ಗುರುವಾರ , ಜನವರಿ 28, 2021
28 °C
ಅನುಮತಿ ಪಡೆಯದೇ ವಸತಿ ಕಟ್ಟಡವನ್ನು ಹೋಟೆಲ್‌ ಆಗಿ ಪರಿವರ್ತನೆ

ನಟ ಸೋನು ಸೂದ್‌ ವಿರುದ್ಧ ದೂರು ನೀಡಿದ ಬಿಎಂಸಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಯಾವುದೇ ಅನುಮತಿ ಇಲ್ಲದೆ ಜುಹು ಪ್ರದೇಶದಲ್ಲಿ ವಸತಿ ಕಟ್ಟಡವೊಂದನ್ನು ಹೋಟೆಲ್‌ ಆಗಿ ಪರಿವರ್ತಿಸಿದ್ದಾರೆ ಎಂದು ಆರೋಪಿಸಿ ಬೃಹತ್‌ ಮುಂಬೈ ಮಹಾನಗರ ಪಾಲಿಕೆಯು(ಬಿಎಂಸಿ) ಬಾಲಿವುಡ್‌ ನಟ ಸೋನು ಸೂದ್‌ ವಿರುದ್ಧ ದೂರು ನೀಡಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಗುರುವಾರ ಹೇಳಿದರು.

ಬಿಎಂಸಿಯ ಕೆ–ವೆಸ್ಟ್‌ ವಾರ್ಡ್‌ ವಿಭಾಗವು ಜುಹು ಪೊಲೀಸ್‌ ಠಾಣೆಯಲ್ಲಿ ಸೋಮವಾರ ಈ ದೂರು ನೀಡಿದೆ. ಮಹಾರಾಷ್ಟ್ರ ಪ್ರಾದೇಶಿಕ ಮತ್ತು ನಗರ ಯೋಜನೆ(ಎಂಆರ್‌ಟಿಪಿ) ಕಾಯ್ದೆಯಡಿಯ ನಿಯಮಗಳನ್ನು ಉಲ್ಲಂಘಿಸಿದ ಆರೋಪದಡಿ ಸೂದ್‌ ಅವರ ವಿರುದ್ಧ ದೂರು ನೀಡಲಾಗಿದೆ ಎಂದು ವಾರ್ಡ್‌ನ ಸಹಾಯಕ ಪಾಲಿಕೆ ಆಯುಕ್ತ ವಿಶ್ವಾಸ್‌ ಮೊಠೆ ಖಚಿತಪಡಿಸಿದರು.

‘ಜುಹು ಪ್ರದೇಶದ ಎಬಿ ನಾಯರ್‌ ರಸ್ತೆಯಲ್ಲಿರುವ ಶಕ್ತಿ ಸಾಗರ್‌ ಕಟ್ಟಡದಲ್ಲಿ ಬದಲಾವಣೆ ಮಾಡುವ ಮೊದಲು ಸೋನು ಸೂದ್‌ ಸಂಬಂಧಪಟ್ಟ ಅಧಿಕಾರಿಗಳಿಂದ ಯಾವುದೇ ಅನುಮತಿ ಪಡೆದಿಲ್ಲ. ಒಪ್ಪಿಗೆ ನೀಡಿದ ಯೋಜನೆಯ ಹೊರತಾಗಿ ಹೆಚ್ಚುವರಿ ಬದಲಾವಣೆ ಮಾಡಲಾಗಿದ್ದು, ವಸತಿ ಕಟ್ಟಡವನ್ನು ವಸತಿ ಹೋಟೆಲ್‌ ಆಗಿ ಪರಿವರ್ತಿಸಲಾಗಿದೆ’ ಎಂದು ಎರಡು ಪುಟದ ದೂರಿನಲ್ಲಿ ಬಿಎಂಸಿ ಉಲ್ಲೇಖಿಸಿದೆ. 

‘ಈ ಸಂಬಂಧ ಕಳೆದ ಅಕ್ಟೋಬರ್‌ನಲ್ಲೇ ಸೂದ್‌ ಅವರಿಗೆ ನೋಟಿಸ್‌ ನೀಡಿತ್ತು. ಸೋಮವಾರ ಕಟ್ಟಡ ಇರುವ ಭೂಮಿಯನ್ನು ಮತ್ತೆ ಪರಿಶೀಲನೆ ನಡೆಸಲಾಗಿತ್ತು. ನೋಟಿಸ್‌ ನೀಡಿದ ಬಳಿಕವೂ ಅಕ್ರಮ ನಿರ್ಮಾಣವನ್ನು ನಡೆಸುತ್ತಿರುವುದು ಈ ವೇಳೆ ಪತ್ತೆಯಾಗಿತ್ತು’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. 

ಇಲ್ಲಿಯವರೆಗೂ ಈ ಕುರಿತು ಸೂದ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿಲ್ಲ ಎಂದು ಜುಹು ಪೊಲೀಸ್‌ ಠಾಣೆಯ ಮೂಲಗಳು ತಿಳಿಸಿವೆ. ಮುಂದಿನ ಕ್ರಮ ಕೈಗೊಳ್ಳಲು, ಅಕ್ರಮ ನಿರ್ಮಾಣದ ವಿಸ್ತೃತ ವಿವರವನ್ನು ಬಿಎಂಸಿ ಅಧಿಕಾರಿಗಳು ನೀಡುವುದಕ್ಕೆ ಕಾಯುತ್ತಿದ್ದೇವೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು