ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಮೂರ್ತಿಗಳ ನೇಮಕ: ಊಹಾಪೋಹದ ವರದಿಗಳು ದುರದೃಷ್ಟಕರ- ಎನ್‌.ವಿ. ರಮಣ ಬೇಸರ

Last Updated 18 ಆಗಸ್ಟ್ 2021, 11:26 IST
ಅಕ್ಷರ ಗಾತ್ರ

ನವದೆಹಲಿ: ‘ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಊಹಾಪೋಹದ ವರದಿಗಳು ಪ್ರಕಟವಾಗುತ್ತಿರುವುದು ದುರದೃಷ್ಟಕರ’ ಎಂದು ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ಹೇಳಿದ್ದಾರೆ.

ನಿವೃತ್ತಿಯಾಗುತ್ತಿರುವ ನ್ಯಾಯಮೂರ್ತಿ ನವೀನ್‌ ಸಿನ್ಹಾ ಅವರಿಗೆ ಬುಧವಾರ ಆಯೋಜಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನ್ಯಾಯಮೂರ್ತಿಗಳ ನೇಮಕಾತಿಯು ಪ್ರಕ್ರಿಯೆಯು ಪಾವಿತ್ರ್ಯತೆ ಮತ್ತು ಘನತೆಯನ್ನು ಹೊಂದಿದೆ. ಮಾಧ್ಯಮಗಳು ಈ ವಿಷಯ ಅರಿತುಕೊಳ್ಳಬೇಕು ಮತ್ತು ಪಾವಿತ್ರ್ಯತೆಯನ್ನು ಗುರುತಿಸಬೇಕು’ ಎಂದು ಹೇಳಿದ್ದಾರೆ.

‘ನ್ಯಾಯಮೂರ್ತಿಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಸಭೆಗಳನ್ನು ನಡೆಸಿ ನಿರ್ಧಾರಗಳನ್ನು ಕೈಗೊಳ್ಳಲಾಗುವುದು’ ಎಂದು ಅವರು ತಿಳಿಸಿದ್ದಾರೆ.

‘ಮಾಧ್ಯಮಗಳ ಸ್ವಾತಂತ್ರ್ಯವನ್ನು ನ್ಯಾಯಾಲಯ ಎತ್ತಿ ಹಿಡಿಯುತ್ತದೆ. ಆದರೆ, ನೇಮಕಾತಿ ಪ್ರಕ್ರಿಯೆ ಅಧಿಕೃತಗೊಳಿಸುವ ಮುನ್ನವೇ ನಿರ್ಣಯಗಳನ್ನು ಕೆಲವು ಮಾಧ್ಯಮಗಳಲ್ಲಿ ಪ್ರಕಟಿಸಲಾಗುತ್ತಿದೆ. ಈ ರೀತಿಯ ಬೇಜವಾಬ್ದಾರಿ ವರದಿಗಾರಿಕೆ ಮತ್ತು ಊಹಾಪೋಹಗಳಿಂದ ಪ್ರತಿಭಾವಂತ ವ್ಯಕ್ತಿಗಳ ವೃತ್ತಿಯ ಪ್ರಗತಿಗೆ ಧಕ್ಕೆಯಾಗುತ್ತದೆ. ಇದರಿಂದ ನನಗೆ ಬಹಳ ಬೇಸರವಾಗಿದೆ’ ಎಂದು ಹೇಳಿದ್ದಾರೆ.

‘ಇಂತಹ ಗಂಭೀರ ವಿಷಯದ ಬಗ್ಗೆ ಬಹುತೇಕ ಹಿರಿಯ ಪತ್ರಕರ್ತರು ಮತ್ತು ಮಾಧ್ಯಮಗಳು ಪ್ರಬುದ್ಧತೆ ಮತ್ತು ಜವಾಬ್ದಾರಿಯನ್ನು ಸಹ ಪ್ರದರ್ಶಿಸಿವೆ. ಯಾವುದೇ ರೀತಿಯ ಊಹಾಪೋಹದ ವರದಿಯನ್ನು ಪ್ರಕಟಿಸಿಲ್ಲ. ಈ ರೀತಿಯ ನೀತಿ ಸಂಹಿತೆ ಹೊಂದಿರುವ ಮಾಧ್ಯಮಗಳು ಮತ್ತು ವೃತ್ತಿಪರ ಪತ್ರಕರ್ತರು ಸುಪ್ರೀಂ ಕೋರ್ಟ್‌ ಮತ್ತು ಪ್ರಜಾಪ್ರಭುತ್ವದ ನಿಜವಾದ ಶಕ್ತಿಯಾಗಿದ್ದಾರೆ’ ಎಂದು ಮುಖ್ಯ ನ್ಯಾಯಮೂರ್ತಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಕೊಲಿಜಿಯಂ, ಒಂಬತ್ತು ಹೆಸರುಗಳನ್ನು ಅಂತಿಮಗೊಳಿಸಿದೆ ಎಂದು ಕೆಲವು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗೆ ಎನ್‌.ವಿ. ರಮಣ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT