ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಲಸಿಕೆ ಕೊರತೆ: ಹಲವು ರಾಜ್ಯಗಳಲ್ಲಿ ಅಭಿಯಾನ ವಿಳಂಬ

Last Updated 30 ಏಪ್ರಿಲ್ 2021, 10:47 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್–19 ಲಸಿಕೆ ಕೊರತೆ ಉಂಟಾಗಿದೆ ಎಂದು ಹಲವು ರಾಜ್ಯಗಳ ಅಧಿಕಾರಿಗಳು ತಿಳಿಸಿದ್ದಾರೆ.

ದೇಶದಾದ್ಯಂತ 18ರಿಂದ 45 ವರ್ಷ ವಯಸ್ಸಿನವರಿಗೆ ಲಸಿಕೆ ನೀಡಿಕೆ ಅಭಿಯಾನ ಆರಂಭಗೊಳ್ಳುವ ಒಂದು ದಿನ ಮೊದಲೇ ಈ ವಿಷಯ ಬಹಿರಂಗವಾಗಿದೆ.

ಭಾರತವು ವಿಶ್ವದಲ್ಲೇ ಅತಿದೊಡ್ಡ ಲಸಿಕೆ ಉತ್ಪಾದಕ ದೇಶವಾಗಿದೆ. ಆದರೂ ಸಾಕಷ್ಟು ಲಸಿಕೆ ದಾಸ್ತಾನು ಇಲ್ಲ. ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಆದರೆ ಲಸಿಕೆ ಲಭ್ಯತೆ ಕಡಿಮೆ ಎನ್ನಲಾಗಿದೆ.

ಜನವರಿಯಿಂದೀಚೆಗೆ ದೇಶದ ಶೇ 9ರಷ್ಟು ಮಂದಿಗೆ ಲಸಿಕೆ ನೀಡಲಾಗಿದೆ.

‘ಲಸಿಕೆ ಹಾಕಿಸಿಕೊಳ್ಳುವುದಕ್ಕಾಗಿ 28 ದಿನಗಳ ಹಿಂದೆ ನೋಂದಣಿ ಮಾಡಿಸಿಕೊಂಡಿದ್ದೆ. ಆದರೆ ಈಗ ಲಸಿಕೆ ಇಲ್ಲವೆನ್ನುತ್ತಿದ್ದಾರೆ’ ಎಂದು ಜಸ್ಮಿನ್ ಓಝಾ ಎನ್ನುವವರು ವಿಡಿಯೊ ಟ್ವೀಟ್ ಮಾಡಿದ್ದಾರೆ.

ಹೆಚ್ಚು ಅಪಾಯದಲ್ಲಿರುವ ವರ್ಗದ 30 ಕೋಟಿ ಜನರಿಗೆ ಆಗಸ್ಟ್ ಒಳಗೆ ಲಸಿಕೆ ಹಾಕಿಸಲು ಸರ್ಕಾರ ಆರಂಭದಲ್ಲಿ ಗುರಿ ನಿಗದಿಪಡಿಸಿತ್ತು. ಆದರೆ ಕೋವಿಡ್ ಪ್ರಕರಣಗಳ ಸಂಖ್ಯೆ ವಿಪರೀತ ಹೆಚ್ಚಾಗಿದ್ದರಿಂದ ಈ ಗುರಿಯನ್ನು ವಿಸ್ತರಿಸಿತ್ತು.

ಈ ಮಧ್ಯೆ, ದೇಶದ ಎರಡು ಲಸಿಕೆ ಉತ್ಪಾದನಾ ಕೇಂದ್ರಗಳು ಸದ್ಯ ತಿಂಗಳಿಗೆ 8 ಕೋಟಿ ಲಸಿಕೆ ಉತ್ಪಾದಿಸುತ್ತಿವೆ. ಕಚ್ಚಾವಸ್ತು ಲಭ್ಯತೆ ಕೊರತೆ ಮತ್ತು ಸೀರಂ ಇನ್‌ಸ್ಟಿಟ್ಯೂಟ್‌ನ ಘಟಕದಲ್ಲಿ ಬೆಂಕಿ ದುರಂತ ಸಂಭವಿಸಿದ್ದರಿಂದ ಉತ್ಪಾದನೆ ಹೆಚ್ಚಿಸುವುದು ಸಾಧ್ಯವಾಗುತ್ತಿಲ್ಲ.

ಲಸಿಕೆ ಕೊರತೆಯ ಕಾರಣ ಮುಂಬೈಯ ಲಸಿಕೆ ಕೇಂದ್ರಗಳನ್ನು ಮೂರು ದಿನಗಳ ಕಾಲ ಮುಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲಸಿಕೆ ಲಭ್ಯತೆ ಇಲ್ಲದಿರುವುದರಿಂದ ಮೇ 1ರಿಂದಲೇ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಿಕೆ ಆರಂಭಿಸುವುದಿಲ್ಲ ಎಂದು ಕರ್ನಾಟಕವೂ ಹೇಳಿದೆ.

ಈ ಮಧ್ಯೆ,‘ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದು ಕೋಟಿಕ್ಕಿಂತ ಹೆಚ್ಚುಲಸಿಕೆಯ ಡೋಸ್‌ಗಳು ಲಭ್ಯವಿದೆ. ಜತೆಗೆ ಮೂರು ದಿನಗಳೊಳಗೆ ಹೆಚ್ಚುವರಿಯಾಗಿ 20 ಲಕ್ಷಗಳಷ್ಟುಡೋಸ್‌ಗಳನ್ನು ರಾಜ್ಯಗಳಿಗೆ ನೀಡಲಾಗುವುದು’ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ದೇಶದಲ್ಲಿ ದಿನೇ ದಿನೇ ಗರಿಷ್ಠ ಪ್ರಮಾಣದಲ್ಲಿ ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ. ಶುಕ್ರವಾರ 3,86,452 ಹೊಸ ಪ್ರಕರಣಗಳು ದೃಢಪಟ್ಟಿದ್ದು, 3,498 ಮಂದಿ ಮೃತಪಟ್ಟಿದ್ದಾರೆ.

ದೇಶದಲ್ಲಿ ಅಧಿಕೃತ ಅಂಕಿ–ಸಂಖ್ಯೆಗಿಂತಲೂ ಐದರಿಂದ ಹತ್ತುಪಟ್ಟು ಹೆಚ್ಚು ಮಂದಿಗೆ ಕೋವಿಡ್ ಸೋಂಕು ತಗುಲಿರುವ ಸಾಧ್ಯತೆ ಇದೆ ಎಂದು ವೈದ್ಯಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT