು ಮುಕುಲ್‌ ವಾಸ್ನಿಕ್‌ ಅವರು ಸಿಡಬ್ಲ್ಯುಸಿ ಸಭೆಯಲ್ಲಿ ಹಾಜರಿದ್ದರು. ಈ ಮೂವರನ್ನೂ ರಾಹುಲ್‌ ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ.

ಪತ್ರವನ್ನು ಬಹಿರಂಗಗೊಳಿಸಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಲು ಬಿಜೆಪಿಗೆ ಅವಕಾಶ ಕೊಟ್ಟಂತಾಗಿದೆ ಎಂದು ರಾಹುಲ್‌ ಹೇಳಿದರು.

‘ಆದದ್ದು ಆಗಿ ಹೋಯಿತು, ಪಕ್ಷವು ಮುಂದಕ್ಕೆ ಸಾಗಲಿ. ಪತ್ರ ಬರೆದ ವಿಚಾರದಲ್ಲಿ ಯಾರ ಬಗ್ಗೆಯೂಯಾವುದೇ ಬೇಸರ ಇಲ್ಲ, ಅವರೆಲ್ಲರೂ ನನ್ನ ಸಹೋದ್ಯೋಗಿಗಳು’ ಎಂದು ಸೋನಿಯಾ ಸಭೆಯ ಕೊನೆಯಲ್ಲಿ ಹೇಳಿದರು.

ಪತ್ರ ಬಂಡಾಯಕ್ಕೆ ತರಾಟೆ

ಪಕ್ಷದ ನಾಯಕತ್ವವನ್ನು ಮುಜುಗರಕ್ಕೆ ಈಡು ಮಾಡುವುದು ಪತ್ರದ ಉದ್ದೇಶ ಆಗಿರಲಿಲ್ಲ. ಸಂಘಟನೆಯಲ್ಲಿ ತುರ್ತಾಗಿ ಗಮನ ಹರಿಸಬೇಕಾದ ವಿಚಾರಗಳ ಕಡೆಗೆ ಬೆಳಕು ಚೆಲ್ಲುವುದಷ್ಟೇ ಉದ್ದೇಶವಾಗಿತ್ತು ಎಂಬುದನ್ನು ಮನದಟ್ಟು ಮಾಡಲು ಆಜಾದ್‌ ಯತ್ನಿಸಿದರು. ಆದರೆ, ಇದನ್ನು ಯಾರೂ ಕಿವಿಗೆ ಹಾಕಿಕೊಳ್ಳಲಿಲ್ಲ.

‘ಆಜಾದ್ ಅವರೇ, ನೀವೊಬ್ಬ ಹಿರಿಯ ನಾಯಕ. ನಿಮ್ಮನ್ನು ಸಮರ್ಥಿಸಿಕೊಳ್ಳಲು ಯತ್ನಿಸಬೇಡಿ’ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕ ಅಧಿರ್‌ ರಂಜನ್‌ ಚೌಧರಿ ಹೇಳಿದರು.

ಪತ್ರ ಬರೆದು, ಅದಕ್ಕೆ ಬೆಂಬಲ ಕ್ರೋಡೀಕರಿಸಲು ಯತ್ನಿಸಿದ ಆನಂದ್‌ ಶರ್ಮಾ ಅವರನ್ನು ಕಾಂಗ್ರೆಸ್‌ ಖಜಾಂಚಿ ಅಹ್ಮದ್‌ ಪಟೇಲ್‌ ತರಾಟೆಗೆ ತೆಗೆದುಕೊಂಡರು. ‘ಪ್ರಮುಖ ವಿಚಾರಗಳಲ್ಲಿ ನಿಮ್ಮ ಅಭಿಪ್ರಾಯಗಳನ್ನು ಕಾಂಗ್ರೆಸ್‌ ಅಧ್ಯಕ್ಷರು ಕೇಳದೇ ಇದ್ದದ್ದು ಯಾವಾಗ’ ಎಂದು ರಾಜ್ಯಸಭಾ ಸದಸ್ಯ ರಾಜೀವ್‌ ಸತಾವ್‌ ಮತ್ತು ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಸುಶ್ಮಿತಾ ದೇವ್‌ ಪ್ರಶ್ನಿಸಿದರು.

ಪತ್ರವು ಬಿಜೆಪಿಗೆ ನೆರವು ನೀಡಿತು ಎಂದು ರಾಹುಲ್ ಹೇಳಿದ್ದು ಕೆಲ ಮುಖಂಡರಲ್ಲಿ ತಲ್ಲಣಕ್ಕೆ ಕಾರಣವಾಯಿತು. ಬಿಜೆಪಿಯ ಒತ್ತಾಸೆಯಿಂದ ಈ ಪತ್ರ ಬರೆದಿರುವುದಾಗಿ ಯಾರಾದರೂ ಸಾಬೀತು ಮಾಡಿದರೆ ರಾಜೀನಾಮೆ ನೀಡುವುದಾಗಿ ಆಜಾದ್‌ ಹೇಳಿದರು. ರಾಹುಲ್ ಅವರ ಹೇಳಿಕೆಯ ವಿರುದ್ಧ ಕಪಿಲ್‌ ಸಿಬಲ್‌ ಅವರೂ ಟ್ವೀಟ್‌ ಮಾಡಿದ್ದರು. ಅವರು ಸಿಡಬ್ಲ್ಯುಸಿ ಸದಸ್ಯರಲ್ಲದ ಕಾರಣ ಸಭೆಯಲ್ಲಿ ಇರಲಿಲ್ಲ. ಆದರೆ, ಈ ಟ್ವೀಟ್‌ ಪ್ರಕಟವಾದ ತಕ್ಷಣವೇ ದೂರವಾಣಿ ಮೂಲಕ ಸಿಬಲ್‌ ಅವರನ್ನು ಸಂಪರ್ಕಿಸಿದ ರಾಹುಲ್‌, ಆ ರೀತಿ ಹೇಳಿಲ್ಲ ಎಂದು ಸ್ಪಷ್ಟನೆ ಕೊಟ್ಟರು ಎನ್ನಲಾಗಿದೆ. ಬಳಿಕ, ಸಿಬಲ್‌ ತಮ್ಮ ಟ್ವೀಟ್‌ ಅನ್ನು ಅಳಿಸಿದರು.

ಸಾಮೂಹಿಕ ನಾಯಕತ್ವಕ್ಕೆ ಬೆಂಬಲ ಇಲ್ಲ

ಸೋನಿಯಾ ನಿರ್ಗಮಿಸುವುದಾದರೆ ರಾಹುಲ್‌ ಅಧ್ಯಕ್ಷರಾಬೇಕು ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌, ಛತ್ತೀಸಗಡ ಮುಖ್ಯಮಂತ್ರಿ ಭೂಪೇಶ್‌ ಬಘೆಲ್‌ ಒತ್ತಾಯಿಸಿದ್ದಾರೆ.

ಸಾಮೂಹಿಕ ನಾಯಕತ್ವಕ್ಕೆ ಪತ್ರದಲ್ಲಿ ಒತ್ತಾಯಿಸಲಾಗಿತ್ತು. ಆದರೆ, ಸಭೆಯಲ್ಲಿ ಈ ವಾದಕ್ಕೆ ಬೆಂಬಲವೇ ದೊರೆಯಲಿಲ್ಲ. ಗಾಂಧಿ ಕುಟುಂಬವೇ ಪಕ್ಷದ ನಾಯಕತ್ವದಲ್ಲಿ ಇರಬೇಕು ಎಂಬುದಕ್ಕೇ ಒಲವು ವ್ಯಕ್ತವಾಯಿತು. ಪಕ್ಷದ ಹೆಚ್ಚಿನ ಸಂಸದರು ಸೋನಿಯಾ ಮತ್ತು ರಾಹುಲ್‌ಗೆ ಬೆಂಬಲ ಸೂಚಿಸಿ ಪತ್ರ ಬರೆದಿದ್ದಾರೆ. ಪಕ್ಷದ ಹಲವು ರಾಜ್ಯ ಘಟಕಗಳೂ ಇಂತಹುದೇ ನಿರ್ಣಯ ಅಂಗೀಕರಿಸಿವೆ ಎಂದು ಪಿಟಿಐ ವರದಿ ಮಾಡಿದೆ.

***

ನಾವು ಒಂದು ದೊಡ್ಡ ಕುಟುಂಬ. ಹಲವು ಸಂದರ್ಭಗಳಲ್ಲಿ ನಮ್ಮಲ್ಲಿ ಭಿನ್ನಾಭಿಪ್ರಾಯ ಸೃಷ್ಟಿಯಾಗಬಹುದು. ಕೊನೆಯಲ್ಲಿ ನಾವೆಲ್ಲರೂ ಒಂದೇ

-ಸೋನಿಯಾ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷೆ

***

ಕಾಂಗ್ರೆಸ್‌ ಪಕ್ಷವು ವಿನಾಶದತ್ತ ಸಾಗುತ್ತಿದೆ. ಪಕ್ಷದಲ್ಲಿ ಯಾರಾದರೂ ಸತ್ಯ ಹೇಳಿದರೆ ಅವರು ಬಿಜೆಪಿಯೊಂದಿಗೆ ಶಾಮೀಲಾಗಿದ್ದಾರೆ ಎಂದು ಆರೋಪಿಸಲಾಗುತ್ತಿದೆ

-ಶಿವರಾಜ್‌ ಸಿಂಗ್‌ ಚೌಹಾಣ್‌, ಮಧ್ಯಪ್ರದೇಶ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT