ಕಾವೇರಿ ದಕ್ಷಿಣ ವನ್ಯಜೀವಿ ಅಭಯಾರಣ್ಯ ಘೋಷಣೆ

ಚೆನ್ನೈ: 68,640 ಹೆಕ್ಟೇರ್ ಪ್ರದೇಶದ ಕಾವೇರಿ ದಕ್ಷಿಣ ವನ್ಯಜೀವಿ ಅಭಯಾರಣ್ಯವನ್ನು ತಮಿಳುನಾಡು ಸರ್ಕಾರವು 17ನೇ ವನ್ಯಜೀವಿ ಅಭಯಾರಣ್ಯವಾಗಿ ಘೋಷಿಸಿ ಅಧಿಸೂಚನೆ ಹೊರಡಿಸಿದೆ ಎಂದು ಅಲ್ಲಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಮಂಗಳವಾರ ಹೇಳಿದ್ದಾರೆ.
ಈ ಅಭಯಾರಣ್ಯವು ಕೃಷ್ಣಗಿರಿ ಮತ್ತು ಧರ್ಮಪುರಿ ಜಿಲ್ಲೆಗಳಲ್ಲಿನ ಮೀಸಲು ಅರಣ್ಯ ಪ್ರದೇಶಗಳನ್ನು ಒಳಗೊಂಡಿದೆ. ಈ ಅರಣ್ಯ ಪ್ರದೇಶವು 35 ಸಸ್ತನಿ ಹಾಗೂ 238 ಪಕ್ಷಿ ಪ್ರಭೇದಗಳ ಆವಾಸಸ್ಥಾನವಾಗಿದೆ. ನಾಲ್ಕು ಕೊಂಬಿನ ಹುಲ್ಲೆ, ಆಮೆ, ಜವುಗು ಮೊಸಳೆಗಳು ಕೂಡ ಈ ಕಾಡಿನಲ್ಲಿವೆ.
‘ಈ ಪ್ರದೇಶವು ವಿಶಿಷ್ಟವಾದ ಪರಿಸರ, ಪ್ರಾಣಿ ಸಂಕುಲವನ್ನು ಹೊಂದಿದೆ ಮತ್ತು ದಕ್ಷಿಣ ಭಾರತದಲ್ಲೇ ಆನೆಗಳ ಪ್ರಮುಖ ಆವಾಸಸ್ಥಾನವಾಗಿದೆ’ ಎಂದು ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.
‘ಸರ್ಕಾರಿ ಸ್ವಾಮ್ಯದ ತಮಿಳುನಾಡು ಗ್ರೀನ್ ಕ್ಲೈಮೇಟ್ ಕಂಪನಿಯ ಜೊತೆ ಸೇರಿ ನಮ್ಮ ರಾಜ್ಯದ ಸಮೃದ್ಧ ಜೀವವೈವಿಧ್ಯವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿರಿಸಿದ್ದೇವೆ’ ಎಂದು ಸ್ಟಾಲಿನ್ ಅವರು ಟ್ವೀಟ್ ಮಾಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.