ನವದೆಹಲಿ: ರಾಷ್ಟ್ರ ರಾಜಧಾನಿಯಿಂದ ಜೈಪುರವನ್ನು ಸಂಪರ್ಕಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ಶೀಘ್ರದಲ್ಲೇ ಪ್ರಾರಂಭವಾಗಲಿದ್ದು, ಉಭಯ ನಗರಗಳ ನಡುವಿನ ರೈಲ್ವೆ ಪ್ರಯಾಣ ಸಮಯ ಇನ್ನು ಮುಂದೆ ಕೇವಲ 2 ಗಂಟೆ ಎಂದು ಭಾರತೀಯ ರೈಲ್ವೆ ಹೇಳಿದೆ.
ದೆಹಲಿ-ಜೈಪುರ ಮಾರ್ಗದಲ್ಲಿ ಇತರ ರೈಲುಗಳ ಪ್ರಯಾಣವು ಸಾಮಾನ್ಯವಾಗಿ ಸುಮಾರು ನಾಲ್ಕು ಗಂಟೆಗಳನ್ನು ತೆಗೆದುಕೊಳ್ಳುತ್ತದೆ.
ಇಲ್ಲಿಯವರೆಗೆ, ಎಂಟು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ದೇಶದ ವಿವಿಧ ಮಾರ್ಗಗಳಲ್ಲಿ ಓಡುತ್ತಿವೆ. ಸಿಕಂದರಾಬಾದ್-ವಿಶಾಖಪಟ್ಟಣ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು.
ನವದೆಹಲಿ-ವಾರಾಣಸಿ, ನವದೆಹಲಿ-ಶ್ರೀ ಮಾತಾ ವೈಷ್ಣೋದೇವಿ ಕತ್ರಾ, ಗಾಂಧಿನಗರ-ಮುಂಬೈ ಮತ್ತು ಹೌರಾ-ನ್ಯೂ ಜಲ್ಪೈಗುರಿ ಸೇರಿದಂತೆ ಕೆಲ ಮಾರ್ಗಗಳಲ್ಲಿ ವಂದೇ ಭಾರತ್ ಸಂಚರಿಸುತ್ತಿದೆ.
‘ವಂದೇ ಭಾರತ್ ಅತ್ಯುತ್ತಮ ರೈಲು. ಇದು 0-100 ಕಿ.ಮೀ ದೂರವನ್ನು 52 ಸೆಕೆಂಡುಗಳಲ್ಲಿ ಕ್ರಮಿಸಲಿದೆ. ಪ್ರಪಂಚದ ಇತರ ರೈಲುಗಳು ಈ ದೂರ ಕ್ರಮಿಸಲು 54 ರಿಂದ 60 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತವೆ. ದೇಶೀಯ ವಿನ್ಯಾಸದ ರೈಲು ವ್ಯವಸ್ಥೆಯಲ್ಲಿ ವಿಮಾನಗಳಿಗಿಂತ ಉತ್ತಮವಾಗಿವೆ. ಅತ್ಯಂತ ಆರಾಮದಾಯಕ ಪ್ರಯಾಣದ ಅನುಭವ ನೀಡುತ್ತವೆ’ ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಈಗಾಗಲೇ ಸಂಚರಿಸುತ್ತಿರುವ ಏಳು ವಂದೇ ಭಾರತ್ ರೈಲುಗಳು 23 ಲಕ್ಷ ಕಿ.ಮೀ ಸಂಚಿತ ದೂರವನ್ನು ಕ್ರಮಿಸಿವೆ.ಈ ರೈಲುಗಳಲ್ಲಿ ಇದುವರೆಗೆ 40 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸಿದ್ದಾರೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದರು.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು 14 ಎಸಿ ಚೇರ್ ಕಾರ್ ಕೋಚ್‌ಗಳು ಮತ್ತು ಎರಡು ಎಕ್ಸಿಕ್ಯೂಟಿವ್ ಎಸಿ ಚೇರ್ ಕಾರ್ ಕೋಚ್‌ಗಳನ್ನು ಹೊಂದಿದ್ದು, 1,128 ಪ್ರಯಾಣಿಕರ ಸಾಮರ್ಥ್ಯ ಹೊಂದಿದೆ.
ಮುಂದಿನ ಮೂರು ವರ್ಷಗಳಲ್ಲಿ ಭಾರತದಾದ್ಯಂತ ಇಂತಹ 400 ರೈಲುಗಳಿಗೆ ಚಾಲನೆ ನೀಡಲು ಭಾರತೀಯ ರೈಲ್ವೆ ಯೋಜಿಸುತ್ತಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.