ಬುಧವಾರ, ನವೆಂಬರ್ 25, 2020
21 °C
ಉಪಗ್ರಹದ ನೆರವಿನಿಂದ ಗ್ರಾಮೀಣ ಪ್ರದೇಶಗಳ ವಾತಾವರಣ ಅಧ್ಯಯನ

ಗಾಳಿಯ ಗುಣಮಟ್ಟ: ಗ್ರಾಮಗಳಲ್ಲೂ ಕಳಪೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ನಗರ ಪ್ರದೇಶಗಳಲ್ಲಿಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿದಿದೆ. ದೀಪಾವಳಿಯ ಸಂದರ್ಭದಲ್ಲಿಯಂತು ಗಾಳಿ ವಿಷಕಾರಿ ಆಗಿಬಿಡುತ್ತದೆ. ನಗರ ಪ್ರದೇಶಗಳಲ್ಲಿ ಮಾತ್ರವಲ್ಲ, ಗ್ರಾಮೀಣ ಪ್ರದೇಶಗಳಲ್ಲಿಯೂ ಗಾಳಿಯ ಗುಣಮಟ್ಟ ಉತ್ತಮವಾಗಿ ಇಲ್ಲ ಎಂದು ಅಧ್ಯಯನವೊಂದು ಹೇಳಿದೆ.

ಮುಂಬೈನ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (ಐಐಟಿ) ಮತ್ತು ಕೊಲರಾಡೊ ಸ್ಟೇಟ್‌ ಯುನಿವರ್ಸಿಟಿ ಜಂಟಿಯಾಗಿ ನಡೆಸಿದ ಅಧ್ಯಯನದಲ್ಲಿ ಈ ವಿಚಾರ ತಿಳಿದು ಬಂದಿದೆ. ಉಪಗ್ರಹದ ನೆರವಿನಿಂದ ಗ್ರಾಮೀಣ ಪ್ರದೇಶಗಳ ವಾತಾವರಣದಲ್ಲಿ ಇರುವ 2.5 ಮೈಕ್ರಾನ್‌ ಗಾತ್ರದ ಮಾಲಿನ್ಯಕಾರಕ ಕಣಗಳನ್ನು ಅಂದಾಜಿಸಲಾಗಿದೆ. ನಗರ ಮತ್ತು ಗ್ರಾಮೀಣ ಪ‍್ರದೇಶದ ಗಾಳಿಯ ಗುಣಮಟ್ಟದಲ್ಲಿ ಹೆಚ್ಚಿನ ವ್ಯತ್ಯಾಸ ಇಲ್ಲ ಎಂದು ಅಧ್ಯಯನವು ಹೇಳಿದೆ.

ಭಾರತದ ಆರು ವಲಯಗಳಲ್ಲಿ ಉಪಗ್ರಹದಿಂದ ಪಡೆದ ದತ್ತಾಂಶಗಳ ಆಧಾರದಲ್ಲಿ ಗಾಳಿಯ ಗುಣಮಟ್ಟದ ಮೇಲೆ ನಿಗಾ ಇರಿಸಲಾಗಿತ್ತು. ಗಂಗಾ ಬಯಲು ಪ್ರದೇಶವು ದೇಶದಲ್ಲಿಯೇ ಅತಿ ಹೆಚ್ಚು ವಾಯುಮಾಲಿನ್ಯ ಹೊಂದಿದ ಪ್ರದೇಶ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ. ಗಂಗಾ ಬಯಲಿನ ಪ್ರತಿ ಕ್ಯುಬಿಕ್‌ ಮೀಟರ್‌ ಪ್ರದೇಶದಲ್ಲಿ 2.5 ಪಿ.ಎಂ. ಕಣಗಳು 100 ಮೈಕ್ರೊ ಗ್ರಾಂಗಿಂತ ಹೆಚ್ಚು ಇವೆ. 

ಇತರ ಐದು ವಲಯಗಳಲ್ಲಿ ಅಪಾಯಕಾರಿ ಕಣಗಳ ಪ್ರಮಾಣವು 55–90 ಮೈಕ್ರೊಗ್ರಾಂಗಳಷ್ಟು ಇದೆ. ಪೂರ್ವ ಮತ್ತು ದಕ್ಷಿಣ ಭಾರತದಲ್ಲಿ ನಗರ ಮತ್ತು ಗ್ರಾಮೀಣ ‍ಪ್ರದೇಶಗಳ ನಡುವೆ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ದಕ್ಷಿಣ ಭಾರತದ ನಗರ ಪ್ರದೇಶಗಳಲ್ಲಿ 2.5 ಗಾತ್ರದ ಪಿ.ಎಂ. ಕಣಗಳ ಪ್ರಮಾಣವು 30–50 ಮೈಕ್ರೊ ಗ್ರಾಂಗಳಷ್ಟಿದ್ದರೆ ನಗರ ಪ್ರದೇಶದಲ್ಲಿ ಇದು ಸರಾಸರಿ 50 ಮೈಕ್ರೊ ಗ್ರಾಂನಷ್ಟಿದೆ. 

ನಿಗದಿತ ಗುಣಮಟ್ಟದ ಪ್ರಕಾರ, ಪಿ.ಎಂ. 2.5 ಕಣಗಳ 40 ಮೈಕ್ರೊ ಗ್ರಾಂಗಿಂತ ಹೆಚ್ಚು ಇರಬಾರದು. ಆದರೆ, ಭಾರತದ ಎಲ್ಲ ಆರು ವಲಯಗಳಲ್ಲಿಯೂ ಅದು ನಿಗದಿತ ಪ್ರಮಾಣಕ್ಕಿಂತ ಹೆಚ್ಚಿದೆ ಎಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ. 

****

ಭಾರಿ ಅಪಾಯ

ಕಲುಷಿತ ಗಾಳಿಯಿಂದಾಗಿ ದೇಶದಲ್ಲಿ ಪ್ರತಿ ವರ್ಷ 10.5 ಲಕ್ಷ ಜನರು ಸಾಯುತ್ತಿದ್ದಾರೆ. ಗಾಳಿಯ ಕಳಪೆ ಗುಣಮಟ್ಟದಿಂದಾಗಿ ಜನರಲ್ಲಿ ಹೃದಯ ಮತ್ತು ಶ್ವಾಸಕೋಶದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಶೇ 69ರಷ್ಟು ಸಾವು ಗ್ರಾಮೀಣ ಪ್ರದೇಶಗಳಲ್ಲಿಯೇ ವರದಿ ಆಗುತ್ತಿದೆ. ಅಂದರೆ, ಗ್ರಾಮೀಣ ಪ್ರದೇಶದಲ್ಲಿ ಪ್ರತಿ ವರ್ಷ ಏಳು ಲಕ್ಷ ಜನರು ಸಾಯುತ್ತಿದ್ದಾರೆ ಎಂದು ಸಂಶೋಧಕರು ತಿಳಿಸಿದ್ದಾರೆ. 

ಗಾಳಿಯ ಗುಣಮಟ್ಟವು ನಗರಗಳಲ್ಲಿ ಮಾತ್ರ ಕಳಪೆ ಆಗಿದೆ ಎಂಬ ಗ್ರಹಿಕೆ ಇದೆ. ಹಾಗಾಗಿ, ಗ್ರಾಮೀಣ ಪ್ರದೇಶದ ಜನರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ಯಾರೂ ತೋರುತ್ತಿಲ್ಲ. 

ಕಾರಣ ಏನು?: ಅಡುಗೆಗಾಗಿ ಒಲೆ ಉರಿಸಲು ಸೌದೆ, ಬೆರಣಿ ಮತ್ತು ಇತರ ವಸ್ತುಗಳ ಬಳಕೆಯು ಗ್ರಾಮೀಣ ಪ್ರದೇಶದಲ್ಲಿ ಮಾಲಿನ್ಯ ಹೆಚ್ಚಲು ಕಾರಣ. ನಗರಗಳಲ್ಲಿ ವಾಹನಗಳಿಂದ ಆಗುವ ಮಾಲಿನ್ಯ ಮತ್ತು ಕೈಗಾರಿಕಾ ಮಾಲಿನ್ಯದ ಬಗ್ಗೆ ಗಮನ ಕೇಂದ್ರೀಕೃತವಾಗಿದೆ. ಅಡುಗೆ ಒಲೆಯ ಮಾಲಿನ್ಯದ ಬಗ್ಗೆ ಹೆಚ್ಚು ಗಮನ ಹರಿದಿಲ್ಲ. 

*************

ಗಾಳಿಯ ಗುಣಮಟ್ಟವನ್ನು ತಿಳಿದುಕೊಳ್ಳುವಲ್ಲಿ ಇರುವ ಬಹುದೊಡ್ಡ ಸವಾಲು ಎಂದರೆ, ಗುಣಮಟ್ಟದ ಮೇಲೆ ನಿಗಾ ಇರಿಸುವ ವ್ಯವಸ್ಥೆಯೇ ನಮ್ಮಲ್ಲಿ ಇಲ್ಲ
-ಎ. ಆರ್‌.ರವಿಶಂಕರ, ಐಐಟಿ ಮುಂಬೈ ಅಧ್ಯಯನ ತಂಡದ ಸದಸ್ಯ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು