ಜಮ್ಮು ಕಾಶ್ಮೀರಕ್ಕೆ ಮತ್ತೆ ರಾಜ್ಯ ಸ್ಥಾನಮಾನ: ಸುಳಿವು ನೀಡಿದ ಸಚಿವೆ ನಿರ್ಮಲಾ

ನವದೆಹಲಿ: ಕೇಂದ್ರಾಡಳಿತ ಪ‍್ರದೇಶವಾಗಿರುವ ಜಮ್ಮು ಕಾಶ್ಮೀರಕ್ಕೆ ಮತ್ತೆ ರಾಜ್ಯ ಸ್ಥಾನಮಾನ ನೀಡುವ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸುಳಿವು ನೀಡಿದ್ದಾರೆ.
‘ಸಹಕಾರ ಒಕ್ಕೂಟ ವ್ಯವಸ್ಥೆಯಲ್ಲಿ ಆತ್ಮ ನಿರ್ಭರ ಭಾರತವನ್ನಾಗಿಸಲು ಕೇಂದ್ರ ಹಾಗೂ ರಾಜ್ಯಗಳ ಸಂಬಂಧ‘ ಎನ್ನುವ ಸಮಾವೇಶದಲ್ಲಿ ಮಾತನಾಡಿದ ಅವರು ಈ ಬಗ್ಗೆ ಸುಳಿವು ನೀಡಿದ್ದಾರೆ.
‘ಹಣಕಾಸು ಆಯೋಗದ ವರದಿಯನ್ನು ಪ್ರಧಾನಿ ನರೇಂದ್ರ ಮೋದಿಯವರು ಒಪ್ಪಿದ್ದಾರೆ. ಹೀಗಾಗಿ ಸಂಗ್ರಹವಾದ ತೆರಿಗೆಯಿಂದ ರಾಜ್ಯಗಳಿಗೆ ನೀಡುತ್ತಿದ್ದ ಶೇ 42 ರಷ್ಟು ಪಾಲನ್ನು ಶೇ 41ಕ್ಕೆ ಇಳಿಕೆ ಮಾಡಲಾಗಿದೆ. ಯಾಕೆಂದರೆ ಜಮ್ಮು ಕಾಶ್ಮೀರ ಈಗ ರಾಜ್ಯವಾಗಿ ಉಳಿದಿಲ್ಲ. ಅದು ಶೀಘ್ರವೇ ರಾಜ್ಯವಾಗಲಿದೆ. ಅದಕ್ಕೆ ಸಮಯ ಹಿಡಿಯಬಹುದು’ ಎಂದು ಅವರು ಹೇಳಿದ್ದಾರೆ.
14ನೇ ಹಣಕಾಸು ಆಯೋಗದ ವರದಿಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಹಂಚಿಕೆಯಾಗುವ ಪಾಲಿನ ಬಗ್ಗೆ ಮಾತನಾಡುವಾಗ ಅವರು ಈ ಸುಳಿವನ್ನು ನೀಡಿದ್ದಾರೆ.
ಸ್ವಾತಂತ್ರ್ಯ ಬಳಿಕ ರಾಜಾ ಹರಿಸಿಂಗ್ ಭಾರತದ ಒಕ್ಕೂಟ ಸೇರಿದ ಬಳಿಕ ಕಾಶ್ಮೀರಕ್ಕೆ ಸಂವಿಧಾನದ 370ನೇ ಪರಿಚ್ಛೇದದಡಿ ವಿಶೇಷ ಸ್ಥಾನಮಾನ ಕಲ್ಪಿಸಲಾಗಿತ್ತು. ಇದನ್ನು 2019ರ ಅಕ್ಟೋಬರ್ 31 ರಂದು ರದ್ದು ಮಾಡಿ, ಜಮ್ಮು ಕಾಶ್ಮೀರ ಹಾಗೂ ಲಡಾಖ್ ಎಂದು ಎರಡು ಭಾಗ ಮಾಡಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲಾಗಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.